ಒಟ್ಟಾಗಿ ಕೆಲಸ ಮಾಡಿದಾಗ ಸರ್ಕಾರದ ಯೋಜನೆ ಜನರ ಮನೆ ಬಾಗಿಲಿಗೆ : ತಮ್ಮಯ್ಯ

KannadaprabhaNewsNetwork | Published : Apr 10, 2025 1:01 AM

ಸಾರಾಂಶ

ಚಿಕ್ಕಮಗಳೂರು, ಕಾರ್ಯಾಂಗ, ಶಾಸಕಾಂಗ ಒಟ್ಟಾಗಿ ಸಮರ್ಪಕ ಕೆಲಸ ಮಾಡಿದಾಗ ಮಾತ್ರ ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸಾಧ್ಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಚಿಕ್ಕದೇವನೂರಿನಲ್ಲಿ ಜನಸಂಪರ್ಕ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾರ್ಯಾಂಗ, ಶಾಸಕಾಂಗ ಒಟ್ಟಾಗಿ ಸಮರ್ಪಕ ಕೆಲಸ ಮಾಡಿದಾಗ ಮಾತ್ರ ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸಾಧ್ಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಚಿಕ್ಕದೇವನೂರಿನಲ್ಲಿ ನಡೆದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜನಸಂಪರ್ಕ ಸಭೆಗಳ ಉಪಯೋಗವನ್ನು ಕ್ಷೇತ್ರದ ಜನರು ಪಡೆಯಬೇಕು. ತಮ್ಮ ಸಮಸ್ಯೆಗಳಿಗಾಗಿ ವಿವಿಧ ಇಲಾಖೆ ಗಳಿಗೆ ಅಲೆದಾಡುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖಾಧಿಕಾರಿಗಳನ್ನು ತಮ್ಮ ಗ್ರಾಮಕ್ಕೆ ಕರೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ಆಡಳಿತ ವ್ಯವಸ್ಥೆಯನ್ನು ಜನರಿರುವ ಕಡೆಗೆ ತೆಗೆದುಕೊಂಡು ಹೋಗಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.ಮೊದಲಿಗೆ ರಾಜ್ಯ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಲಾಗುತ್ತಿತ್ತು. ನಂತರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ತಾಲೂಕು ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಬೆಳಕು ಚೆಲ್ಲುವಂತೆ ಸೂಚನೆ ನೀಡಿದ್ದಾರೆಂದು ಹೇಳಿದರು. ನಂತರ ಶಾಸಕರ ನೇತೃತ್ವದಲ್ಲಿ ಜಿಲ್ಲಾ, ತಾಲೂಕು ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಬೇಕೆಂಬ ಆದೇಶದಂತೆ ಈಗಾಗಲೇ ಹಲವಾರು ಸಭೆಗಳನ್ನು ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಇದರ ಮುಂದುವರಿದ ಭಾಗವಾಗಿ ಹೋಬಳಿ, ಗ್ರಾ.ಪಂ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಸರ್ಕಾರದ ಸೌಲಭ್ಯಗಳಾದ 5 ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪದಿದ್ದರೆ ಅಂತಹ ಸಮಸ್ಯೆಗಳನ್ನು ಚುಟುಕಾಗಿ ಅಧಿಕಾರಿಗಳ ಗಮನಕ್ಕೆ ತಂದರೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.ಸಖರಾಯಪಟ್ಟಣ ಹೋಬಳಿಗೆ ಲೋಕೋಪಯೋಗಿ ಇಲಾಖೆಯಿಂದ ₹25.5 ಕೋಟಿ ಅನುದಾನ ಮಂಜೂರು ಮಾಡಿದ್ದೇವೆ, ಕ್ಷೇತ್ರದ ಮೂರು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮುದಾಯ ಭವನ, ದೇವಾಲಯಗಳಿಗೆ ₹4 ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳಿದರು.ಚುನಾವಣಾ ಪೂರ್ವದಲ್ಲಿ ಈ ಭಾಗದ ಜನರು, ರೈತರು ಕೆರೆ ತುಂಬಿಸುವ ಯೋಜನೆ ಜಾರಿ ಮಾಡಬೇಕೆಂದು ಮನವಿ ಸಲ್ಲಿಸಿ ದ್ದನ್ನು ಮನಗಂಡು ಎತ್ತಿನ ಹೊಳೆ ಯೋಜನೆ ಮೂಲಕ ಕೆರೆ ತುಂಬಿಸಿದ್ದು, ಈಗಾಗಲೇ ಬೆಳವಾಡಿ, ದೇವನೂರು ಕೆರೆ ಭರ್ತಿ ಯಾಗಿದೆ ಎಂದರು.₹400 ಕೋಟಿ ವೆಚ್ಚದ ಭದ್ರಾ ಉಪ ಕಣಿವೆ ಯೋಜನೆಯಡಿ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಸದ್ಯದಲ್ಲೇ ಆರಂಭ ವಾಗಲಿದೆ. ದೇವನೂರು ಕೆರೆ ಭರ್ತಿಯಾಗಿರುವುದರಿಂದ ಈ ಮೂರು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಿ ರೈತರ ಬದುಕು ಹಸನಾಗಿದೆ ಎಂದು ಹೇಳಿದರು.

ಕಡೂರು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪ್ರವೀಣ್ ಮಾತನಾಡಿ, ಸಖರಾಯಪಟ್ಟಣ ಹೋಬಳಿ ಮಟ್ಟದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಬಂದಂತ ಅರ್ಜಿಗಳನ್ನು ಇಲಾಖೆವಾರು ತಾಲೂಕು ಮಟ್ಟದ ಅಧಿಕಾರಿಗಳು ವಿಂಗಡಣೆ ಮಾಡಿ ಶಾಸಕರ ಸೂಚನೆ ಮೇರೆಗೆ ನಿಗಧಿತ ಕಾಲಾವಧಿಯಲ್ಲಿ ಇತ್ಯರ್ಥ ಪಡಿಸಲಾಗಿದೆ ಎಂದರು.

ನಾಗರಿಕರು ತಮ್ಮ ಮೂಲಭೂತ ಸಮಸ್ಯೆಗಳ ಬಗ್ಗೆ ಪಂಚಾಯಿತಿ ಹಂತದಲ್ಲಿ ಪರಿಹರಿಸಲು ಪ್ರತೀ ಪಂಚಾಯಿತಿಯಲ್ಲಿ ತಿಂಗಳ ಮೊದಲ ಶನಿವಾರ ’ಪಂಚಾಯಿತಿ ಕಟ್ಟೆ’ ಎಂಬ ನೂತನ ಕಾರ್ಯಕ್ರಮ ಆಯೋಜಿಸಿದ್ದು, ಈ ಮೂಲಕ ತಮ್ಮ ಸಮಸ್ಯೆ ಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು ಹೇಳಿದರು.ಸಭೆಯಲ್ಲಿ ನಾಗರಾಳು ಪಂಚಾಯಿತಿ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ಅಶೋಕ್, ದೇವನೂರು ಗ್ರಾ.ಪಂ ಅಧ್ಯಕ್ಷೆ ದೀಪಾ ದಕ್ಷಿಣ ಮೂರ್ತಿ, ಉಪಾಧ್ಯಕ್ಷ ರವಿಕುಮಾರ್, ಚಿಕ್ಕದೇವನೂರು ಗ್ರಾಪಂ ಅಧ್ಯಕ್ಷೆ ವಸಂತ, ಉಪಾಧ್ಯಕ್ಷೆ ರಂಗಮ್ಮ, ಸದಸ್ಯರಾದ ಚಂದ್ರಶೇಖರ್, ಕಿರಣ್, ಲೋಹಿತ್, ಸುಲೋಚನ, ಶೋಭ, ಸರಸ್ವತಿ, ಚೇತನ್, ಬಸವರಾಜ್, ಶಶಿಧರ್, ಆನಂದ್, ಷಣ್ಮುಖಪ್ಪ, ಮಂಜುನಾಥ್, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮೋಹನ್ ನಾಯಕ್, ಕಡೂರು ತಹಸೀಲ್ದಾರ್ ಪೂರ್ಣಿಮಾ ಉಪಸ್ಥಿತರಿದ್ದರು. 9 ಕೆಸಿಕೆಎಂ 1

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಚಿಕ್ಕದೇವನೂರು ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು.

Share this article