ತುಷ್ಟೀಕರಣಕ್ಕೆ ದ.ಕ.ಜಿಲ್ಲೆಗೆ ಕೋಮು ಸೂಕ್ಷ್ಮ ಹಣೆಪಟ್ಟಿ: ಡಾ.ಭರತ್‌ ಶೆಟ್ಟಿ

KannadaprabhaNewsNetwork |  
Published : Jun 02, 2025, 02:06 AM IST
ಶಾಸಕ ಡಾ.ಭರತ್‌ ಶೆಟ್ಟಿ  | Kannada Prabha

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಗೆ ಕೋಮು ಸೂಕ್ಷ್ಮ ಪ್ರದೇಶ ಎಂದು ಹಣೆಪಟ್ಟಿ ಕಟ್ಟುವ ಮೂಲಕ ರಾಜ್ಯ ಸರ್ಕಾರ ರಾಜಕೀಯ ತುಷ್ಟೀಕರಣಕ್ಕೆ ಮುಂದಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಬಿಜೆಪಿ, ಸಂಘಪರಿವಾರವೇ ಕಾರಣ ಎಂದು ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಗೆ ಕೋಮು ಸೂಕ್ಷ್ಮ ಪ್ರದೇಶ ಎಂದು ಹಣೆಪಟ್ಟಿ ಕಟ್ಟುವ ಮೂಲಕ ರಾಜ್ಯ ಸರ್ಕಾರ ರಾಜಕೀಯ ತುಷ್ಟೀಕರಣಕ್ಕೆ ಮುಂದಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಬಿಜೆಪಿ, ಸಂಘಪರಿವಾರವೇ ಕಾರಣ ಎಂದು ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ ಆರೋಪಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೇ ಕಾನೂನು, ಸುವ್ಯವಸ್ಥೆ ಪೂರ್ಣ ಹದಗೆಟ್ಟಿದೆ. ಅದರಲ್ಲೂ ದ.ಕ.ಜಿಲ್ಲೆಯನ್ನು ಸರ್ಕಾರವೇ ನಿರ್ಲಕ್ಷಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವರು, ಉಪ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ನಿರತರಾಗಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಅಹಿತಕರ ಘಟನೆ ಹಾಗೂ ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿ ಎಲ್ಲ ಶಾಸಕರ ಸಭೆ ಕರೆದು ಚರ್ಚಿಸುವ ಕೆಲವನ್ನು ಉಸ್ತುವಾರಿ ಸಚಿವರು ಮಾಡಿಲ್ಲ. ಇದರ ಬದಲು ಕೇವಲ ಮುಸ್ಲಿಮರನ್ನು ಕರೆಸಿ ಸಭೆ ನಡೆಸುತ್ತಿದ್ದಾರೆ. ಶಾಂತಿ ಸಮಿತಿ ಸಭೆ ಕೂಡ ನಡೆಸದೆ ಅತಿರೇಕದ ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಎಲ್ಲದಕ್ಕೂ ಹಿಂದುಗಳ ಹೊಣೆ:

ಬಂಟ್ವಾಳದಲ್ಲಿ ಹತ್ಯೆ ಘಟನೆ ಸಂಭವಿಸಿದಾಗ ಇದರ ಹಿನ್ನೆಲೆ, ಯಾಕಾಗಿ ಆಗಿದೆ ಎಂದು ಮಾಹಿತಿ ಪಡೆದುಕೊಳ್ಳುವ ಮೊದಲೇ ಉಸ್ತುವಾರಿ ಸಚಿವರು ಬೆಂಗಳೂರಿನಲ್ಲಿ ಹೇಳಿಕೆ ನೀಡಿ, ‘ಭಗವದ್ಗೀತೆಯಲ್ಲಿ ಇದೆಲ್ಲ ಇದೆಯಾ’ ಎಂದು ಪ್ರಶ್ನಿಸಿದ್ದಾರೆ. ಹಿಂದುಗಳ ಹತ್ಯೆಯಾದಾಗ ‘ಕುರಾನ್‌ನಲ್ಲಿ ಇದೆಲ್ಲಾ ಇದೆಯಾ’ ಎಂದು ಕೇಳುವ ಧೈರ್ಯ ಉಸ್ತುವಾರಿ ಸಚಿವರಿಗೆ ಇದೆಯಾ ಎಂದು ಡಾ. ಭರತ್‌ ಶೆಟ್ಟಿ ಪ್ರಶ್ನಿಸಿದರು. ಎಲ್ಲದಕ್ಕೂ ಹಿಂದುಗಳನ್ನು ಹೊಣೆ ಮಾಡಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಿಸುವಲ್ಲಿ ಪೊಲೀಸ್‌ ಅಧಿಕಾರಿಗಳಿಗೂ ಮುಕ್ತ ಅವಕಾಶ ನೀಡುತ್ತಿಲ್ಲ. ಈಗ ಹೊಸ ಪೊಲೀಸ್‌ ಅಧಿಕಾರಿಗಳು ಆಗಮಿಸಿದ್ದು, ಅವರು ಯಾವುದೇ ಒತ್ತಡಕ್ಕೆ ಒಳಗಾಗದೆ ಜಿಲ್ಲೆಯ ಶಾಂತಿ ಕಾಪಾಡುವಲ್ಲಿ ಶ್ರಮಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಕಾನೂನು ಮೂಲಕ ಪರಿಹರಿಸಿ:

ನಂಬರ್‌ ಟೂ ಬಿಸಿನೆಸ್‌ ಕಾರಣಕ್ಕೆ ಘರ್ಷಣೆಗಳು ನಡೆಯುತ್ತಿವೆ. ಗೋಹತ್ಯೆ, ಗೋ ಕಳ್ಳ ಸಾಗಣೆಯನ್ನು ತಡೆದಾಗ ತಡೆದವರೇ ಮೇಲೆಯೇ ಕೇಸು ದಾಖಲಿಸುತ್ತಾರೆ, ಕೊಲ್ಲುವ ಪ್ರಯತ್ನವೂ ನಡೆಯುತ್ತದೆ. ಇದಕ್ಕೆಲ್ಲ ಕಾನೂನು ಮೂಲಕ ಅಧಿಕಾರಿಗಳು ಪರಿಹಾರ ನೀಡಬೇಕು ಎಂದು ಡಾ.ಭರತ್‌ ಶೆಟ್ಟಿ ಆಗ್ರಹಿಸಿದರು.

ರಾಷ್ಟ್ರವಿರೋಧಿಗಳ ಒಪ್ಪೋದಿಲ್ಲ:

ಸರ್ಕಾರದ ಗ್ಯಾರಂಟಿಗಳನ್ನು ಕರಾವಳಿಯ ಜನತೆ ತೆಗೆದುಕೊಳ್ಳುತ್ತಾರೆ, ಆದರೆ ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ ಎನ್ನುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆ ಸರಿಯಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಕರಾವಳಿಯ ಜನತೆ ಹೊಟ್ಟೆಪಾಡಿಗೆ ಅವಲಂಬಿಸುತ್ತಿಲ್ಲ. ರಾಷ್ಟ್ರವಿರೋಧಿ ಚಿಂತನೆ ವ್ಯಕ್ತಿಗಳನ್ನು ಇಲ್ಲಿನ ಜನತೆ ಒಪ್ಪುವುದಿಲ್ಲ ಎಂದರು.

ಪರಿಹಾರ ನೀಡಲು ಆಗ್ರಹ:

ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಮಾತನಾಡಿ, ಉಳ್ಳಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಕಳೆದ ಬಾರಿಯೂ ಅವಘಡ ಸಂಭವಿಸಿದ್ದು, ಆಗಲೇ ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರನ್ನು ವಿನಂತಿಸಿದ್ದೆವು. ಆದರೆ ಉಸ್ತುವಾರಿ ಸಚಿವರು ಮುಂಜಾಗ್ರತಾ ಸಭೆ ನಡೆಸಿಲ್ಲ. ಪ್ರಾಕೃತಿಕ ವಿಕೋಪದಲ್ಲಿ ಮನೆ ಬಿದ್ದರೆ ಪರಿಹಾರ ಇದೆ. ಈ ಬಾರಿ ಅನೇಕ ಕಡೆಗಳಲ್ಲಿ ಕಂಪೌಂಡ್‌ ಬಿದ್ದಿದೆ, ಅದಕ್ಕೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಶಾಸಕಿ ಭಾಗೀರಥಿ, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಸತೀಶ್‌ ಪ್ರಭು, ರಾಜಗೋಪಾಲ ರೈ, ಸಂಜಯ ಪ್ರಭು, ಯತೀಶ್‌ ಆರ್ವಾರ್‌, ಅರುಣ್‌ ಶೇಟ್‌, ಮನೋಜ್‌ ಕೋಡಿಕಲ್‌, ಡೊಂಬಯ್ಯ ಅರಸ ಇದ್ದರು.

--------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ
ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ