ಪುತ್ತೂರು: ಕೆಎಸ್ಸಾರ್ಟಿಸಿ ಪುತ್ತೂರು ಘಟಕಕ್ಕೆ ನೂತನವಾಗಿ ಆಯ್ಕೆಗೊಂಡಿರುವ ಬಸ್ಸು ಚಾಲಕ ಮತ್ತು ನಿರ್ವಾಹಕರಿಗೆ ಸಂವಹನ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಭಾನುವಾರ ಮುಕ್ರಂಪಾಡಿಯಲ್ಲಿರುವ ಕೆಎಸ್ಸಾರ್ಟಿಸಿ ಘಟಕದಲ್ಲಿ ನಡೆಸಲಾಯಿತು.
ಘಟಕದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಅವರ ನೇತೃತ್ವದಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಎಸ್‌ಐಆರ್‌ಡಿಯ ರಾಜ್ಯ ತರಬೇತುದಾರರಾದ ಪುತ್ತೂರು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಉಮಾನಾಥ ಶೆಟ್ಟಿ ಅವರು ಮಾತನಾಡಿ, ಈ ವೃತ್ತಿಗೆ ಬರುವ ಮೊದಲು ಇಲ್ಲಿರುವ ಎಲ್ಲರೂ ಪ್ರಯಾಣಿಕರಾಗಿದ್ದವರು. ಆದ್ದರಿಂದ ಪ್ರಯಾಣಿಕರ ಸಮಸ್ಯೆಗಳ ಬಗ್ಗೆ ನಿಮಗೆ ಅರಿವಿದೆ. ಮಂದೆ ಕರ್ತವ್ಯದ ಅವಧಿಯಲ್ಲಿ ಪ್ರಯಾಣಿಕರನ್ನು ಗೌರವಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ ಎಂದರು.ರಾಜ್ಯ ಸರ್ಕಾರವು ಚಾಲಕ ನಿರ್ವಾಹಕರನ್ನು ಪಾರದರ್ಶಕವಾಗಿ ಆಯ್ಕೆ ಮಾಡಿದೆ. ನೀವೂ ಪಾರದರ್ಶಕವಾಗಿ ಜನರ ಕನ್ನಡಿಯಾಗಿ ಸೇವಾ ಕಾರ್ಯ ನಿರ್ವಹಿಸಿ. ಜನಪರವಾದ ವ್ಯಕ್ತಿತ್ವ ಬೆಳೆಸಿಕೊಳ್ಳುವುದರೊಂದಿಗೆ ನಿಮಗೆ ಸಿಕ್ಕಿರುವ ಈ ಉತ್ತಮ ಅವಕಾಶವನ್ನು ಜನರ ಸೇವೆಗೆ ಬಳಸಿಕೊಳ್ಳಿ. ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಜನರ ಪ್ರೀತಿ, ಗೌರವಗಳಿಗೆ ಭಾಜನರಾಗಬಹುದು ಎಂದು ಹೇಳಿದರು.
ನಗರ ಠಾಣೆಯ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಮಾತನಾಡಿ ಪೊಲೀಸ್ ಇಲಾಖೆ ಮತ್ತು ಕೆಎಸ್ಸಾರ್ಟಿಸಿ ನಡುವೆ ಅವಿನಾಭಾವ ಸಂಬಂಧವಿದೆ. ಇಬ್ಬರೂ ಖಾಕಿ ಬಳಸುವವರು. ನಮಗೆ ಕರ್ತವ್ಯದ ವೇಳೆಯಲ್ಲಿ ಒತ್ತಡಗಳಿರುವುದು ಸಹಜ. ಆದರೆ ನಾವು ಬಯಸಿಯೇ ಈ ಕೆಲಸಕ್ಕೆ ಬಂದಿರುವುದರಿಂದ ಒತ್ತಡವನ್ನು ಸರಿದೂಗಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂಸಾರ ಸರಿದೂಗಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂಬ ಅರಿವು ನಮ್ಮಲ್ಲಿರಬೇಕು. ಯಾರಿಗೂ ತಮ್ಮ ವೃತ್ತಿಯ ಬಗ್ಗೆ ಕೀಳರಿಮೆ ಸರಿಯಲ್ಲ. ಉತ್ಸಾಹ ಮತ್ತು ಸೇವಾ ತತ್ಪರತೆಯ ಗುಣಗಳು ನಮ್ಮಲ್ಲಿದ್ದಲ್ಲಿ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. ಕರ್ತವ್ಯ ನಿಷ್ಠೆಯು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು. ಕೆಸ್ಸಾರ್ಟಿಸಿಯ ನಿವೃತ್ತ ಸಿಬ್ಬಂದಿ ಅಬ್ಬಾಸ್ ಕುಂತೂರು ಮಾತನಾಡಿ ಕೆಎಸ್ಸಾರ್ಟಿಸಿ ಕೆಲಸವು ಗೌರವದ ಕೆಲಸವಾಗಿದ್ದು, ಬದಲಾವಣೆಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಪ್ರಸ್ತುತ ಶಕ್ತಿ ಯೋಜನೆಯ ಮೂಲಕ 60 ಲಕ್ಷ ಮಂದಿ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಚಾಲಕ ನಿರ್ವಾಹಕರು ಪ್ರಯಾಣಿಕರಿಗೆ ಉತ್ತಮ ಪ್ರೇರಣೆಯಾಗಬೇಕು. ಹಣದ ಆಸೆಗೆ ಬಲಿಯಾಗದೆ ಸಂಸ್ಥೆಯ ಏಳಿಗೆಯ ಜೊತೆಗೆ ಸಮಾಜದ ಸುರಕ್ಷತೆ ಮತ್ತು ಭದ್ರತೆಗೆ ಸಹಕಾರಿಯಾಗಬೇಕು ಎಂದರು.ಕೆಎಸ್ಸಾರ್ಟಿಸಿ ಸಹಾಯಕ ಅಧೀಕ್ಷಕ ಈಶ್ವರ್, ಪುತ್ತೂರು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಅಬ್ಬು ನವಗ್ರಾಮ ಉಪಸ್ಥಿತರಿದ್ದರು.