ಚಿತ್ರದುರ್ಗ: ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಯಶಸ್ವಿ ಅನುಷ್ಠಾನಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ ಎಂದು ಚಿಕ್ಕಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಜಿ.ಆರ್.ಹಳ್ಳಿ ವೈದ್ಯಾಧಿಕಾರಿ ಡಾ.ಗೀತಾಂಜಲಿ ಮಾತನಾಡಿ, ಅಪೌಷ್ಟಿಕತೆ ಅನಾರೋಗ್ಯಕ್ಕೆ ಮುಖ್ಯ ಕಾರಣವಾಗಿದೆ. ಅಪೌಷ್ಟಿಕತೆಗೆ ಒಳಗಾದ ಜನರು ರೋಗಗಳಿಂದ ತಾವು ಮುಕ್ತವಾಗುವ ಸಾಮರ್ಥ್ಯವನ್ನು ಕಳೆದುಕೊಂಡಿರುವ ಕಾರಣದಿಂದ ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಅತಿಸಾರ, ದಡಾರ, ಮಲೇರಿಯಾ ಮತ್ತು ನ್ಯೂಮೋನಿಯದಂತಹ ರೋಗಗಳೂ ಸಹ ಬಹಳಷ್ಟು ಸಲ ಅಪೌಷ್ಟಿಕತೆಗೆ ಒಳಗಾದ ಜನರ ಸಾವಿಗೆ ಕಾರಣವಾಗುತ್ತವೆ. ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಸದಸ್ಯರು ಜನ ಜಾಗೃತಿ ಮೂಡಿಸಲು ಆಂದೋಲನದ ಮೂಲಕ ಗ್ರಾಮಗಳಲ್ಲಿ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಸಂಯೋಜಕ ಕರಕಪ್ಪ ಮೇಟಿ ಗ್ರಾಮ ಆರೋಗ್ಯ ಸಮಿತಿ ಜವಾಬ್ದಾರಿ, ಸಮಿತಿ ರಚನೆ, ಸದಸ್ಯರ ಜವಾಬ್ದಾರಿ, ಮುಕ್ತ ನಿಧಿ ಬಳಕೆ ಬಗ್ಗೆ ತಿಳಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮುಗಪ್ಪ, ನೀರು ನೈರ್ಮಲ್ಯ ಸ್ವಚ್ಛತೆ ಬಗ್ಗೆ ವಹಿಸಬೇಕಾದ ಕ್ರಮಗಳ ಬಗ್ಗೆ ಮನನ ಮಾಡಿಕೊಟ್ಟರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾಹಿತಿ ಶಿಕ್ಷಣ ನೀಡಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಶಾಂತ್, ಪವನ್ ಕುಮಾರ್, ಪ್ರವೀಣ್, ಶಂಕರ್ ನಾಯ್ಕ್, ಆರೋಗ್ಯ ಸುರಕ್ಷತಾಧಿಕಾರಿಗಳಾದ ನಾಗರತ್ನಮ್ಮ, ಸುಧಾ, ಶಿಲ್ಪ, ಮಂಜುಳ, ಗಾಯತ್ರಿ, ಮಂಜುಳಾ, ಸಮುದಾಯ ಆರೋಗ್ಯಾಧಿಕಾರಿಗಳಾದ ಶಭಾನಾ, ಲೋಹಿತ್ ಕುಮಾರ್, ರಮೇಶ್, ವಿಎಚ್‍ಎಸ್‍ಎನ್‍ಸಿ ಅಧ್ಯಕ್ಷ ತಿಮ್ಮರಾಜು, ರೇಷ್ಮಬಾನು, ಹೊನ್ನೂರಪ್ಪ, ಶಿವಮ್ಮ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.