ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಲೇಬೇಕು

KannadaprabhaNewsNetwork |  
Published : Oct 13, 2026, 01:30 AM IST
ಕ್ಯಾಪ್ಷನ11ಕೆಡಿವಿಜಿ41 ದಾವಣಗೆರೆಯಲ್ಲಿ ಕರ್ನಾಟಕ ಶ್ರಮಿಕ ಶಕ್ತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸಹಯೋಗದಲ್ಲಿ ನಡೆದ ರೈತ ಹಾಗೂ ಕಾರ್ಮಿಕರ ಮಕ್ಕಳಿಗೆ  ಅಭಿನಂದನಾ, ಮಾರ್ಗದರ್ಶನ ಸಮಾರಂಭವನ್ನು ಸಾಹಿತಿ ಬಿ.ಶ್ರೀನಿವಾಸ್‌ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ತೀವ್ರ ಬರದ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ನಡಿ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಮತ್ತು ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಸೋಮವಾರ ಒಣಗಿದ ಮೆಕ್ಕೆಜೋಳದ ದಂಟುಗಳನ್ನು ಸುಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

- ಒಣ ಮೆಕ್ಕೆಜೋಳ ದಂಟುಗಳ ಸುಟ್ಟು ರೈತರ ಪ್ರತಿಭಟನೆ । ಸಂಪೂರ್ಣ ಸಾಲ ಮನ್ನಾ ಮಾಡಿ: ಹುಚ್ಚವ್ವನಹಳ್ಳಿ ಮಂಜುನಾಥ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ತೀವ್ರ ಬರದ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ನಡಿ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಮತ್ತು ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಸೋಮವಾರ ಒಣಗಿದ ಮೆಕ್ಕೆಜೋಳದ ದಂಟುಗಳನ್ನು ಸುಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಇತರರ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಮಳೆ ಇಲ್ಲದೇ ಒಣಗಿದ್ದ ಮೆಕ್ಕೆಜೋಳದ ದಂಟುಗಳ ತಂದು ಬೆಂಕಿ ಹಚ್ಚುವ ಮೂಲಕ ಕೇಂದ್ರ, ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ ಪ್ರತಿಭಟನಾನಿರತ ರೈತರು ಮತ್ತು ಪೊಲೀಸರ ಮಧ್ಯೆ ನೂಕಾಟ ತಳ್ಳಾಟವೂ ನಡೆಯಿತು. ಕಡೆಗೆ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ, ರೈತರು ಉಭಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಕೇಂದ್ರ, ರಾಜ್ಯ ಸರ್ಕಾರಗಳು ರೈತರ ವಿಚಾರವಾಗಿ ಮೊಸಳೆ ಕಣ್ಣೀರು ಸುರಿಸುವುದನ್ನು ನಿಲ್ಲಿಸಲಿ. ರಾಜ್ಯ ಸರ್ಕಾರ ಬರ ಪರಿಹಾರವನ್ನು ಕೇವಲ ₹2500 ಘೋಷಣೆ ಮಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ನಡಿ ಪರಿಹಾರವನ್ನು ಹೆಚ್ಚಿಸಬೇಕು. ಪ್ರತಿ ಎಕರೆಗೆ ₹25 ಸಾವಿರ ಬೆಳೆ ಹಾನಿ ಪರಿಹಾರ ನೀಡಿ, ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯವ್ಯಾಪಿ ರೈತರು ತೀವ್ರ ಬರದಿಂದಾಗಿ ತತ್ತರಿಸಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಬರ ಬಂದಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು. ವೈಜ್ಞಾನಿಕವಾಗಿ ಬೆಳೆವಿಮೆ ಪರಿಹಾರ ನೀಡಬೇಕು. ರೈತರ ಸಂಪೂರ್ಣ ಸಾಲ ಮನ್ನಾಗೆ ಎರಡೂ ಸರ್ಕಾರಗಳು ಮುಂದಾಗಬೇಕು. ಕಂದಾಯ ಮಂತ್ರಿಗಳು ಎಕರೆಗೆ ₹2500 ಪರಿಹಾರ ಘೋಷಿಸಿರುವುದು ಯಾವುದಕ್ಕೂ ಸಾಲದು ಎಂದು ಆಕ್ಷೇಪಿಸಿದರು.

ರಾಜ್ಯ ಸರ್ಕಾರ ದಾವಣಗೆರೆ ಜಿಲ್ಲೆಯ ಕೆಲ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ, ಕೈ ತೊಳೆದುಕೊಳ್ಳುವ ಕೆಲಸ ಮಾಡಿದೆ. ಈಗಿನ ದುಬಾರಿ ಖರ್ಚಿನಲ್ಲಿ 1 ಎಕರೆ ಉಳುಮೆ ಮಾಡಿ, ಬಿತ್ತನೆ ಮಾಡಲು ₹25 ಸಾವಿರಕ್ಕೂ ಅಧಿಕ ಖರ್ಚಾಗುತ್ತದೆ. ಹಾಗಾಗಿ, ಪ್ರತಿ ಎಕರೆಗೆ ಕನಿಷ್ಠ ₹25 ಸಾವಿರದಂತೆ ಪರಿಹಾರ ನೀಡಬೇಕು. ದಾವಣಗೆರೆ ತಾಲೂಕಿನಲ್ಲಿ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ, ರಾಗಿ ಸೇರಿದಂತೆ ಬಹುತೇಕ ಎಲ್ಲ ಬೆಳೆಗಳು ಮಳೆ ಕೊರತೆಯಿಂದ ಸಂಪೂರ್ಣ ಹಾಳಾಗಿವೆ ಎಂದು ದೂರಿದರು.

ಬೆಳೆವಿಮೆ ಕಂತುಗಳನ್ನು ರೈತರು ತುಂಬಿದ್ದು, ಕಂಪನಿಯವರು ಎಲ್ಲ ರೈತರಿಗೂ ಒಂದೇ ಮಾದರಿಯಲ್ಲಿ ಎಕರೆಗೆ ₹5ರಿಂದ ₹6 ಸಾವಿರ ಪರಿಹಾರ ನೀಡುವುದಾಗಿ ಹೇಳುತ್ತಿದ್ದಾರೆ. ಜಿಲ್ಲಾಡಳಿತವು ಮಧ್ಯ ಪ್ರವೇಶ ಮಾಡಿ, ಶೇ.100ರಷ್ಟು ಬೆಳೆಗಳು ಹಾಳಾಗಿವೆ. ಪ್ರತಿ ಎಕರೆಗೆ ಮೆಕ್ಕೆಜೋಳ, ರಾಗಿಗೆ ಬೆಳೆಗಳಿಗೆ ವಿಮೆ ಮಾಡಿಸಿಕೊಂಡಿದ್ದ ರೈತರಿಗೆ ಪ್ರತಿ ಎಕರೆಗೆ ₹28 ಸಾವಿರದಿಂದ ₹30 ಸಾವಿರವರೆಗೆ ಕೊಡಿಸಲು ವಿಮಾ ಕಂಪನಿಯೊಂದಿಗೆ ರೈತರು, ಅಧಿಕಾರಿಗಳ ಸಮೇತ ಸಭೆ ನಡೆಸಿ, ತೀರ್ಮಾನಿಸಬೇಕು ಎಂದು ಆಗ್ರಹಿಸಿದರು.

ಬರದಿಂದಾಗಿ ಎಲ್ಲ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ರೈತರು ಟ್ರ್ಯಾಕ್ಟರ್ ಸಾಲ, ಬೆಳೆ ಸಾಲ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆಗೆ ಮಾಡಿದ್ದ ಸಾಲಗಳನ್ನು ಭರಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ರೈತರು ಎನ್‌ಬಿಎಫ್‌ಸಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮತ್ತು ಸಹಕಾರಿ ಸಂಘಗಳಲ್ಲಿ ಮಾಡಿದ್ದ ಬೆಳೆ ಸಾಲ ಹಾಗೂ ರೈತರ ಎಲ್ಲ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಸರ್ಕಾರಗಳಿಗೆ ಹುಚ್ಚವ್ವನಹಳ್ಳಿ ಮಂಜುನಾಥ ಮನವಿ ಮಾಡಿದರು.

ಸಂಘದ ಮುಖಂಡರಾದ ಕುಕ್ಕವಾಡ ಬಸವರಾಜ, ಹುಚ್ಚವ್ವನಹಳ್ಳಿ ಪ್ರಕಾಶ, ಬೋರಗೊಂಡನಹಳ್ಳಿ ಕಲ್ಲೇಶ, ಹೂವಿನಮಡು ಜ್ಯೋತಿ, ನರಗನಹಳ್ಳಿ ನಾಗರಾಜ, ಚಿಕ್ಕಮಲ್ಲನಹೊಳೆ ಚಿರಂಜೀವಿ, ಮಾಯಕೊಂಡ ಮುಂಡರಗಿ ರಾಮಚಂದ್ರಪ್ಪ, ಹುಚ್ಚವ್ವನಹಳ್ಳಿ ಮಹೇಶ್ವರಪ್ಪ, ಗರ್ಭಗುಡಿ ದಿಳ್ಯಪ್ಪ, ಹುಚ್ಚವ್ವನಹಳ್ಳಿ ಸೋಮಶೇಖರ, ನಂದ್ಯಾಲದ ಪುಂಡಿ ವಿಶ್ವನಾಥ, ಜಿ.ಮಲ್ಲಿಕಾರ್ಜುನ ಜಿ.ಎಂ.ಗಂಗಾಧರಯ್ಯ ಗಿರಿಯಾಪುರ, ಮಾಯಕೊಂಡ ಸತೀಶ, ಹೊಸಹಳ್ಳಿ ಮೋಹನಾಯ್ಕ ಇತರರು ಇದ್ದರು.

- - -

-(ಪೋಟೋಗಳಿವೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸಚಿವ ವಿ.ಸೋಮಣ್ಣ ಕಾರಿಗೆ ಮುತ್ತಿಗೆ ಯತ್ನ
ಬಿಎಸ್‌ಸಿ ಕುಟುಂಬದ ಶ್ರಮ ನಿಜಕ್ಕೂ ಶ್ಲಾಘನೀಯ: ಬಿ.ಎಸ್. ಯಡಿಯೂರಪ್ಪ