ಚಿಕ್ಕಮಗಳೂರುಮೂಡಿಗೆರೆ–ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ-173ರ ಅಗಲೀಕರಣ ಕಾಮಗಾರಿಗೆ ಕೆಳಗೂರು ಸಮೀಪದ ಸಾಲುಮರ ತಿಮ್ಮಕ್ಕ ಉದ್ಯಾನವನದ ಬಳಿ ಮತ್ತೆ ಮರಗಳನ್ನು ಕಡಿದು ಹಾಕಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮರಗಳ ಕಟಾವು ಕುರಿತು ಕೇಂದ್ರ ಹಾಗೂ ರಾಜ್ಯ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿ, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮೂಡಿಗೆರೆ–ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ-173ರ ಅಗಲೀಕರಣ ಕಾಮಗಾರಿಗೆ ಕೆಳಗೂರು ಸಮೀಪದ ಸಾಲುಮರ ತಿಮ್ಮಕ್ಕ ಉದ್ಯಾನವನದ ಬಳಿ ಮತ್ತೆ ಮರಗಳನ್ನು ಕಡಿದು ಹಾಕಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮರಗಳ ಕಟಾವು ಕುರಿತು ಕೇಂದ್ರ ಹಾಗೂ ರಾಜ್ಯ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿ, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.ಮೂಡಿಗೆರೆ–ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ರಸ್ತೆ ನಿರ್ಮಾಣಕ್ಕಾಗಿ 2,326 ಮರಗಳನ್ನು ತೆರವುಗೊಳಿಸಲು ಸೆ.11, 2026ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ-1976ರ ಪ್ರಕಾರ ಮೂಡಿಗೆರೆ ಮತ್ತು ಚಿಕ್ಕಮಗಳೂರು ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿಗಳೂ ವೃಕ್ಷ ಅಧಿಕಾರಿಗಳಾಗಿದ್ದು, ಮರಗಳ ತೆರವಿಗೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ಕೈ ಗೊಳ್ಳಬೇಕಿತ್ತು. ಆದರೆ, ಎಲ್ಲಾ ಮರಗಳ ತೆರವಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಯೇ ಆದೇಶಿಸಿರುವುದು ಕಾಯ್ದೆ ಉಲ್ಲಂಘನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಅರಣ್ಯ ತೆರವು ಅನುಮತಿ ಪ್ರಶ್ನೆ:ಹೆದ್ದಾರಿ ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿಗೆ ಸಮಗ್ರ ಫಾರೆಸ್ಟ್ ಕ್ಲಿಯರೆನ್ಸ್ (ಎಫ್‌ಸಿ) ಪಡೆಯಲಾಗಿದೆಯೇ ಎಂಬ ಬಗ್ಗೆ ಪರಿಸರ ಪ್ರೇಮಿಗಳು ಪ್ರಶ್ನೆ ಎತ್ತಿದ್ದಾರೆ. ಯೋಜನಾ ಮಾರ್ಗದ ಹಲವು ಕಡೆ ಸೂಕ್ಷ್ಮ ಅರಣ್ಯ ಚಹರೆ ಹೊಂದಿ ರುವ ಪ್ರದೇಶಗಳಿದ್ದು, ಮೀಸಲು ಅರಣ್ಯ ಸೇರಿದಂತೆ ಕೆಲವು ಅರಣ್ಯ ಪ್ರದೇಶಗಳನ್ನು ಎಫ್‌ಸಿ ಪ್ರಸ್ತಾವನೆಯಿಂದ ಹೊರಗಿಡ ಲಾಗಿದೆ ಎಂದು ಆರೋಪಿಸಲಾಗಿದೆ.ಎಫ್‌ಸಿ ಪ್ರಸ್ತಾವನೆಯಲ್ಲಿ ಕೇವಲ 0.9768 ಹೆ. ಅರಣ್ಯ ಪ್ರದೇಶ ಸೇರಿಸಲಾಗಿದೆ. ರಸ್ತೆ ಅಗಲವನ್ನು ಸುಮಾರು 5.5 ಮೀ. ನಿಂದ 10 ಮೀ.ಗೆ ಹೆಚ್ಚಿಸುವ ಹಿನ್ನೆಲೆಯಲ್ಲಿ ಹೆಚ್ಚುವರಿ ಅರಣ್ಯ ಪ್ರದೇಶ ಹಾಗೂ ಮರಗಳ ನಾಶವಾಗುವ ಸಾಧ್ಯತೆಯಿದ್ದರೂ, ಅದಕ್ಕೆ ಅಗತ್ಯ ಅನುಮತಿ ಪಡೆಯಲಾಗಿದೆಯೇ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಲಾಗಿದೆ.ರಸ್ತೆ ಅಗಲೀಕರಣಕ್ಕೆ ಒಟ್ಟು ಎಷ್ಟು ಅರಣ್ಯ ಭೂಮಿ ಅಗತ್ಯವಿದೆ ಹಾಗೂ ಯೋಜನೆಗೆ ಸಂಬಂಧಿಸಿದ ಎಲ್ಲ ಕಾನೂನುಬದ್ಧ ಅನು ಮತಿಗಳ ಸ್ಥಿತಿಗತಿ ಅರಣ್ಯ ಇಲಾಖೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಲಾಗಿದೆ.ಆನೆಗಳ ಸಂಚಾರದ ಬಗ್ಗೆ ಪರಿಶೀಲನೆ ಅಗತ್ಯ:ಈ ಪ್ರದೇಶದಲ್ಲಿ ಆನೆಗಳ ಸಂಚಾರ ಮತ್ತು ರಸ್ತೆ ದಾಟುವಿಕೆ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ವರದಿ ನೀಡಿದ ಹಿನ್ನೆಲೆಯಲ್ಲಿ ವನ್ಯಜೀವಿಗಳ ಸಂಚಾರದ ಪ್ರದೇಶ ಪರಿಗಣಿಸದೆ ಯೋಜನೆ ಮುಂದುವರಿಸುವುದು ಸರಿಯಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂಪೂರ್ಣ ಯೋಜನಾ ಮಾರ್ಗದಲ್ಲಿರುವ ಅರಣ್ಯ ಮತ್ತು ವನ್ಯಜೀವಿ ಸಂಚಾರ ಪ್ರದೇಶಗಳ ಕುರಿತು ಸಮಗ್ರ ಪರಿಶೀಲಿಸಬೇಕು ಎಂದು ಮನವಿ ಮಾಡಲಾಗಿದೆ.ಸ್ಟೇಜ್-2 ಎಫ್‌ಸಿ ಮುನ್ನವೇ ಮರ ಕಟಾವು ಆರೋಪ:ಸಂಬಂಧಿತ ಅರಣ್ಯ ಭೂಮಿಗೆ ಸ್ಟೇಜ್-2 ಫಾರೆಸ್ಟ್ ಕ್ಲಿಯರೆನ್ಸ್ ದೊರೆಯುವ ಮುನ್ನವೇ ಯೋಜನಾ ಪ್ರದೇಶದಲ್ಲಿ ಮರಗಳ ಕಟಾವು ಆರಂಭಿಸಲಾಗಿದೆ ಎಂಬುದು ಮತ್ತೊಂದು ಗಂಭೀರ ಆರೋಪ. ಈಗಾಗಲೇ 50ಕ್ಕೂ ಹೆಚ್ಚು ಪಾರಂಪರಿಕ ಮರ ಗಳನ್ನು ಕಡಿಯಲಾಗಿದೆ ಎಂದು ಪರಿಸರ ಪ್ರೇಮಿಗಳು ದೂರಿದ್ದಾರೆ. ಈ ಕ್ರಮ ಸುಪ್ರೀಂಕೋರ್ಟ್‌ನ ಡಬ್ಲ್ಯು.ಪಿ.(ಸಿ) ನಂ. 202/1995ರ ಆದೇಶದ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.ಕೇಂದ್ರ ಸರ್ಕಾರದ ಗ್ರೀನ್ ಹೈವೇಸ್ ಪಾಲಿಸಿ-2015ರ ನಿಯಮಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಯೋಜನಾ ವೆಚ್ಚದಲ್ಲಿ ನಿಗದಿತ ಶೇ.1ರಷ್ಟು ಮೊತ್ತ ಹಸಿರು ಹೆದ್ದಾರಿ ಸಂಬಂಧಿತ ಕಾರ್ಯಗಳಿಗೆ ಮೀಸಲಿಡುವಂತೆ ಕ್ರಮ ಕೈಗೊಳ್ಳಬೇಕು. ಈ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ನಿಯಮ ಉಲ್ಲಂಘನೆಯಾಗಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಉಳಿದಿರುವ ಮರಗಳು ಮತ್ತು ಅರಣ್ಯ ಸಂರಕ್ಷಿಸಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.