ದೊಡ್ಡಬಳ್ಳಾಪುರ:
ಪ್ರಥಮ್ ದೂರು ನೀಡಿದ ಬೆನ್ನಲ್ಲೆ ಪೊಲೀಸರು ಪ್ರಥಮ ತನಿಖಾ ವರದಿಯನ್ನು ದಾಖಲಿಸಿದ್ದು, ಭಾರತೀಯ ನ್ಯಾಯ ಸಂಹಿತೆ u/s 351(2)(3), 352,126(2) r/w 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಬೇಕರಿ ರಘು ಎ-1, ಯಶಸ್ವಿನಿ ಎ-2 ಮತ್ತು ಇತರರು ಎಂದು ಉಲ್ಲೇಖಿಸಲಾಗಿದೆ. ಸಿನಿಮಾ ಪ್ರಮೋಟರ್ ಮಹೇಶ್ ಎಂಬುವವರ ದೇವಸ್ಥಾನದ ಪೂಜೆಗೆ ಹೋಗಿದ್ದ ವೇಳೆ, ನನ್ನ ಬಾಸ್ ದರ್ಶನ್ ಬಗ್ಗೆ ಮಾತನಾಡ್ತಿಯಾ ಅಂತ ಡ್ರಾಗರ್ ಮತ್ತು ಚಾಕು ತೋರಿಸಿ ಆರೋಪಿಗಳು ಬೆದರಿಕೆ ಹಾಕಿರುವುದಾಗಿ ಪ್ರಥಮ್ ದೂರು ನೀಡಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತಾಲೂಕಿನ ರಾಮಯ್ಯನಪಾಳ್ಯ ಬಳಿ ಘಟನೆ ನಡೆದಿತ್ತು ಎನ್ನಲಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಆರಕ್ಷಕ ನಿರೀಕ್ಷಕ ಸಾದಿಕ್ ಪಾಷಾ ಸ್ಥಳ ಪರಿಶೀಲನೆ ನಡೆಸಿ ತನಿಖೆ ಆರಂಭಿಸುವುದಾಗಿ ತಿಳಿಸಿದ್ದಾರೆ.