ಕನ್ನಡಪ್ರಭ ವಾರ್ತೆ ಮೈಸೂರು
ತಮ್ಮ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ವಿಪತ್ತು ಪ್ರಾಧಿಕಾರ ಸಭೆ ನಡೆಸಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಎಲ್ಲಾ ತಹಸೀಲ್ದಾರ್ ಗಳು, ತಾಪಂ ಇಒಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರತಿದಿನ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದರು.
ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅನುದಾನದ ಕೊರತೆ ಇಲ್ಲ ಸಮರ್ಪಕ ಹಾಗೂ ಸಮನ್ವಯವಾಗಿ ಕಾರ್ಯ ನಿರ್ವಹಿಸಬೇಕು. ಖಾಸಗಿ ಬೋರ್ ವೆಲ್ ಗಳಲ್ಲಿ ನೀರು ವೆಚ್ಚದ ಬಿಲ್ಲುಗಳನ್ನು ವಿಪತ್ತು ನಿರ್ವಹಣೆಯಡಿ ಪಾವತಿಸಲಾಗುವುದು. ಹೀಗಾಗಿ, ಅವಶ್ಯಕತೆ ಇರುವಷ್ಟು ಹೆಚ್ಚು ಖಾಸಗಿ ಬೊರ್ ವೆಲ್ ಗಳನ್ನು ಪಡೆದು ಜನರಿಗೆ ಕುಡಿಯುವ ನೀರಿನ ಪೂರೈಕೆ ಮಾಡಬೇಕು ಎಂದು ಅವರು ತಿಳಿಸಿದರು.ಪ್ರಸ್ತುತ 26 ಸಮಸ್ಯಾತ್ಮಕ ಗ್ರಾಮಗಳಿಗೆ ಖಾಸಗಿ ಬೋರ್ ವೆಲ್ ಗಳ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ಅಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಮುಂಬರುವ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಗಳಿದ್ದು, ಒಂದು ವೇಳೆ ಮಳೆಯಾಗದಿದ್ದರೆ ಸುಮಾರು 113 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲಿವೆ. ಇದಕ್ಕೆ ಮುಂಜಾಗ್ರತ ಕ್ರಮವಾಗಿ ಅಗತ್ಯವಿರುವಷ್ಟು ಖಾಸಗಿ ಬೊರ್ ವೆಲ್ ಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಇದರಿಂದ ಬರವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದರು.
ಬರಗಾಲದಲ್ಲಿ ಕೆರೆಗಳು ಪ್ರಮುಖ ಪಾತ್ರ ವಹಿಸಲಿದ್ದು, ಜಿಲ್ಲೆಯಾದ್ಯಂತ ಇರುವ ಕೆರೆಗಳ ಮಾಹಿತಿ ಹಾಗೂ ಹೂಳೆತ್ತುವ ಕೆಲಸ ಆಗಬೇಕು. ಅಲ್ಲದೆ ಒತ್ತುವರಿ ಆಗಿರುವ ಕೆರೆಗಳ ಪಟ್ಟಿಮಾಡಿ ಒತ್ತುವರಿಯೇ ಅಥವಾ ಇಲ್ಲವೇ ಎಂಬುದರ ಮಾಹಿತಿ ಪಡೆದು, ಒತ್ತುವರಿ ಆಗದೆ ಇರುವ ಕೆರೆಗಳಿಗೆ ಫೆನ್ಸ್ ಹಾಕಲಾಗಿದ್ದಿಯಾ ಹಾಗೂ ಇತರೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಕೆರೆಯಲ್ಲಿ ಹೂಳೆತ್ತುವ ಮೂಲಕ ಸಿಗುವ ಮಣ್ಣು ಮೂಲಸೌಕರ್ಯ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಹೂಳೆತ್ತುವ ಕೆರೆಗಳಿಂದ ಮಣ್ಣನ್ನು ಉಪಯೋಗಿಸಿಕೊಳ್ಳಬಹುದು ಇದನ್ನು ರೈತರು ಸಹ ಬಳಸಿಕೊಳ್ಳಬಹುದು ಎಂದರು.
ಇತ್ತೀಚಿನ ದಿನಗಳಲ್ಲಿ ಅನುಮತಿ ಇಲ್ಲದೆ ಖಾಸಗಿ ಬೋರ್ ವೆಲ್ ಕೊರೆಸುತ್ತಿರುವುದು ಕಂಡು ಬರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಅಂತಹವರ ವಿರುದ್ಧ ಕಾನೂನು ರೀತಿಯಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಇದಲ್ಲದೆ ವಿಫಲ ಬೋರ್ ವೆಲ್ ಗಳು ಮತ್ತು ಕನೆಕ್ಷನ್ ಕೊಡದೆ ಬಿಟ್ಟ ಬೋರ್ ವೆಲ್ ಗಳನ್ನು ತಕ್ಷಣವೇ ಮುಚ್ಚಬೇಕು. ಇಲ್ಲವಾದರೆ ಮುಂದೆ ಆಪಾಯ ಎದುರಾಗುತ್ತವೆ. ಹೀಗಾಗಿ ಇದನ್ನು ವೈಯಕ್ತಿಕವಾಗಿ ಪರಿಗಣಿಸಿ ಆದಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸೂಚಿಸಿದರು.
ಗ್ರಾಮ ಪಂಚಾಯ್ತಿ ಮಟ್ಟದಿಂದಲೇ ಜನರಿಗೆ ಕುಡಿಯುವ ನೀರಿನ ಬಗ್ಗೆ ಪ್ರಸ್ತುತ ಎದುರಿಸುತ್ತಿರುವ ಬರಗಾಲದ ಬಗ್ಗೆ ಜನರಿಗೆ ಅರಿವು ಮೂಡಿಸಿ, ಹೆಚ್ಚಾಗಿ ನೀರನ್ನು ಪೋಲು ಮಾಡದೆ, ಅಗತ್ಯಕ್ಕೆ ತಕ್ಕಂತೆ ಸೀಮಿತವಾಗಿ ಬಳಸುವಂತೆ ಜಾಗೃತಿಮೂಡಿಸಬೇಕು ಎಂದು ಅವರು ಸೂಚಿಸಿದರು.
ಬಿಸಿಲು ಹೆಚ್ಚಾಗಿರುವುದರಿಂದ ಲಿಕ್ವಿಡ್ ಆಹಾರವನ್ನು ಸೇವಿಸಬೇಕು. ಕಾಟನ್ ಬಟ್ಟೆಗಳನ್ನು ಧರಿಸುವಂತೆ ಜನರಿಗೆ ತಿಳಿಸಬೇಕು. ಜಿಲ್ಲೆಯಾದ್ಯಂತ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಅವರು 1077 ಕಂಟ್ರೋಲ್ ರೂಮ್ ಗೆ ಕರೆ ಮಾಡಿ ದೂರನ್ನು ಸಲ್ಲಿಸಬಹುದು ಎಂದರು.
ನಗರ ಪಾಲಿಕೆಯ ಆಯುಕ್ತೆ ಡಾ.ಎನ್.ಎನ್. ಮಧು, ತಹಸೀಲ್ದಾರ್ ಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.
- ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿನೀರಿನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಆರೋಗ್ಯ ಸಮಸ್ಯೆ ಕಂಡು ಬರುವುದರಿಂದ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿದ ನಂತರ ಜನರಿಗೆ ನೀರಿನ ಪೂರೈಕೆ ಮಾಡಬೇಕು. ಅಲ್ಲದೆ ಯಾವ ಮಟ್ಟದಲ್ಲಿ ಎಷ್ಟು ಪ್ರಮಾಣದಲ್ಲಿ ಸಾರ್ವಜನಿಕರಿಗೆ ನೀರಿನ ಪೂರೈಕೆ ಆಗುತ್ತಿದೆ ಎಂಬುದನ್ನು ನೋಡಿಕೊಂಡು, ಯಾವುದೇ ಕಾರಣಕ್ಕೂ ಪೂರೈಕೆ ಸಮಸ್ಯೆ ಆಗದಂತೆ ಎಚ್ಚರವಹಿಸಬೇಕು.
- ಕೆ.ಎಂ. ಗಾಯತ್ರಿ, ಜಿಪಂ ಸಿಇಒ