ಕನ್ನಡಪ್ರಭ ವಾರ್ತೆ ಸಂಡೂರು
ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆ ರಾಜ್ಯ ರಾಜಕೀಯದ ದಿಕ್ಸೂಚಿಯಾಗಿದೆ. ಇದು ರಾಜಕೀಯದ ದಿಕ್ಕನ್ನು ಬದಲಾಯಿಸೋ ಚುನಾವಣೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.ಪಟ್ಟಣದ ಶಿವವಿಲಾಸ್ ಹೆರಿಟೇಜ್ ಹೋಟೆಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಮಾತನಾಡಿ, ರಾಜ್ಯದ ಪರಿಸ್ಥಿತಿ ಹದಗೆಟ್ಟಿದೆ. ಮೂರ್ನಾಲ್ಕು ವರ್ಷದ ಬಳಿಕ ಆಡಳಿತ ವಿರೋಧ ವ್ಯಕ್ತವಾಗುವುದು ಸಹಜ. ಆದರೆ ರಾಜ್ಯದ ಕಾಂಗ್ರೆಸ್‌ನ ಸರ್ಕಾರಕ್ಕೆ ಒಂದೇ ವರ್ಷದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸಾಲುಸಾಲು ಹಗರಣಗಳು ಬೆಳಕಿಗೆ ಬರುತ್ತಿವೆ. ಮುಡಾ ಹಗರಣ ಅತಿ ದೊಡ್ಡದು. ಸೈಟ್ ವಾಪಸ್ ನೀಡಿ ಸಿದ್ದರಾಮಯ್ಯ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಸರ್ಕಾರ ನೇರವಾಗಿ ಭಾಗಿಯಾಗಿದೆ. ಇದನ್ನು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಜನತೆ ಛೀ, ಥೂ ಎಂದು ಉಗಿಯುತ್ತಿದ್ದಾರೆ ಎಂದು ಟೀಕಿಸಿದರು.
ಸಮಾಜ ಹಾಗೂ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಅಭಿವೃದ್ಧಿ ಬಗ್ಗೆ ಚಕಾರವಿಲ್ಲ. ಬರ ಮತ್ತು ನೆರೆ ಬಗ್ಗೆ ಕಾಳಜಿ ತೋರದ ರಾಜ್ಯ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ಅದು ಕೇವಲ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದೆ. ಅಹಿಂದ ಹೆಸರೇಳಿಕೊಂಡು ಅಧಿಕಾರ ಹಿಡಿದ ಸಿದ್ದರಾಮಯ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಅನ್ಯಾಯ ಮಾಡಿದ್ದಾರೆ ಎಂದರು.ರಾಜ್ಯದಲ್ಲಿ ಅಭಿವೃದ್ಧಿ ಪ್ರಾರಂಭವೇ ಆಗಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರೇ ಅಭಿವೃದ್ಧಿಗೆ ಅನುದಾನ ನೀಡದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈತ, ದಲಿತ, ಬಡವರ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಮೂರು ಕ್ಷೇತ್ರದ ಜನತೆ ತೀರ್ಮಾನಿಸಿದ್ದಾರೆ ಎಂದರು.
ಕ್ಷೇತ್ರದಲ್ಲಿ ಈವರೆಗೆ ಪಕ್ಷದ ಕಮಲದ ಹೂ ಅರಳಿಲ್ಲ. ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಎಲ್ಲರ ಒಗ್ಗಟ್ಟಿನ ಶ್ರಮದಿಂದ ಕ್ಷೇತ್ರದಲ್ಲಿ ಬಿಜೆಪಿಯ ಕಮಲದ ಹೂ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.