ಹುಬ್ಬಳ್ಳಿ:
ಇಲ್ಲಿನ ಹಳೇಕೋರ್ಟ್ ಬಳಿಯ ಸಾಯಿಮಂದಿರದ ಎದುರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ ಶ್ರೀರಾಮಸೇನೆ ಪದಾಧಿಕಾರಿಗಳು, ಜಯಘೋಷಣೆ ಕೂಗಿದರು ಅಲ್ಲದೇ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್, ಸಾಯಿ ಮಂದಿರ ಆಡಳಿತ ವ್ಯವಸ್ಥೆ ಬಗ್ಗೆ ಕಳೆದ 4 ತಿಂಗಳಿಂದ ಶ್ರೀರಾಮಸೇನೆ, ಸಾಯಿಭಕ್ತರು, ಸಾಯಿ ಮಂದಿರ ಸಂರಕ್ಷಣಾ ಮಂಡಳಿ ನಿರಂತರ ಹೋರಾಟ ನಡೆಸಲಾಗುತ್ತಿದೆ. ಅದರ ಪ್ರತಿಫಲವಾಗಿ ಅವ್ಯವಹಾರದ ತನಿಖೆಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇಮಕಗೊಳಿಸಲಾಗಿದೆ. ಅಲ್ಲದೇ, 60 ದಿನದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.ಮಂದಿರದಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಸಂಘಟನೆಯೂ ಉಲ್ಲೇಖಿಸಿದ ಅಂಶಗಳನ್ನು ಕಮಿಟಿ ಎದುರು ಮರೆಮಾಚುವ ಕೆಲಸವನ್ನು ಜಿಲ್ಲಾ ನೋಂದಾಣಾಧಿಕಾರಿ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾ ನೋಂದಣಾಧಿಕಾರಿಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಶೀಘ್ರವೇ ಮನವಿ ಸಲ್ಲಿಸಲಾಗುವುದು. ಇನ್ನೂ ಮಂದಿರದ ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿ ಎಲ್ಲ ಸದಸ್ಯರಿಗೆ ನೈತಿಕತೆ ಇದ್ದರೆ, ತನಿಖೆ ಮುಗಿಯುವವರೆಗೂ ರಾಜೀನಾಮೆ ಸಲ್ಲಿಸಬೇಕು. ಅಲ್ಲದೇ, ಪೂಜೆ-ಪುನಸ್ಕಾರ, ಪ್ರಸಾದ ವಿತರಣೆ ಹೊರತುಪಡಿಸಿ ಯಾವುದೇ ಹಣಕಾಸಿನ ವಹಿವಾಟು ನಡೆಸಬಾರದು ಎಂದು ಒತ್ತಾಯಿಸಿದರು.ಡಾ. ಮೋಹನಕುಮಾರ, ಅಣ್ಣಪ್ಪ ದಿವಟಗಿ, ಮಹಾಂತೇಶ ಕಂಬಳಿ, ಗುಣವರ ದಡೋತಿ, ಬಸವರಾಜ ಗೌಡರ ಸೇರಿದಂತೆ ಅನೇಕರಿದ್ದರು.