ನವಲಗುಂದ: ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳದ ವ್ಯಾಪ್ತಿಯ ರೈತರ ಬೆಳೆಗಳು ಹಾನಿ ಸಮೀಕ್ಷೆ ಸಂದರ್ಭದಲ್ಲಿ ಕೈಬಿಟ್ಟು ಹೋಗುವ ಕುರಿತಾಗಿ ತಮಗೂ ಮಾಹಿತಿಯಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಎಲ್ಲ ರೈತರಿಗೂ ಪರಿಹಾರ ಒದಗಿಸಲು ಪ್ರಯತ್ನಿಸುವುದಾಗಿ ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.
ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ಅವರು ಮುಂಗಾರು ಹಂಗಾಮಿನಲ್ಲಿ ಸತತ ಸುರಿದ ಭಾರಿ ಮಳೆಯಿಂದಾಗಿ ರೈತರ ಬೆಳೆಗಳು ಹಾನಿಯಾಗಿದ್ದು, ಸರ್ಕಾರ ಕೂಡಲೆ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಗಮನ ಸೆಳೆದರು.ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ 13 ಸಾವಿರ ಹೆಕ್ಟೇರ್ ಬೆಳೆ ಮಳೆಯಿಂದ ಹಾನಿಯಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಅಲ್ಲದೇ ಅಳಿದುಳಿದ ಹೆಸರು ಬೆಳೆ ಕಟಾವು ಹಂತಕ್ಕೆ ಬಂದಿದ್ದರೂ ತೀವ್ರ ಮಳೆಯಿಂದಾಗಿ ಭೂಮಿಯಲ್ಲೆ ಮೊಳಕೆಯೊಡೆಯುವಂತಾಗಿ ರೈತ ಸಮುದಾಯ ಸಂಕಷ್ಟ ಅನುಭವಿಸುತ್ತಿದೆ. ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳ ಸೇರಿದಂತೆ ವಿಧಾನಸಭಾ ಕ್ಷೇತ್ರದಲ್ಲಿ ಹರಿಯುವ ಹಲವಾರು ಸಣ್ಣ ಹಳ್ಳಗಳ ಅಚ್ಚುಕಟ್ಟಿನಲ್ಲಿರುವ ಜಮೀನುಗಳಲ್ಲಿನ ಬೆಳೆಗಳು ಬಿತ್ತನೆ ಮಾಡಿದ ವಾರದಲ್ಲಿಯೇ ನೆರೆಯಿಂದ ಹಾಳಾಗಿವೆ. ಬೆಳೆಹಾನಿ ಸಮೀಕ್ಷೆ ಸಂದರ್ಭದಲ್ಲಿ ಕೈಬಿಟ್ಟು ಹೋಗುವುದರಿಂದ ಬೆಳೆದ ಬೆಳೆಗಳಿಗೆ ಪರಿಹಾರ ಮರಿಚಿಕೆಯಾದೀತೆಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಸರಕಾರ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳಗಳ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಗಳನ್ನು ಕಳೆದುಕೊಂಡ ರೈತರಿಗಾಗಿ ವಿಶೇಷ ತಂಡವನ್ನು ರಚಿಸಿ ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಹೆಚ್ಚಿನ ಪರಿಹಾರ ನೀಡಬೇಕು ಎಂದು ಸದನದ ಮೂಲಕ ಸರ್ಕಾರದ ಗಮನ ಸೆಳೆದರು.
ಅಲ್ಲದೇ ಕ್ಷೇತ್ರದಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೂ ಕೂಡಲೇ ಪರಿಹಾರ ನೀಡಬೇಕು. ಕ್ಷೇತ್ರದಲ್ಲಿ ಹಿಂದೆಂದೂ ಕಾಣದಷ್ಟು ದಾಖಲೆಯ ಮಳೆಯಾಗಿದ್ದು, ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ವಳ್ಳಿ ಗ್ರಾಮಾಂತರ ಪ್ರದೇಶದಲ್ಲಿ ಪ್ರಮುಖ ರಸ್ತೆಗಳು ಹದಗೆಟ್ಟಿದ್ದು, ದುರಸ್ತಿಗೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.ಶಾಸಕರ ಪ್ರಶ್ನೆಗೆ ಕಂದಾಯ ಸಚಿವರ ಪರವಾಗಿ ಉತ್ತರ ನೀಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ, ಮಳೆಯಿಂದಾದ ಹಾನಿ ಆಗಿರುವುದು ನಿಜ. ಆದರೆ, ಕೇಂದ್ರ ಸರ್ಕಾರದಿಂದ ವಿಪತ್ತು ಪರಿಹಾರ ನಿಧಿ ಬಾರದಿರುವುದಕ್ಕೆ ಪರಿಹಾರ ನೀಡಲು ವಿಳಂಬವಾಗಿದೆ. ಹೀಗಾಗಿ ರೈತರಿಗೆ ಪರಿಹಾರ ವಿತರಿಸಿಲ್ಲ ಎಂದರು. ಅಧಿವೇಶನದಲ್ಲಿ ಮಂಗಳವಾರ ಶಾಸಕರು ಚರ್ಚೆ ಮಾಡಿರುವ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ.