ಮಂಗಳೂರು: ತುಳು ಭಾಷೆಯ ಮೂಲಕ ತುಳುನಾಡಿನಲ್ಲಿ ಬಾಂಧವ್ಯದ ಬೆಸುಗೆ ಬೆಸೆಯಲಾಗಿದೆ. ಎಲ್ಲ ಜಾತಿ, ಸಮುದಾಯದವರು ತುಳು ಭಾಷೆ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದಾರೆ ಎಂದು ಮಂಗಳೂರು ಪಾದುವಾ ಪದವಿ ಕಾಲೇಜಿನ ಪ್ರಾಂಶುಪಾಲ ಅರುಣ್ ವಿಲ್ಸನ್ ಲೋಬೊ ಹೇಳಿದ್ದಾರೆ.
ನಮ್ಮ ಊರಿನ ಭಾಷೆಯ ಸಾಹಿತ್ಯ ಓದುವ ಮೂಲಕ ನಮ್ಮ ಪರಿಸರದ ಜ್ಞಾನ ಹಾಗೂ ಮಾಹಿತಿಯನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿಲ್ಸನ್ ಲೋಬೊ ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ವಿದ್ಯಾರ್ಥಿಗಳಿಗೆ ತುಳು ಸಾಹಿತ್ಯ ಲೋಕದ ಪರಿಚಯ ಮಾಡುವ ಸಲುವಾಗಿ ಹಾಗೂ ಓದುವ ಅಭಿರುಚಿ ಮೂಡಿಸುವ ಉದ್ದೇಶದಿಂದ ಅಕಾಡೆಮಿಯಲ್ಲಿ ‘ಬಲೆ ತುಳು ಓದುಗ’ ಅಭಿಯಾನ ಆಯೋಜಿಸಲಾಗಿದೆ ಎಂದರು.ಪಾದುವಾ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ರೋಶನ್ ವಿನ್ಸಿ ಸಾಂತುಮಯೋರ್, ಕಾರ್ಯಕ್ರಮದ ವಿದ್ಯಾರ್ಥಿ ಸಂಚಾಲಕ ನವೀನ್ ಕುಮಾರ್ ಇದ್ದರು.
ಕಾಲೇಜಿನ 25 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಓದಿನ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಅಕಾಡೆಮಿ ಸದಸ್ಯೆ ಅಕ್ಷಯ ಆರ್. ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.