ಹಣ ಹಂಚಲು ಕಾಂಗ್ರೆಸ್‌ನಲ್ಲಿ ಪೈಪೋಟಿ: ಸಂಸದ ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Nov 11, 2024, 01:04 AM IST
bommai | Kannada Prabha

ಸಾರಾಂಶ

ಸರ್ಕಾರದಿಂದ ಲೂಟಿ ಮಾಡಿದ ಹಣವನ್ನು ಚುನಾವಣೆಯಲ್ಲಿ ಹಂಚುತ್ತಿದ್ದಾರೆ ಎಂದು ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಹುಬ್ಬಳ್ಳಿ: ಶಿಗ್ಗಾಂವಿ ಉಪಚುನಾವಣೆಯಲ್ಲಿ ಹಣ ಹಂಚುವುದರಲ್ಲಿ ಕಾಂಗ್ರೆಸ್ ನಾಯಕರ ನಡುವೆ ಪೈಪೋಟಿ ಶುರುವಾಗಿದೆ‌. ಸಮುದಾಯವಾರು ಶಾಸಕರು ಹಣ ಹಂಚಿಕೆ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಹಂಚುವುದನ್ನು ನೋಡಿರಲಿಲ್ಲ‌ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಲೂಟಿ ಮಾಡಿದ ಹಣವನ್ನು ಇಲ್ಲಿ ಹಂಚುತ್ತಿದ್ದಾರೆ ಎಂದು ಹೇಳಿದರು.

ಹಾನಗಲ್ ರೈತ ಆತ್ಮಹತ್ಯೆ ಪ್ರಕರಣವನ್ನು ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್‌ ಆರೋಪಕ್ಕೆ ತಿರುಗೇಟು ನೀಡಿದ ಅವರು, ರೈತನ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿದೆ. ಅದನ್ನು ತೆಗೆಸಲು ಆ ರೈತ ನಾಲ್ಕೈದು ವರ್ಷ ಅಲೆದಾಡಿದ್ದಾರೆ‌. ವಕ್ಫ್‌ಗೆ ಹೋದರೂ ಅಲ್ಲಿ ನ್ಯಾಯ ಸಿಗುವುದಿಲ್ಲ‌ ಅಂತ ಗೊತ್ತಾಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಅವರ ಕುಟುಂಬದವರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬರೆದುಕೊಟ್ಟಿದ್ದಾರೆ ಎಂದು ಹೇಳಿದರು.

ರೈತರಿಗೆ ನೋಟಿಸ್ ಕೊಟ್ಟಿರುವುದನ್ನು ವಾಪಸ್ ಪಡೆಯುವುದು ಕಣ್ಣೊರೆಸುವ ತಂತ್ರ. ಎಲ್ಲಿ ವರೆಗೆ ಗೆಜೆಟ್ ನೋಟಿಫಿಕೇಶನ್ ವಾಪಸ್ ಪಡೆಯುವುದಿಲ್ಲವೋ ಅಲ್ಲಿ ವರೆಗೆ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ ಎಂದು ಹೇಳಿದರು.

ಕಾನೂನು ಪ್ರಕಾರ ಪಿಪಿಇ ಕಿಟ್ ಖರೀದಿ

ಕೋವಿಡ್ ಹಗರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್ ಇರಲಿಲ್ಲ. ಜನ ಸಾಯುತ್ತಿದ್ದರು. ಆರೋಗ್ಯ ತುರ್ತು ಪರಿಸ್ಥಿತಿ ಇತ್ತು‌. ವೈದ್ಯರು ಪಿಪಿಇ ಕಿಟ್ ಇಲ್ಲದಿದ್ದರೆ ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳಿದ್ದರು. ಪಿಪಿಇ ಕಿಟ್ ಇಲ್ಲದಿದ್ದರೆ ಸಾಯುತ್ತಾರೆ ಎಂಬ ಭಯ ಇತ್ತು. ಆಗ ಎಲ್ಲಿ ಸಿಗುತ್ತವೆ ಎಂದು ತಿಳಿದು ಖರೀದಿ ಮಾಡಿದ್ದೇವು. ರಾಷ್ಟ್ರೀಯ ವಿಪತ್ತು ಅಂತ ಘೊಷಣೆ ಮಾಡಲಾಗಿತ್ತು‌. ಜನರ ಪ್ರಾಣ ಉಳಿಸಲು ನಿರ್ಣಯ ತೆಗೆದುಕೊಂಡಿದ್ದೇವು. ಅದು ಕಾನೂನು ಪ್ರಕಾರವೇ ಆಗಿದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲು ಮಾಡುತ್ತಿದ್ದಾರೆ. ವರದಿ ಸಲ್ಲಿಕೆಯಾಗಿ ಸರ್ಕಾರ ಇನ್ನೂ ಸ್ವೀಕರಿಸಿಲ್ಲ‌, ಅದನ್ನು ಲೀಕ್ ಮಾಡಿದ್ದಾರೆ‌‌. ತಮ್ಮ ಮೇಲಿನ ಆರೋಪ ಮರೆಮಾಚಲು ವಿರೋಧ ಪಕ್ಷದ ನಾಯಕರ ಧ್ವನಿ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಆಗುವುದಿಲ್ಲ ಎಂದು ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ