ಬೆಲೆ ಏರಿಕೆಯಿಂದ ಜನರಿಗೆ ಹೊರೆ ಆಗಿಲ್ಲ: ಸಚಿವ ಪರಂ

KannadaprabhaNewsNetwork | Published : Apr 10, 2025 1:01 AM

ಸಾರಾಂಶ

ಬೆಲೆ ಏರಿಕೆ ಜನಸಾಮಾನ್ಯರಿಗೆ ಹೊರೆಯಾಗಿಲ್ಲ. ಅವರೆಲ್ಲರೂ ಖುಷಿಯಾಗಿಯೇ ಇದ್ದಾರೆ. ಕಾಂಗ್ರೆಸ್ ಆಡಳಿತದ ಬಗ್ಗೆ ಬಿಜೆಪಿಗೆ ಆಕ್ರೋಶವಿದೆಯೇ ಹೊರತು ಜನಾಕ್ರೋಶವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ

ಕನ್ನಡಪ್ರಭ ವಾರ್ತೆ ಮಂಡ್ಯ

ಬೆಲೆ ಏರಿಕೆ ಜನಸಾಮಾನ್ಯರಿಗೆ ಹೊರೆಯಾಗಿಲ್ಲ. ಅವರೆಲ್ಲರೂ ಖುಷಿಯಾಗಿಯೇ ಇದ್ದಾರೆ. ಕಾಂಗ್ರೆಸ್ ಆಡಳಿತದ ಬಗ್ಗೆ ಬಿಜೆಪಿಗೆ ಆಕ್ರೋಶವಿದೆಯೇ ಹೊರತು ಜನಾಕ್ರೋಶವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಜನರು ಸಂತಸದಿಂದ ಇದ್ದಾರೆ. ಸಿದ್ದರಾಮಯ್ಯ ಸಮತೋಲನ ಬಜೆಟ್ ನೀಡಿದ್ದರಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಿದೆ. ಮಹಾರಾಷ್ಟ್ರ, ಗುಜರಾತ್ ನಂತರ ಕರ್ನಾಟಕ, ಬಂಡವಾಳ ಹೂಡಿಕೆಯಲ್ಲಿ ರಾಷ್ಟ್ರದ ಗಮನ ಸೆಳೆದಿದೆ. ಜಿಎಸ್‌ಟಿ ಪಾವತಿಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆ ಯಶಸ್ವಿ ಅನುಷ್ಠಾನ ಕಂಡು ಬಿಜೆಪಿ-ಜೆಡಿಎಸ್‌ನವರಿಗೆ ಸಹಿಸಲಾಗುತ್ತಿಲ್ಲ. ಜನರ ದಿಕ್ಕು ತಪ್ಪಿಸಲು ಹೋರಾಟ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಬಜೆಟ್ ಗಾತ್ರ ಹೆಚ್ಚಿದಂತೆ ತೆರಿಗೆ ಹೆಚ್ಚಿಸುವುದು ಸಹಜ ಪ್ರಕ್ರಿಯೆ. ಕಳೆದ ವರ್ಷ ರಾಜ್ಯ ಬಜೆಟ್‌ನ ಗಾತ್ರ ೩.೭೧ಲಕ್ಷ ಕೋಟಿ ರು. ಇತ್ತು. ಈ ವರ್ಷ ೪.೯ ಲಕ್ಷ ಕೋಟಿ ರು.ಗೆ ಹೆಚ್ಚಳವಾಗಿದೆ. ಬಜೆಟ್‌ನ ಗಾತ್ರ ಶೇ.೩೦ರಷ್ಟು ಹೆಚ್ಚಳವಾಗಿರುವುದರಿಂದ ತೆರಿಗೆ ವಿಧಿಸುವುದಕ್ಕೆ ಅವಕಾಶವಿದೆ. ಅದರಂತೆ ಬೆಲೆ ಏರಿಕೆ ಮಾಡಿದ್ದೇವೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.ಬಿಜೆಪಿ-ಜೆಡಿಎಸ್ ಪ್ರತಿಭಟನೆ ಮಾಡುವುದು ವಿಪರ್ಯಾಸ. ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್, ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಮಾಡಿದ್ದು ಬಿಜೆಪಿಯವರಿಗೆ ಕಾಣುವುದಿಲ್ಲವೆ ಎಂದ ಅವರು, ಕೇಂದ್ರ ಸರ್ಕಾರ ನಮಗೆ ತೆರಿಗೆ ಹಣದಲ್ಲಿ ನಿರೀಕ್ಷಿತ ಪಾಲು ಕೊಡಲಿಲ್ಲ. ಭದ್ರಾ ಯೋಜನೆಗೆ ೫೩೦೦ ಕೋಟಿ ರು. ನೀಡಿಲ್ಲ.. ೨೦ ಸಾವಿರ ಕೋಟಿ ರು. ಜಿಎಸ್‌ಟಿ ಹಣದಲ್ಲಿ ೩ ರಿಂದ ೪ ಸಾವಿರ ಕೋಟಿ ರು. ಮಾತ್ರ ಕೊಟ್ಟರು. ಹೀಗಾಗಿ ಜನರಿಂದ ತೆರಿಗೆ ಹಣ ತೆಗೆಯಲು ಮುಂದಾಗಿದ್ದೇವೆ ಎಂದರು.

Share this article