ವೈಯುಕ್ತಿಕ ಪ್ರತಿಷ್ಠೆಗೆ ಸಮುದಾಯ ಬಲಿ ಸರಿಯಲ್ಲ

KannadaprabhaNewsNetwork |  
Published : Dec 16, 2024, 12:48 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಚಿತ್ರದುರ್ಗ: ವೈಯುಕ್ತಿಕ ಪ್ರತಿಷ್ಠೆಗಾಗಿ ಸಮುದಾಯ ಬಲಿಕೊಡುವ ಕೆಲಸ ಯಾರೂ ಮಾಡಬಾರದು ಎಂದು ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಹೇಳಿದರು.

ಚಿತ್ರದುರ್ಗ: ವೈಯುಕ್ತಿಕ ಪ್ರತಿಷ್ಠೆಗಾಗಿ ಸಮುದಾಯ ಬಲಿಕೊಡುವ ಕೆಲಸ ಯಾರೂ ಮಾಡಬಾರದು ಎಂದು ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಹೇಳಿದರು. ಚಿತ್ರದುರ್ಗ ನಗರದ ಕೋಟೆ ನಾಡು ಬೌದ್ಧ ವಿಹಾರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ವಚನಕಾರರ ಮಾದಾರ ಚೆನ್ನಯ್ಯ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವುಗಳು ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ನಿಟ್ಟಿನಲ್ಲಿ ಆಲೋಚಿಸಬೇಕು. ತಮ್ಮನ್ನು ತಾವು ತಿದ್ದಿಕೊಂಡು ಸನ್ಮಾರ್ಗದಲ್ಲಿ ಮುನ್ನೆಡೆದರೆ ಸಮುದಾಯ, ಸಮಾಜ, ದೇಶ ಪ್ರಗತಿ ಹೊಂದಲು ಸಾಧ್ಯ ಎಂದರು. ಮನುಷ್ಯ ದ್ವೇಷ, ಅಸೂಯೆ, ವೈಷ್ಯಮ್ಯ ಬಿಟ್ಟು ಪ್ರೀತಿ, ಶಾಂತಿಯನ್ನು ಕಲಿಯಬೇಕು. ಎಲ್ಲರಿಗೂ ಪ್ರೀತಿ ಹಂಚಬೇಕು. ಪ್ರೀತಿಯಿಂದ ಬಾಳಬೇಕೆಂಬ ವಚನಕಾರ ಮಾದಾರ ಚೆನ್ನಯ್ಯ ಸತ್ಯ ಸಂದೇಶವನ್ನು ನಾವೆಲ್ಲಾರು ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರಸ್ತುತ ಸಮಾಜದಲ್ಲಿ ಬುದ್ಧ, ಬಸವ, ಚೆನ್ನಯ್ಯ ಅವರ ಸತ್ಯವನ್ನು ತಿಳಿಯಬೇಕಿದೆ. ಅಂಬೇಡ್ಕರ್ ಅವರ ಹೋರಾಟದಿಂದ ಸಮಾನತೆ, ಶಿಕ್ಷಣ ನಮಗೆ ದೊರಕಿದೆ. ಅದನ್ನು ಪಡೆದವರಲ್ಲೇ ಸಮಾನತೆ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಇಂದು ವಿದ್ಯಾವಂತರಲ್ಲಿಯೇ ಮೌಢ್ಯತೆ, ದ್ವೇಷ, ಅಸೂಯೆ ಹೆಚ್ಚಾಗುತ್ತಿದೆ. ಆದರೆ ಹಳ್ಳಿಯ ಅವಿದ್ಯಾವಂತರಲ್ಲಿ ಹೆಚ್ಚು ಪ್ರೀತಿ ಕಾಣುತ್ತಿದ್ದೇವೆ. ಆದ್ದರಿಂದ ಪ್ರೀತಿಸುವುದು ಕಲಿಯಿರಿ. ಮಹಾನ್ ನಾಯಕರ ವಿಚಾರಗಳನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಶಿವಾನಂದ ಕೆಳಗಿನಮನಿ ಮಾತನಾಡಿ, ದಲಿತರ, ಸಾಮಾನ್ಯರ ಸ್ಥಿತಿ ಅಯೋಮಯವಾಗಿದ್ದ ಸಂಕೀರ್ಣ, ಮತಾಂತರ, ಯುದ್ಧದ ತುಮಲಗಳಿಂದ ಕೂಡಿದ ಕಾಲಘಟ್ಟದಲ್ಲಿ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದವರು ವಚನಕಾರ ಮಾದಾರಚೆನ್ನಯ್ಯ ಎಂದರು. ಚೆನ್ನಯ್ಯ ಅವರು ಶರಣ ಚಳುವಳಿಯ ಆದಿಪುರುಷರಾಗಿದ್ದಾರೆ. ಬಸವಣ್ಣನವರ 300 ವಚನಗಳಲ್ಲಿ 42 ಕಡೆಯಲ್ಲಿ ಚೆನ್ನಯ್ಯರ ಬಗ್ಗೆ ಉಲ್ಲೇಖವಿದೆ. ಅಲ್ಲದೇ ಮುತ್ತಯ್ಯ, ಅಪ್ಪಯ್ಯ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೇ 200ಕ್ಕೂ ಹೆಚ್ಚು ವಚನಕಾರರು ನೆನೆಪಿಸಿಕೊಳ್ಳುತ್ತಾರೆ. ಇಂತಹ ಮಾದಾರ ಚೆನ್ನಯ್ಯ ಅವರ ಹೆಸರಿನಲ್ಲಿ ಪೀಠ ಸ್ಥಾಪನೆ, ಜಯಂತಿ ಆಚರಣೆ, ವಿಚಾರ ಸಂಕಿರಣ ಹಾಗೂ ಪ್ರಶಸ್ತಿ ಹೊರಬರಬೇಕು ಎಂದು ಒತ್ತಾಯಿಸಿದರು. ಉಪನ್ಯಾಸಕ ಡಾ.ಬಿ.ಗುರುನಾಥ್ ಮಾತನಾಡಿ, ವಚನ ಪರಂಪರೆ ಎಂಬುದು ಭಕ್ತಿಗೆ ಸೇರಿದ ಹಾಗೂ ಸಮ ಸಮಾಜದ ನಿರ್ಮಾಣಕ್ಕೆ ಕ್ರಾಂತಿ ನಡೆದ ಕಾಲಘಟ್ಟ. ಈ ಕಾಲದಲ್ಲಿ ಬದುಕಿದ ಮಾದಾರ ಚೆನ್ನಯ್ಯ ಕರಿಕಾಲ ಚೋಳನ ಆಸ್ಥಾನದಲ್ಲಿ ಕುದುರೆಗಳಿಗೆ ಮೇವು ಹಾಕಿಕೊಂಡು ಸಾಮಾನ್ಯ ಜೀವನ ಸಾಗಿಸುತ್ತಿದ್ದ. ಶಿವನನ್ನೇ ಕರೆಸಿಕೊಂಡು ಆತನ ಜೊತೆಯಲ್ಲಿ ಅಂಬಲಿ ಕುಡಿದ ಶರಣ. ಅವರ ವಚನಗಳು ಪ್ರತಿಯೊಬ್ಬರ ಮನೆಮಾತಾಗಲಿ. ಅವರ ಸನ್ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದರು.ಗಂಗಾವತಿ ಉಪನ್ಯಾಸಕ ಹಾಗೂ ಬರಹಗಾರ ಡಾ.ಲಿಂಗಣ್ಣ ಜಂಗಮರಹಳ್ಳಿ ಉಪನ್ಯಾಸ ನೀಡಿದರು. ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಪಿ.ಪ್ರೇಮ್‍ನಾಥ್, ವಕೀಲ ಬೆನಕನಹಳ್ಳಿ ಚಂದ್ರಪ್ಪ, ಹಿರಿಯೂರು ನಗರಸಭೆ ಸದಸ್ಯ ಎಂ.ಡಿ.ಸಣ್ಣಪ್ಪ, ಡಿಎಸ್ಎಸ್ ರಾಜ್ಯ ಸಂಚಾಲಕ, ವೈ.ರಾಜಣ್ಣ, ಪ್ರಬುದ್ಧ ಸೇನೆ ರಾಜ್ಯಾಧ್ಯಕ್ಷ ಅವಿನಾಶ್, ಎಐಬಿಎಸ್‍ಪಿ ಜಿಲ್ಲಾಧ್ಯಕ್ಷ ಪ್ರಕಾಶ್, ಬಿಎಸ್‍ಐ ಜಿಲ್ಲಾ ಕಾರ್ಯದರ್ಶಿ ನನ್ನಿವಾಳ ರವಿಕುಮಾರ್, ಉಪನ್ಯಾಸಕ ಈ.ನಾಗೇಂದ್ರಪ್ಪ, ಭೀಮನಕೆರೆ ಶಿವಮೂರ್ತಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ