ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ವತಿಯಿಂದ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ಸಕ್ಕರೆ ಕಾರ್ಖಾನೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಸಕ್ಕರೆ ಕಾರ್ಖಾನೆಗಳು ತಮ್ಮ ಪ್ರಗತಿಯೊಂದಿಗೆ ರೈತರ ಹಿತರಕ್ಷಣೆ ಗಮನದಲ್ಲಿಟ್ಟುಕೊಳ್ಳಬೇಕು. ಸಕ್ಕರೆ ಕಾರ್ಖಾನೆಗಳಿಗೆ ಸ್ವಯಂ ನಿಯಂತ್ರಣ ಅಗತ್ಯ. ಕಾರ್ಖಾನೆಗಳ ನಡುವೆ ಆರೋಗ್ಯಕರ ಸ್ಪರ್ಧೆ ಒಳ್ಳೆಯದು. ಆದರೆ, ಸ್ವಾರ್ಥ ಸಾಧನೆಯ ಕಾರ್ಯಕ್ಷೇತ್ರವನ್ನು ಮೀರಿ ಹೋಗಬಾರದು. ಸರ್ಕಾರ ಈ ವಿಚಾರದಲ್ಲಿ ನಿಯಂತ್ರಿಸಲು ಶಾಸನ ರೂಪಿಸುವ ಪರಿಸ್ಥಿತಿ ನಿರ್ಮಾಣ ಆಗಬಾರದು ಎಂದರು.ಸಕ್ಕರೆ ಕಾರ್ಖಾನೆಗಳ ಪ್ರಗತಿಯಲ್ಲಿ ರಾಜ್ಯ ಸರ್ಕಾರದ ಕೊಡುಗೆ ಗಣನೀಯವಾಗಿದೆ. ಸರ್ಕಾರ ರೈತರಿಗೆ ನೀರು, ವಿದ್ಯುತ್, ಕಬ್ಬಿನ ಬೀಜ ಸೇರಿದಂತೆ ಹಲವು ಸವಲತ್ತುಗಳನ್ನು ಒದಗಿಸದಿದ್ದರೆ ಕಾರ್ಖಾನೆಗಳು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಈ ಅಂಶಗಳು ಅವರ ಗಮನದಲ್ಲಿರಬೇಕು. ಇತ್ತೀಚಿನ ದಿನಗಳಲ್ಲಿ ಗುತ್ತಿಗೆ ಕೃಷಿ ಪದ್ಧತಿ ಬರುತ್ತಿದ್ದು, ಇದರಿಂದ ಭೂಮಿಯ ಫಲವತ್ತತೆ ನಾಶವಾಗುವ ಅಪಾಯವಿದೆ. ಕಾರ್ಖಾನೆಗಳು ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ರೈತರ ಭೂಮಿಯ ನಿರ್ವಹಣೆಯ ಜವಾಬ್ದಾರಿ ಕೂಡಾ ಕಾರ್ಖಾನೆಗಳ ಮೇಲೆ ಇದೆ ಎಂದರು.
ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ರಾಜಗೋಪಾಲ, ಮಲಗೌಂಡ ಪಾಟೀಲ, ಅಭಿನಂದನ ಪಾಟೀಲ, ಅಭಯ ಸರನಾಯಕ, ವಿ. ಜೆ. ರವಿ ಇದ್ದರು.
ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ಮದ್ಯಸಾರ ತಂತ್ರಜ್ಞಾನ ಮತ್ತು ಸಕ್ಕರೆ ತಂತ್ರಜ್ಞಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸಗಳನ್ನು ಆರಂಭಿಸಲಾಗುತ್ತಿದ್ದು. ₹20 ಕೋಟಿ ವೆಚ್ಚದಲ್ಲಿ ಕಾಲೇಜು ಕಟ್ಟಡ ನಿರ್ಮಿಸಲಾಗುವುದೆಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಎರಡು ವರ್ಷಗಳಿಂದ ರಾಜ್ಯದಲ್ಲಿ ಸುಮಾರು 6 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಉತ್ತಮ ಮಳೆ ಆಗುತ್ತಿರುವುದರಿಂದ ಇನ್ನೂ ₹1 ಲಕ್ಷ ಹೆಕ್ಟೇರ್ ಕ್ಷೇತ್ರ ಹೆಚ್ಚಾಗುವ ನಿರೀಕ್ಷೆ ಇದೆ. ಕಬ್ಬಿನ ಕೊರತೆ ಎದುರುಸುತ್ತಿರುವ ಕಾರ್ಖಾನೆಗಳಿಗೆ ಇನ್ನು ಮುಂದೆ ಕಬ್ಬಿನ ಸಮಸ್ಯೆಯಾಗದು ಎಂದರು.
ಸಕ್ಕರೆ ರಫ್ತು ಮಾಡಲು ಕಾರ್ಖಾನೆಗಳಿಗೆ ಅನುಮತಿ ನೀಡಬೇಕು ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ತೊಗರಿ ನಮ್ಮಲ್ಲೆ ಗಣನೀಯ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೂ, ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಿಂದ ತೊಗರಿ ಬೆಲೆ ಕೆ.ಜಿಗೆ ₹90 ಗೆ ಕುಸಿದಿದೆ. ಹೀಗಾಗಿ, ಯಾವುದನ್ನು ಆಮದು ಮಾಡಿಕೊಳ್ಳಬೇಕು, ಯಾವುದನ್ನು ರಫ್ತು ಮಾಡಲು ಅನುಮತಿ ನೀಡಬೇಕು ಎಂಬ ಬಗ್ಗೆ ಕೇಂದ್ರ ಚಿಂತಿಸಬೇಕು. ಈರುಳ್ಳಿ ಮತ್ತು ಟೊಮ್ಯಾಟೊ ಬೆಲೆ ಕುಸಿದು ರೈತರು ಅವುಗಳನ್ನು ರಸ್ತೆಗೆ ಸುರಿಯುವ ಪರಿಸ್ಥಿತಿ ಬರಬಾರದು. ಈ ನಿಟ್ಟಿನಲ್ಲಿ ಕೇಂದ್ರ ಚಿಂತನೆ ಮಾಡಬೇಕು ಎಂದು ಹೇಳಿದರು.