ಇಂದಿನಿಂದ ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನ

KannadaprabhaNewsNetwork |  
Published : Sep 11, 2025, 12:03 AM IST
ಯು.ಟಿ. ಖಾದರ್‌  | Kannada Prabha

ಸಾರಾಂಶ

ಕಾಮನ್‌ವೆಲ್ತ್‌ ಸಂಸದೀಯ ಸಂಘದ (ಸಿಪಿಎ) ಭಾರತ ವಲಯದ 11ನೇ ಸಮ್ಮೇಳನ ಸೆ.11ರಿಂದ 13ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್‌ ಸಂಸದೀಯ ಸಂಘ (ಸಿಪಿಎ) ಭಾರತ ವಲಯದ 11ನೇ ಸಮ್ಮೇಳನ ಆಯೋಜನೆಗೊಂಡಿದ್ದು, ಸೆ.11ರಿಂದ 13ರವರೆಗೆ ಬೆಂಗಳೂರು ನಗರದಲ್ಲಿ ನಡೆಯಲಿದೆ.

ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು ಗುರುವಾರ ಸಂಜೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಬಳಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಸೆ.12 ಹಾಗೂ 13 ರಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಸಮ್ಮೇಳನ ನಡೆಯಲಿದೆ.

‘ಶಾಸಕಾಂಗದ ಸದನಗಳಲ್ಲಿ ಚರ್ಚೆಗಳು ಮತ್ತು ಮಾತುಕತೆಗಳು: ಜನರಲ್ಲಿ ವಿಶ್ವಾಸ ಮೂಡಿಸುವುದು, ಜನರ ಆಕಾಂಕ್ಷೆಗಳನ್ನು ಪೂರೈಸುವುದು’ ಎಂಬ ಮುಖ್ಯ ಧ್ಯೇಯದ ಆಧಾರದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಎಲ್ಲಗೋಷ್ಠಿಗಳಿಂದ ವ್ಯಕ್ತವಾಗುವ ಅಭಿಪ್ರಾಯಗಳನ್ನು ಆಧರಿಸಿ ಸೂಕ್ತ ನಿರ್ಣಯಗಳನ್ನೂ ತೆಗೆದುಕೊಳ್ಳಲಾಗುವುದು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದ್ದಾರೆ.

ಈ ಬಗ್ಗೆ ಬುಧವಾರ ಲೋಕಸಭೆ ಸಂಸದೀಯ ಶಿಷ್ಟಾಚಾರ ವಿಭಾಗ ಹಾಗೂ ವಿಧಾನಮಂಡಲದ ಅಧಿಕಾರಿಗಳ ಜತೆಗೆ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ಹಾಗೂ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸಭೆ ನಡೆಸಿದರು.

ಬಳಿಕ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಯು.ಟಿ.ಖಾದರ್ ಅವರು, ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸಿಪಿಎ ಭಾರತ ವಲಯದ 11ನೇ ಸಮ್ಮೇಳನ ನಡೆಯುತ್ತಿದೆ. ಗುರುವಾರ ಮಧ್ಯಾಹ್ನ 3.30ಕ್ಕೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಪಿಎ ಕಾರ್ಯಕಾರಿಣಿ ಸಭೆ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ ವಿಧಾನಸೌಧದ ಮುಂಭಾಗದ ಎಲ್ಲರಾಜ್ಯಗಳ ಸ್ಪೀಕರ್‌, ಸಭಾಪತಿ, ಮುಖ್ಯಮಂತ್ರಿಗಳ ಜತೆ ಗ್ರೂಪ್‌ ಫೋಟೋ ಇರಲಿದೆ ಎಂದು ಮಾಹಿತಿ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮ:

ಸಮ್ಮೇಳನದ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನದಿಂದಲೇ ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗುತ್ತದೆ. ವೇದಿಕೆಯ ಮುಖ್ಯ ಕಾರ್ಯಕ್ರಮದ ಬಳಿಕ ಆಳ್ವಾಸ್‌ ವಿರಾಸತ್‌ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ವಿಧಾನಸೌಧದ ಹೊರ ಭಾಗದಿಂದಲೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬಹುದು ಎಂದು ಖಾದರ್ ಹೇಳಿದರು.

ನೂತನ ಉಪರಾಷ್ಟ್ರಪತಿಗಳಿಗೂ ಆಹ್ವಾನ:

ಸಿಪಿಎ ಸೆಕ್ರೇಟರಿ ಜನರಲ್ ಸ್ಟೀಫೆನ್‌ ಟ್ವಿಗ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸೆ.13ರ ಶನಿವಾರ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಪಾಲ್ಗೊಳ್ಳಲಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ ಉಪರಾಷ್ಟ್ರಪತಿ ರಾಧಾಕೃಷ್ಣನ್‌ ಅವರು ಸೆ.12ರಂದು ಪ್ರಮಾಣವಚನ ಸ್ವೀಕರಿಸಲಿದ್ದು, ನಂತರ ಅವರಿಗೂ ಆಹ್ವಾನ ನೀಡಲಾಗುವುದು. ಸೆ.13ರಂದು ಅವರು ಭಾಗಿಯಾಗಬಹುದು ಎಂದು ಖಾದರ್‌ ವಿಶ್ವಾಸ ವ್ಯಕ್ತಪಡಿಸಿದರು.

-ಬಾಕ್ಸ್-

ಐ-ಪಾಡ್‌ ಉಡುಗೊರೆ

ದೇಶದ 31 ರಾಜ್ಯಗಳ ವಿಧಾನಸಭಾಧ್ಯಕ್ಷರು ಹಾಗೂ ವಿಧಾನಪರಿಷತ್‌ ಇರುವ ರಾಜ್ಯಗಳ ಸಭಾಪತಿಗಳು, ಕಾರ್ಯದರ್ಶಿಗಳು ಸೇರಿ ಸುಮಾರು 100ರಿಂದ 150 ಗಣ್ಯರು ಭಾಗವಹಿಸಲಿದ್ದಾರೆ. ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರದ ವತಿಯಿಂದ ಮೈಸೂರು ಸ್ಯಾಂಡಲ್‌ ಕಿಟ್‌, ಐ-ಪಾಡ್‌, ಮಹಿಳೆಯರಿಗೆ ಮೈಸೂರು ರೇಷ್ಮೆ ಸೀರೆ ಉಡುಗೊರೆಯಾಗಿ ನೀಡಲಾಗುತ್ತದೆ. ಗೋಷ್ಠಿಗಳು ನಡೆಯುವ ಖಾಸಗಿ ಹೋಟೆಲ್‌ನಲ್ಲಿ ಮೈಸೂರು ಸ್ಯಾಂಡಲ್‌, ಮೈಸೂರು ಸಿಲ್ಕ್, ಲಿಡ್ಕರ್‌, ನಂದಿನಿ ಮಳಿಗೆ ಸ್ಥಾಪನೆಗೆ ಉಚಿತ ಸ್ಥಳಾವಕಾಶ ನೀಡಲಾಗಿದೆ ಎಂದು ಯು.ಟಿ. ಖಾದರ್ ಮಾಹಿತಿ ನೀಡಿದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!