ಕನ್ನಡಪ್ರಭ ವಾರ್ತೆ ಕಲಬುರಗಿ/ಕಮಲಾಪುರ
ಮಹಾಗಾಂವದ ಯುವಕನ ಆತ್ಮಹತ್ಯೆ, ಕೋಟನೂರು (ಡಿ) ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕಲಬುರಗಿಯಲ್ಲಿ, ರಾಜ್ಯದ ತಾಲಿಬಾನಿ ಸಂಸ್ಕೃತಿಯ ಸರಕಾರವೇ ಇದಕ್ಕೆಲ್ಲ ನೇರ ಹೊಣೆ ಎಂದು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ತೀವ್ರ ಆರೋಪ ಮಾಡಿದ್ದಾರೆ.ಕಮಲಾಪುರ ತಾಲೂಕಿನ ಮಹಾಗಾಂವ ಸಮೀಪದ ಲಾಡ್ ಮುಗಳಿಯಲ್ಲಿ ಜಾತ್ರೆಯ ಸಂದರ್ಭದಲ್ಲಿ ಯುವಕರ ಮಧ್ಯೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ನಿಖಿಲ್ ಸೇರಿದಂತೆ 14 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಮೊಕದ್ದಮೆ ದಾಖಲಿಸಲಾಗಿತ್ತು. ಪೊಲೀಸರು ಇವರೆಲ್ಲರನ್ನು ಠಾಣೆಗೆ ಕರೆಸಿ ಸೌಹಾರ್ದ ಮಾತುಕತೆ ನಡೆಸಿ ಶಾಂತಿ ಕಾಪಾಡಲು ಪ್ರಯತ್ನಿಸಿದ್ದರು.
ನಿಖಿಲ್ ಕೈಯಿಂದ ಒಂದು ಲಕ್ಷ ಇಪ್ಪತ್ತು ಸಾವಿರ ರುಪಾಯಿ ಪಡೆದು ರಾಜಿ ಮಾತುಕತೆ ಮಾಡುವುದಾಗಿ ಯುವಕರು ಒಪ್ಪಿಕೊಂಡಿದ್ದರು. ಮರುದಿನ ಹಣದೊಂದಿಗೆ ಠಾಣೆಯಲ್ಲಿ ಕಾದರೂ ಬರದೆ ಇದ್ದಾಗ ಮನೆಗೆ ವಾಪಸಾದ ನಿಖಿಲ್‌ಗೆ ಜೀವ ಬೆದರಿಕೆ ಒಡ್ಡಿದ ಪರಿಣಾಮವಾಗಿ ಭಯದಿಂದ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗ್ರಾಮಸ್ಥರು ದೂರಿದ್ದಾರೆಂದು ಜಾಧವ್ ಆರೋಪಿಸಿದ್ದಾರೆ.ಶವ ಪರೀಕ್ಷೆಗೆ ಕಲಬುರ್ಗಿಗೆ ತರದೆ ಪೊಲೀಸ್ ಬಲ ಬಳಸಿ ತಡೆಯಲಾಗಿತ್ತು. ಇದು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕೈವಾಡದಿಂದ ಈ ಎಲ್ಲಾ ಘಟನೆ ನಡಿದಿದೆ ಎಂಬ ಸಂಶಯ ಮೂಡುತ್ತಿದೆ ಎಂದು ಜಾಧವ್ ನೇರ ಆರೋಪ ಮಾಡಿದ್ದಾರೆ.
ಜಿಲ್ಲೆಯಲ್ಲಿ ಇತ್ತೀಚಿನ ಘಟನೆಗಳನ್ನು ಗಮನಿಸಿದಾಗ ತಾಲಿಬಾನ್ ಕೃತ್ಯ ಭಾಸವಾಗುತ್ತಿದೆ. ಅಮಾಯಕ ಮಹಿಳೆಯರ ಮತ್ತು ಮಕ್ಕಳು, ವಿಪಕ್ಷದ ಕಾರ್ಯಕರ್ತರು ಸಾಮಾನ್ಯ ನಾಗರಿಕರ ಮೇಲೆ ಮನೆಗೆ ನುಗ್ಗಿ ಹಲ್ಲೆ, ದಲಿತ ದೌರ್ಜನ್ಯ ಮೊಕದ್ದಮೆಗಳನ್ನು ಹೂಡಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ದೇಶದಲ್ಲಿ ಸಂವಿಧಾನ, ಕಾನೂನು, ಪೊಲೀಸ್ ವ್ಯವಸ್ಥೆ ಇದ್ದರೂ ಈ ರೀತಿಯಾಗಿ ಅಮಾನುಷ ಕೃತ್ಯಗಳನ್ನು ನಡೆಸುವ ಸಮಾಜದ್ರೋಹಿ ಶಕ್ತಿಗಳನ್ನು ಕಂಡಾಗ ರಾಜ್ಯದಲ್ಲೂ ತಾಲಿಬಾನಿಗಳ ಘಟನೆಗಳು ನೆನಪಾಗುತ್ತಿದೆ. ಪೊಲೀಸರು ಸರಕಾರದ ಕೈ ಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಜಾಧವ್ ಆರೋಪಿಸಿದರು.ಈ ಕುರಿತು ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು 14 ಜನರ ವಿರುದ್ಧ ವೃಥಾ ಆರೋಪ ಹೊರಿಸಿ ದಲಿತ ದೌರ್ಜನ್ಯ ಮೊಕದ್ದಮೆ ಎಫ್ಐ ಆರ್ ಹಾಕಿದ್ದನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕಲ್ಬುರ್ಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಕೋಟನೂರ್ (ಡಿ )ಯಲ್ಲಿ ಜ.23ರಂದು ನಡೆದ ಅಂಬೇಡ್ಕರ್ ಪ್ರತಿಮೆಗೆ ಅವಮಾನಿಸಿದ ಘಟನೆಯಲ್ಲಿ ಆರೋಪದಲ್ಲಿ ನಾಲ್ಕು ತಿಂಗಳ ಜೈಲುವಾಸ ಅನುಭವಿಸಿ ಜಾಮೀನು ಪಡೆದು ಹೊರಬಂದ ಲಿಂಗಾಯತ ವ್ಯಕ್ತಿಯ ಮೇಲೆ ಮೊನ್ನೆ ಸುಮಾರು 45ಕ್ಕೂ ಹೆಚ್ಚು ದಲಿತ ಯುವಕರು ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿ ಮಹಿಳೆಯರು ಮತ್ತು ಮಕ್ಕಳ ಸೇರಿದಂತೆ ಎಲ್ಲರ ಮೇಲೆ ಹಲ್ಲೆ ಮಾಡಿರುವ ಅಮಾನುಷ ಘಟನೆ, ರಟಕಲ್ ನಲ್ಲಿ ದಲಿತ ದೌರ್ಜನ್ಯ ಪ್ರಕರಣ ಹೀಗೆ ಜಿಲ್ಲೆಯಲ್ಲಿ ಅನೇಕ ಪ್ರಕರಣಗಳು ನಡೆಯುತ್ತಿದ್ದು ಸಾಮಾನ್ಯ ಜೀವನ ಕಷ್ಟವಾಗಿದ್ದು ಭಯದ ವಾತಾವರಣ ಸೃಷ್ಟಿಗೊಂಡಿದೆ ಎಂದರು.ನಿಖಿಲ್ ಶವ ಮಹಜರು ಪರೀಕ್ಷೆಗಾಗಿ ಕಲ್ಬುರ್ಗಿಗೆ ಸಾಗಿಸಲು ಗ್ರಾಮಸ್ಥರು ಪ್ರಯತ್ನಿಸಿದರೆ ಚುನಾವಣಾ ಕರ್ತವ್ಯಕ್ಕಾಗಿ ಆಗಮಿಸಿದ ನೂರಾರು ಸಂಖ್ಯೆಯ ಪೊಲೀಸರನ್ನು ಕರೆಸಿ ಲಾಡ್ ಮುಗಳಿ ಗ್ರಾಮದ ರಸ್ತೆಯಲ್ಲಿ ಸರ್ಪಗಾವಲು ಹಾಕಿ ತಡೆದು ನಿಲ್ಲಿಸಿದರು.
ಇದರಿಂದ ಉದ್ರಿಕ್ತಗೊಂಡ ಗ್ರಾಮಸ್ಥರು ಘೋಷಣೆಗಳನ್ನು ಕೂಗಿ ನ್ಯಾಯಕ್ಕಾಗಿ ಅಂಗಲಾಚಿದರು. ಶವ ಸಾಗಣೆಗೆ ಪುರುಷರಿಗೆ ಪೊಲೀಸರು ಅವಕಾಶ ನೀಡಿಲ್ಲ. ಅದಕ್ಕಾಗಿ ಮಹಿಳೆಯರೇ ಹೊತ್ತುಕೊಂಡು ಬಂದು ರಸ್ತೆಯಲ್ಲೇ ಇಟ್ಟು ಪ್ರತಿಭಟನೆ ನಡೆಸಿದರು. ಶವ ಮಹಜರು ಪರೀಕ್ಷೆಗಾಗಿ ಕಲ್ಬುರ್ಗಿಗೆ ಶವ ಸಾಗಿಸುವುದನ್ನು ತಡೆಯಬೇಕು ಅಳಂದದಲ್ಲಿ ನಡೆಸಲು ಮೇಲಾಧಿಕಾರಿಗಳು ಮತ್ತು ನಾಯಕರು ನೀಡಿದ ಸೂಚನೆಗೆ ಮೇರೆಗೆ ಒತ್ತಡಕ್ಕೆ ಮಣಿದ ಪೊಲೀಸರು ಕೊನೆಗೆ ಅಂಬಲಗಾದಲ್ಲಿ ಶವ ಮಹಾಜರು ಪರೀಕ್ಷೆ ನಡೆಸಿರುವುದು ಕೂಡ ರಾಜಕೀಯ ಪ್ರೇರಿತ ಎಂದು ಡಾ. ಜಾಧವ್ ಕಟುವಾಗಿ ಟೀಕಿಸಿದರು.ಎಸ್ಪಿಯವರ ಜೊತೆ ಬಿಜೆಪಿ ನಾಯಕರ ಚರ್ಚೆ: ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್, ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮುಡು ವಿಧಾನ ಪರಿಷತ್ ಸದಸ್ಯ ಶಶಿ ಜಿ ನಮೋಶಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಬಿಜೆಪಿ ನಗರ ಅಧ್ಯಕ್ಷರಾದ ಚಂದು ಪಾಟೀಲ್ ಮತ್ತು ಇತರ ನಾಯಕರು ಲಾಡ್ ಮುಗುಳಿ ಗ್ರಾಮಕ್ಕೆ ಧಾವಿಸಿ ಸಂತ್ರಸ್ತ ಕುಟುಂಬದ ಜೊತೆ ಚರ್ಚಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಿ ನ್ಯಾಯಕ್ಕಾಗಿ ನಿಮ್ಮ ಜೊತೆ ನಾವಿರುತ್ತೇವೆ ಎಂಬ ಭರವಸೆ ನೀಡಿದ ನಂತರ ಸ್ಥಳದಲ್ಲಿ ಎಸ್ಪಿ ಅಕ್ಷಯ್ ಹಾಕೆ ಅವರ ಜೊತೆ ಮಾತುಕತೆ ನಡೆಸಿ ಸರಕಾರದ ಪರವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿ ಎಂದು ನಾಯಕರು ಒಕ್ಕೂರಳಿನಿಂದ ಆಗ್ರಹಿಸಿದರಲ್ಲದೆ ತಕ್ಷಣ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪ್ರೇರಿತ ದೌರ್ಜನ್ಯ: ಬಸವರಾಜ್ ಮತ್ತಿಮಡುಕಲ್ಬುರ್ಗಿ ಗ್ರಾಮೀಣ ಸೇರಿದಂತೆ ಜಿಲ್ಲೆಯಲ್ಲಿ ಕಳೆದ 11 ತಿಂಗಳಿಂದ ವ್ಯಾಪಕವಾಗಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಶಾಸಕ ಬಸವರಾಜ್ ಮತ್ತಿಮುಡು ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ಮಾಡಿದರು.ಜಾತ್ರೆಯಲ್ಲಿ ನಡೆದ ಕ್ಷುಲ್ಲಕ ಮಾತಿನ ಚಕಮಕಿಯ ನಂತರ ದ್ವೇಷ ಸಾಧನೆಗಾಗಿ ಕುರುಬ ಸಮಾಜದ ಯುವಕರ ಮೇಲೆ ದಲಿತ ದೌರ್ಜನ್ಯ ಮೊಕದ್ದಮೆ ಹೂಡಿ ಭಯದ ವಾತಾವರಣ ಸೃಷ್ಟಿಯಾಗಿದೆ. ದೂರದೂರಿನಿಂದ ಬಂದು ಜಾತ್ರೆಗೆ ಸೇರುವ ಯುವಕರ ಮೇಲೆ ಈ ರೀತಿಯ ದೌರ್ಜನ್ಯ ಪ್ರಕರಣ ಹೂಡಿ ಸೌಹಾರ್ದವನ್ನು ಕೆಡಿಸುವ ಪ್ರಯತ್ನ ಖಂಡನೀಯ. ಮೃತ ನಿಖಿಲ್ ಕಾಶಿನಾಥ ಪೂಜಾರಿ ಅಮಾಯಕನಾಗಿದ್ದು ಜೀವ ಭಯ ಒಡ್ಡಿದ ಪರಿಣಾಮವಾಗಿ ನೇಣು ಹಾಕಿ ಕೊಂಡಿದ್ದಾನೆ. ಇತರ ಯುವಕರು ಈಗಾಗಲೇ ಜೀವ ಭಯದಿಂದ ಊರನ್ನೇ ಬಿಟ್ಟು ತೊಲಗಿದ್ದಾರೆಂದರು.
ಲಾಡ್ ಮುಗಳಿ ಯುವಕನ ಆತ್ಮಹತ್ಯೆ ಪ್ರಕರಣವನ್ನು ಕೂಲಂಕಶವಾಗಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ನೆಮ್ಮದಿಯ ಜೀವನ ಮಾಡಲು ವಾತಾವರಣ ಸೃಷ್ಟಿಸಬೇಕು ಎಂದು ಮತ್ತಿಮೂಡು ಪೊಲೀಸರಿಗೆ ಕಿವಿಮಾತು ಹೇಳಿದರು. ಇದೇ ರೀತಿಯಾಗಿ ದೌರ್ಜನ್ಯಗಳು ಮುಂದುವರಿದರೆ ಜನಾಕ್ರೋಶ ವನ್ನು ಸರಕಾರ ಎದುರಿಸಬೇಕಾಗಿದ್ದು ಎಂದು ಎಚ್ಚರಿಕೆ ನೀಡಿದರು.