ಪಿ.ಟಿ. ಪರಮೇಶ್ವರ ನಾಯ್ಕ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ದೂರು

KannadaprabhaNewsNetwork |  
Published : Aug 20, 2026, 02:30 AM IST
ಪಿ.ಟಿ. ಪರಮೇಶ್ವರ ನಾಯ್ಕ | Kannada Prabha

ಸಾರಾಂಶ

ಪಿ.ಟಿ. ಪರಮೇಶ್ವರ ನಾಯ್ಕ ಶಿಷ್ಟಾಚಾರ ಉಲ್ಲಂಘಿಸಿ, ಪಂಚ ಗ್ಯಾರಂಟಿ ಯೋಜನೆಗಳ ಹೊರತುಪಡಿಸಿ ಬೇರೆ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ಮಾಡಿದ್ದು, ಜತೆಗೆ ಸರ್ಕಾರಿ ಬೆಂಗಾಲು ಪಡೆ ವಾಹನಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆ .13ರಂದು ಶಾಸಕ ಕೃಷ್ಣನಾಯ್ಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ ಅವರಿಗೆ ದೂರು ನೀಡಿದ್ದಾರೆ.

ಹೂವಿನಹಡಗಲಿ: ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ (ಸಚಿವ ಸಂಪುಟ ಸ್ಥಾನಮಾನ) ಶಿಷ್ಟಾಚಾರ ಉಲ್ಲಂಘಿಸಿ, ಪಂಚ ಗ್ಯಾರಂಟಿ ಯೋಜನೆಗಳ ಹೊರತುಪಡಿಸಿ ಬೇರೆ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ಮಾಡಿದ್ದು, ಜತೆಗೆ ಸರ್ಕಾರಿ ಬೆಂಗಾಲು ಪಡೆ ವಾಹನಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆ.13ರಂದು ಶಾಸಕ ಕೃಷ್ಣನಾಯ್ಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ ಅವರಿಗೆ ದೂರು ನೀಡಿದ್ದಾರೆ.

ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಅನುದಾನ ಬಳಕೆ ಕುರಿತು ಕರ್ನಾಟಕ ನೀರಾವರಿ ನಿಗಮದ ಸಂಬಂಧ ಪಟ್ಟ ಅಧಿಕಾರಿಗಳ ಸಭೆಯನ್ನು ನಿಯಮ ಬಾಹಿರವಾಗಿ ನಡೆಸಿದ್ದಾರೆ. ಸರ್ಕಾರಿ ಅಧಿಕಾರಿಗಳೂ ನನ್ನ ಗಮನಕ್ಕೆ ತರದೇ ಈ ರೀತಿಯ ಸಭೆಗಳಲ್ಲಿ, ಭಾಗವಹಿಸುವುದು ಮತ್ತು ನಿರ್ದೇಶನಗಳನ್ನು ಸ್ವೀಕರಿಸುವುದು, ಶಾಸಕರಾಗಿ ನನಗೆ ಸಂವಿಧಾನ ಬದ್ಧವಾಗಿ ಹಾಗೂ ಶಾಸನಸಭಾ ನಿಯಮಗಳ ಪ್ರಕಾರ ನೀಡಿರುವ ಹಕ್ಕುಗಳಿಗೆ ಚ್ಯುತಿ ಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಸಿಂಗಟಾಲೂರು ಏತ ನೀರಾವರಿ ಯೋಜನೆ ಸ್ಥಳೀಯ ಶಾಸಕನಾದ ನನ್ನ ವ್ಯಾಪ್ತಿಗೆ ಬರುವುದರಿಂದ ಪಿ.ಟಿ.ಪರಮೇಶ್ವರ ನಾಯ್ಕ ಶಿಷ್ಟಾಚಾರ ವ್ಯವಸ್ಥೆಯನ್ನು ಅನಾವಶ್ಯಕವಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಅನಗತ್ಯವಾಗಿ ಬೆಂಗಾವಲು ಪಡೆ ವಾಹನಗಳನ್ನು ಉಪಯೋಗಿಸುತ್ತಿದ್ದು, ಸಾರ್ವಜನಿಕರಿಂದ ಈ ಕುರಿತು ಸಾಕಷ್ಟು ದೂರುಗಳು ಬಂದಿವೆ. ಖಾಸಗಿ ಹಾಗೂ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೂ ಶಿಷ್ಟಾಚಾರದ ಹೆಸರಿನಲ್ಲಿ ರಸ್ತೆ ಸಂಚಾರ ತಡೆದು, ಸಾರ್ವಜನಿಕರಿಗೆ ಹಾಗೂ ತುರ್ತು ಸೇವೆಗಳಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಸರ್ಕಾರ ನಿಗಧಿ ಪಡಿಸಿದ ಶಿಷ್ಟಾಚಾರ ಚೌಕಟ್ಟು ಮೀರಿ ಅಧಿಕಾರ ಪ್ರದರ್ಶನಕ್ಕಾಗಿ ಇದನ್ನು ಬಳಸುತ್ತಿದ್ದಾರೆ. ಅವರು ವಿಶೇಷ ಭದ್ರತೆ ಹಾಗೂ ಅನಗತ್ಯ ಸೌಲಭ್ಯಗಳನ್ನು ಬಳಸುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಗಳ ಕುರಿತು ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಆ. 13ರಂದು ಸಭೆ ಮಾಡಿದ್ದಾರೆ. ಆದರಿಂದ ಅಧಿಕಾರಿಗಳು ಕೆರೆಗಳಿಗೆ ನೀರು ಹರಿಸುವುದು ಹಾಗೂ ಯೋಜನೆಯ ಕಾರ್ಯ ನಿರ್ವಹಣೆಗೆ ಮೀಸಲಾಗಿರುವ ಅನುದಾನ, ಬಳಕೆಯಾದ ಅನುದಾನ ಕುರಿತು ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕೆಂದು ಅವರ ಆಪ್ತ ಕಾರ್ಯದರ್ಶಿ ಸುಬ್ರಮಣ್ಯ ಎಸ್‌. ಕುಮಟ ಅವರು ಅಧಿಕಾರಿಗಳಿಗೆ ಪತ್ರ ಬರೆದಿದ್ದರು ಎಂದು ತಿಳಿಸಿದ್ದಾರೆ.ಕಾಂಗ್ರೆಸ್ ಖಂಡನೆ: ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ಕರೆದು, ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಶಾಸಕ ಕೃಷ್ಣನಾಯ್ಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿರುವುದನ್ನು ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಖಂಡಿಸಿದೆ.

ಈ ಕುರಿತು ಪಿ.ಟಿ. ಪರಮೇಶ್ವರ ನಾಯ್ಕ ನಿವಾಸದಲ್ಲಿ ಕಾಂಗ್ರೆಸ್‌ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಅವರಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ. ಅವರು ಹೊಸಪೇಟೆಯ ವೈಕುಂಠದಲ್ಲಿ ರೈತ ಪರ ಕಾಳಜಿ ಇಟ್ಟುಕೊಂಡು ನೀರಾವರಿ ಅಧಿಕಾರಿಗಳ ಸಭೆ ಮಾಡಿದ್ದಾರೆ ಹೊರತು, ಅವರು ದೊಡ್ಡ ಅಪರಾಧವೇನೂ ಮಾಡಿಲ್ಲ. ಸಣ್ಣ ಸಮಸ್ಯೆಯನ್ನೇ ಶಾಸಕ ಕೃಷ್ಣನಾಯ್ಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ದೊಡ್ಡದಾಗಿ ಬಿಂಬಿಸಲು ಹೊರಟಿದ್ದಾರೆ. ಇವರು ಜನ ವಿರೋಧಿ ಶಾಸಕರಾಗಿದ್ದಾರೆ ಎಂದು ದೂರಿದರು.ಕಳೆದ 3 ವರ್ಷದಿಂದ ಕೆರೆ ಕಾಲುವೆಗಳಿಗೆ ನೀರು ಹರಿಸಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರೂ ಶಾಸಕ ಕೃಷ್ಣನಾಯ್ಕ ಅಧಿಕಾರಿಗಳ ಸಭೆ ಮಾಡಿಲ್ಲ, ರೈತ ವಿರೋಧಿಯಾಗಿದ್ದಾರೆ. ಆದ್ದರಿಂದ ರೈತರೆಲ್ಲರೂ ಪಿ.ಟಿ. ಪರಮೇಶ್ವರ ನಾಯ್ಕ ಬಳಿ ಹೋಗಿ ದೂರು ಹೇಳಿದ್ದರಿಂದ ವಾರದ ಹಿಂದೆ ಮುನಿರಾಬಾದ್‌ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ಮಾಡಿ, ಹೂವಿನಹಡಗಲಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ, ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ನೀರಾವರಿ ಮುಖ್ಯ ಎಂಜಿನಿಯರ್‌ಗೆ ತಾಕೀತು ಮಾಡಿದ್ದು, ಶಿಷ್ಟಾಚಾರವಲ್ಲ. ಇದೊಂದು ರೈತ ಪರ ಕಾಳಜಿಯಾಗಿದೆ ಎಂದು ಹೇಳಿದರು.ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ಬಿ. ಹನುಮಂತಪ್ಪ, ಸೋಗಿ ಹಾಲೇಶ ಮಾತನಾಡಿದರು. ಬಸವನಗೌಡ ಪಾಟೀಲ, ಪಿ. ವಿಜಯಕುಮಾರ, ಜಿ. ವಸಂತ, ಎಸ್‌. ದೂದಾನಾಯ್ಕ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡಿಮೆ ಶ್ರಮ, ಅಧಿಕ ಇಳುವರಿ ಪಡೆಯಲು ವೈಜ್ಞಾನಿಕ ಕೃಷಿ ಪದ್ಧತಿ ಪೂರಕ: ಬಿ.ಪುಂಡಲೀಕ ಮರಾಠೆ
ಎಸ್‌ಡಿಎಂಎ ಕಾಲೇಜಿನಿಂದ ಸ್ತನ್ಯಪಾನ ಜಾಗೃತಿ ಬೀದಿನಾಟಕ