ಪಟ್ಟಣದ ನೂತನ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸೆ ಬೇಕಿದೆ. ತಾಲೂಕು ಕೇಂದ್ರವಾದ ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲ ಗ್ರಾಮಗಳಿಂದ ರೋಗಿಗಳು ಬರುತ್ತಾರೆ ಹಾಗೂ ಪಟ್ಟಣದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ, ಒಂದು ರಾಜ್ಯ ಹೆದ್ದಾರಿ ಹಾದು ಹೋಗುವ ಕಾರಣ ಹಲವಾರು ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಅವರಿಗೆ ತಜ್ಞ ವೈದ್ಯರು ಲಭ್ಯವಾಗದ ಕಾರಣದಿಂದಾಗಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲವೆಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.
ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪಟ್ಟಣದ ನೂತನ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸೆ ಬೇಕಿದೆ. ತಾಲೂಕು ಕೇಂದ್ರವಾದ ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲ ಗ್ರಾಮಗಳಿಂದ ರೋಗಿಗಳು ಬರುತ್ತಾರೆ ಹಾಗೂ ಪಟ್ಟಣದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ, ಒಂದು ರಾಜ್ಯ ಹೆದ್ದಾರಿ ಹಾದು ಹೋಗುವ ಕಾರಣ ಹಲವಾರು ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಅವರಿಗೆ ತಜ್ಞ ವೈದ್ಯರು ಲಭ್ಯವಾಗದ ಕಾರಣದಿಂದಾಗಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲವೆಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.
ಸಾಕಷ್ಟು ಹೋರಾಟಗಳ ನಂತರ ಅಡೆ, ತಡೆಗಳನ್ನು ದಾಟಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿ ಸುಮಾರು ₹8.30 ಕೋಟಿ ವೆಚ್ಚದ ಸುಸಜ್ಜಿತ 30 ಹಾಸಿಗೆಯ ಉತ್ತಮ ಕಟ್ಟಡ ನಿರ್ಮಾಣವಾಗಿದ್ದು ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಹಾಗೂ ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ನೇತೃತ್ವದಲ್ಲಿ ಲೋಕಾರ್ಪಣೆಗೊಂಡಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ವಿಫಲರಾಗಿದ್ದಾರೆ. ವಿದ್ಯುತ್ ವ್ಯತ್ಯಯ ಉಂಟಾದಾಗ ತುರ್ತು ವಿಭಾಗದಲ್ಲಿ ಬೆಳಕು, ಇನ್ವರ್ಟರ್ ವ್ಯವಸ್ಥೆ ಇಲ್ಲದೇ ಜನರೇಟರ್ ಇದ್ದರೂ ಡೀಸೆಲ್ ವ್ಯವಸ್ಥೆ ಕಲ್ಪಿಸದೆ ಇರುವುದು ಕತ್ತಲಲ್ಲಿ ಮೊಬೈಲ್ ಟಾರ್ಚ್ ಮೂಲಕ ಅಪಘಾತಕ್ಕೆ ಈಡಾದ ರೋಗಿಗಳ ಪರೀಕ್ಷೆ ಮಾಡಿ ಸಮಸ್ಯೆಗೆ ಕಾರಣವಾಗಿದೆ. ಆ್ಯಂಬುಲೆನ್ಸ್ ಇದ್ದರೆ ಡ್ರೈವರ್ ಇಲ್ಲ, ಜನರೇಟರ್ ಇದ್ದರೆ ಡೀಸೆಲ್ ಇಲ್ಲ, ತುರ್ತು ವಿಭಾಗ ಇದ್ದರೂ ಕರೆಂಟ್ ಇಲ್ಲ, ಸುಸಜ್ಜಿತ ಕಟ್ಟಡ ಇದ್ದರೂ ಉಪಕರಣಗಳು ಇಲ್ಲ ಹಾಗೂ ತಜ್ಞ ವೈದ್ಯರ ನೇಮಕ ಸೇರಿದಂತೆ ಶೇ.50 ಹುದ್ದೆಗಳು ಖಾಲಿ ಇವೆ. ಸರ್ಕಾರ ಕೂಡಲೇ ಆಸ್ಪತ್ರೆಗೆ ಬೇಕಾದ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಕಲಿತಿಸಬೇಕೆಂದು ಈ ಭಾಗದ ಜನರ ಆಗ್ರಹವಾಗಿದೆ.ಇದ್ದೂ ಇಲ್ಲದಂತಾದ ಸರ್ಕಾರಿ ಆಸ್ಪತ್ರೆ:
ಸಿಎಚ್‌ಸಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯ, ಸಿಬ್ಬಂದಿ, ಉಪಕರಣಗಳ ಕೊರತೆಯಿಂದ. ಬಿಕೋ ಎನ್ನುವಂತಾಗಿದೆ. ತುರ್ತು ಸಂದರ್ಭದಲ್ಲಿ ಧಾವಿಸಿ ಬಂದು ನರಳುವ ರೋಗಿಗಳು. ಶುಶ್ರೂಷಕರೇ ಇಲ್ಲಿ ವೈದ್ಯರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಸಮಸ್ಯೆಯ ಸುಳಿಗೆ ಸಿಲುಕಿದ್ದು, ರೋಗಿಗಳಿಗಿಂತಲೂ ಆಸ್ಪತ್ರೆಗೆ ಚಿಕಿತ್ಸೆ ಬೇಕಿದೆ. ಸಿಬ್ಬಂದಿ ಹಾಗೂ ಅಗತ್ಯ ಸವಲತ್ತುಗಳ ಕೊರತೆಯಿಂದ ನಲುಗಿರುವ ಸಮುದಾಯ ಆರೋಗ್ಯ ಕೇಂದ್ರ ಸ್ಥಳೀಯರಿಗೆ ಇದ್ದೂ ಇಲ್ಲದಂತಾಗಿದೆ.ತಾಲೂಕು ಕೇಂದ್ರದಲ್ಲಿಲ್ಲ ಸೂಕ್ತ ಚಿಕಿತ್ಸೆ:
ದೇವರಹಿಪ್ಪರಗಿ ತಾಲೂಕು ಕೇಂದ್ರವಾಗಿದ್ದು, ಸುತ್ತ-ಮುತ್ತಲಿನ 30 ಗ್ರಾಮಗಳಿಗೆ ಕೇಂದ್ರ ಬಿಂದುವಾಗಿದೆ. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ, ಸಿಬ್ಬಂದಿ ಹಾಗೂ ಉಪಕರಣಗಳ ಕೊರತೆ, ಸೂಕ್ತ ಔಷಧಿಗಳ ವಿತರಣೆ ಇಲ್ಲ, ನಾಯಿ, ಹಾವು ಕಚ್ಚಿದರೆ ರೋಗಿಗಳಿಗೆ ಹಾಗೂ ರೈತರಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲ, ಇದ್ದ ಆ್ಯಂಬುಲೆನ್ಸ್‌ಗೆ ಚಾಲಕ ಇಲ್ಲ, ಹೊರ ರೋಗಿಗಳಿಗೆ ಸಂಬಳ ಇಲ್ಲ, ಇಷ್ಟೆಲ್ಲ ಸಮಸ್ಯೆ ಇದ್ದರೂ ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದಾರೆ. ಕೂಡಲೇ ಸರ್ಕಾರ ಸೂಕ್ತಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಶಯ.ಮೊಬೈಲ್ ಟಾರ್ಚ್ ಮೂಲಕ ಪರೀಕ್ಷೆ:
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಇರುವ ಕಾರಣ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಅಪಘಾತಕ್ಕೀಡಾದವರಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಸಾವು ಸಂಭವಿಸಿರುವ ಉದಾಹರಣೆಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ. ಮಂಗಳವಾರ ಪಟ್ಟಣದ ಇಂಡಿ ರಸ್ತೆಯಲ್ಲಿ ಬೊಲೆರೋ, ಟಂಟಂ ಹಾಗೂ ಮೋಟಾರ್ ಸೈಕಲ್ ಅಪಘಾತದಲ್ಲಿ ಸುಮಾರು 10 ಜನರಿಗೆ ಗಾಯಗಳಾಗಿದ್ದು, ಅದರಲ್ಲಿ 5 ಜನರಿಗೆ ಗಂಭೀರ ಗಾಯಗಳಾಗಿವೆ. ತುರ್ತು ಚಿಕಿತ್ಸೆಗೆ ರೋಗಿಗಳನ್ನು ಕರೆತಂದಾಗ ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೇ ಕತ್ತಲು ಆವರಿಸಿದಾಗ ಗ್ರಾಮಸ್ಥರು ಹಾಗೂ ಸಿಬ್ಬಂದಿ ಜೊತೆ ವಾಗ್ವಾದ ನಡೆದು ಗೊಂದಲದ ವಾತಾವರಣ ಉಂಟಾಗಿತ್ತು. ನಂತರ ಮೊಬೈಲ್ ಟಾರ್ಚ್ ಮೂಲಕ ಪರೀಕ್ಷೆ ಮಾಡಬೇಕಾದ ಅನಿವಾರ್ಯತೆ ಎದುರಾಯಿತು.ಸಿಎಚ್‌ಸಿ ಆಸ್ಪತ್ರೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಜೊತೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳು ಹಾಗೂ ಇನ್ಸ್ಟ್ರುಮೆಂಟ್‌ಗಳನ್ನು ಒದಗಿಸುವಂತೆ ಆರೋಗ್ಯ ಇಲಾಖೆಯ ಸಚಿವರಿಗೆ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ಉಪಕರಣಗಳ ಸಮಸ್ಯೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ. ಶೀಘ್ರದಲ್ಲೇ ಅಗತ್ಯ ಸಿಬ್ಬಂದಿ ನೇಮಕ ಹಾಗೂ ಉಪಕರಣಗಳ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
-ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಶಾಸಕರು.ಸಿಎಚ್‌ಸಿ ಆಸ್ಪತ್ರೆಯಲ್ಲಿ ಪದೆ, ಪದೇ ಉಂಟಾಗುತ್ತಿರುವ ವಿದ್ಯುತ್ ಸಮಸ್ಯೆ, ಉಪಕರಣಗಳ, ವೈದ್ಯರ ಕೊರತೆ ಹಾಗೂ ಖಾಲಿ ಹುದ್ದೆಗಳಿಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಕೂಡಲೇ ಪರಿಹರಿಸಿ ಸಮರ್ಪಕ ಆರೋಗ್ಯ ಸೇವೆ ದೊರೆಯಲು ತಕ್ಷಣ ಬಗೆಹರಿಸಬೇಕು. ಇಲ್ಲವಾದಲ್ಲಿ ಕರವೇ ತಾಲೂಕು ಸಂಘಟನೆಯ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.