ಚಿತ್ರದುರ್ಗ: ಮಕ್ಕಳ ಕಲಿಕಾಮಟ್ಟ ಅರ್ಥೈಸಿಕೊಂಡು ವಿಶ್ಲೇಷಣೆ ಮಾಡಲು ಸ್ಪರ್ಧೆಗಳು ಸಹಕಾರಿಯಾಗುತ್ತವೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಅಕ್ಷರ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗಣಿತ ವಿಚಾರ ಸಂಕಿರಣ ಮತ್ತು ಗಣಿತ ಸ್ಪರ್ಧೆಯಲ್ಲಿ ಉತ್ತಮ ಫಲಿತಾಂಶ ಪಡೆದ 25 ಶಾಲೆಗಳು, 25 ಗ್ರಾಮ ಪಂಚಾಯಿತಿಗಳನ್ನು ಅಭಿನಂದಿಸಲು ಶುಕ್ರವಾರ ಆಯೋಜಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಗಣಿತ ಕಲಿಕೆ ಕಷ್ಟವಲ್ಲ. ಸುಲಭವಾಗಿ ಕಲಿಯಲು ಎನ್.ಜಿ.ಓ ಸಹಭಾಗಿತ್ವದಲ್ಲಿ ಕಲಿಕಾ ಸಾಧನಗಳನ್ನು ರೂಪಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 188 ಗ್ರಾಮ ಪಂಚಾಯಿತಿಗಳಲ್ಲಿ 4 ರಿಂದ 6ನೇ ತರಗತಿಯ ಮಕ್ಕಳಿಗಾಗಿ ಸಮುದಾಯದ ಸಹಭಾಗಿತ್ವದಲ್ಲಿ ಗಣಿತ ಸ್ಪರ್ಧೆಗಳನ್ನು ನಡೆಸಲಾಗಿದ್ದು, 1341 ಸರ್ಕಾರಿ ಶಾಲೆಗಳಿಂದ 29400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಗಣಿತ ಫಲಿತಾಂಶ ವಿಶ್ಲೇಷಣೆಯಿಂದ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ತಾಲೂಕು ಉತ್ತಮ ಫಲಿತಾಂಶ ಪಡೆದಿದ್ದು, ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ಆಶಯದಂತೆ ಕಲಿಕಾ ಮಟ್ಟ ಸುಧಾರಿಸಲು ಹೆಚ್ಚಿನ ಸಾಧನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.
ಶಿಕ್ಷಣ ಇಲಾಖೆಯ ಜತೆ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗಣಿತ ವಿಷಯ ಸರಳೀಕರಣಗೊಳಿಸಲು 22 ಪರಿಕರಗಳನ್ನೊಳಗೊಂಡಿರುವ ಕಿಟ್‍ಗಳನ್ನು ಶಾಲೆಗಳಿಗೆ ನೀಡಲಾಗಿದೆ. ಇದರ ಜತೆ ಶಿಕ್ಷಕರಿಗೂ ಪುನಶ್ಚೇತನ ತರಬೇತಿಗಳನ್ನು ಆಯೋಜಿಸಲಾಗುತ್ತದೆ. ಗುಣಮಟ್ಟದ ಶಿಕ್ಷಣ ನೀಡಲು ಡಯಟ್‌ನಿಂದ ತರಬೇತಿಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಪ್ರಾಥಮಿಕ ಹಂತದಲ್ಲಿಯೇ ಸಾಕ್ಷರತೆ ಜ್ಞಾನ ಹೆಚ್ಚಿಸುವುದು ಅಗತ್ಯ ಎಂದು ಹೇಳಿದರು.ಪ್ರಾಚಾರ್ಯ ಎಂ.ನಾಸಿರುದ್ದೀನ್ ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡಲು ಶೈಕ್ಷಣಿಕ ಭಾಗೀದಾರರ ಪಾತ್ರ ಅಗತ್ಯ. ಅಕ್ಷರ ಫೌಂಡೇಶನ್‌ನಿಂದ ನೀಡಿರುವ ಕಲಿಕಾ ಉಪಕರಣಗಳನ್ನು ಉಪಯೋಗಿಸುವುದರ ಜೊತೆಗೆ ಚಟುವಟಿಕೆಗಳ ಮೂಲಕ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಬೇಕು ಎಂದರು.
ಈ ಸಂದರ್ಭದಲ್ಲಿ ಕರಾಪ್ರಾ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ್, ಅಕ್ಷರ ಫೌಂಡೇಶನ್‍ನ ವಿಭಾಗೀಯ ಕ್ಷೇತ್ರ ವ್ಯವಸ್ಥಾಪಕ ರಂಗನಾಥ್, ಡಯಟ್ ಉಪನ್ಯಾಸಕರಾದ ಬಿ.ಎಸ್.ನಿತ್ಯಾನಂದ, ಸಿ.ಎಸ್.ಲೀಲಾವತಿ, ಎಸ್.ಬಸವರಾಜು, ಕೋಡಿಹಳ್ಳಿ ಸಹಿ ಪ್ರಾಢ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್, ಗೋನೂರು ಗ್ರಾಪಂ ಅಧ್ಯಕ್ಷೆ ಗುಂಡಮ್ಮ, ರಾಮಜೋಗಿಹಳ್ಳಿ ಪಿಡಿಒ ಗೌತಮಿ, ಅಕ್ಷರ ಫೌಂಡೇಶನ್‍ನ ಜಿಲ್ಲಾ ಸಂಯೋಜಕ ರಘು, ಬಿ.ಆರ್.ಸಿಗಳಾದ ಸಂಪತ್ ಕುಮಾರ್, ತಿಪ್ಪೇರುದ್ರಪ್ಪ, ಶ್ರೀನಿವಾಸ್, ತಿಪ್ಪೇಸ್ವಾಮಿ, ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮದ ತಾಲೂಕು ನೋಡಲ್ ಅಧಿಕಾರಿಗಳು, ಉತ್ತಮ ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕರು, ಗ್ರಾಪಂ ಅಧ್ಯಕ್ಷರು ಇದ್ದರು.