
ಎಸ್‌ಐಆರ್ : ಕೇಂದ್ರ ಸರ್ಕಾರದ ಹಸ್ತಕ್ಷೇಪ ವಿರೋಧಿಸಿ ಪ್ರತಿಭಟನೆ
ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಬಿಜೆಪಿ ಏಜೆಂಟ್‌ನಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ ಶಾಸಕ ಎಚ್.ಡಿ.ತಮ್ಮಯ್ಯ, ಕೂಡಲೇ ಮುಖ್ಯ ಆಯುಕ್ತ ಸ್ಥಾನದಿಂದ ಅವರನ್ನು ವಜಾಗೊಳಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.ಜ್ಞಾನೇಶ್ ಕುಮಾರ್ ಧೋರಣೆ ಖಂಡಿಸಿ ಹಾಗೂ ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ನಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೆ ನಡೆದ ಪ್ರತಿಭಟನಾ ಮೆರವಣಿಗೆ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.ಜ್ಞಾನೇಶ್ ಕುಮಾರ್ ಅವರು ಭ್ರಷ್ಟ ಅಧಿಕಾರಿ ಎಂದು ಆರೋಪಿಸಿದ ತಮ್ಮಯ್ಯ, ಬಿಜೆಪಿಯಿಂದ ಮುಂದಿನ ದಿನಗಳಲ್ಲಿ ರಾಜಕೀಯ ಅನುಕೂಲದ ಕಾರಣಕ್ಕೆ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು. ಬಿಜೆಪಿಯವರು ಬೆದರಿಸಿ ಮಾಡಬಾರದ ಕೆಲಸ ಮಾಡಿಸುತ್ತಿದ್ದಾರೆ ಎಂದರು.ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಮೂಲಕ ಅರ್ಹ ಮತದಾರರನ್ನು ಮತ ದಾರರ ಪಟ್ಟಿಯಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಇದರಿಂದ ಜನರ ಮತದಾನದ ಹಕ್ಕಿಗೆ ಧಕ್ಕೆಯಾಗಲಿದೆ. ಬಿಜೆಪಿ ಪರವಾಗಿರುವವರ ಹೆಸರನ್ನು ಮಾತ್ರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಜ್ಞಾನೇಶ್ ಕುಮಾರ್ ಸಹ ಕಾರ ನೀಡುತ್ತಿದ್ದಾರೆ ಎಂದು ದೂರಿದರು. ಯುವ ಮತದಾರರ ಮತದಾನದ ಹಕ್ಕಿಗೆ ಧಕ್ಕೆ ತರುವ ರೀತಿಯಲ್ಲಿ ಫಾರಂ ನಂ.6ರಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದರು.ಭದ್ರಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಬಿಜೆಪಿ ವಿರುದ್ಧ ಜನರಲ್ಲಿ ಅಸಮಾಧಾನ ಹೆಚ್ಚಾಗಿರುವುದರಿಂದ ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ದುರುಪ ಯೋಗಪಡಿಸಿಕೊಂಡು ಮುಂಬರುವ ಚುನಾವಣೆಗಳಲ್ಲಿ ಅಧಿಕಾರ ಪಡೆಯಲು ವಾಮಮಾರ್ಗ ಅನುಸರಿಸುತ್ತಿದೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ತರೀಕೆರೆ ಶಾಸಕ ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ಎಂ.ಸಿ.ಶಿವಾನಂದ ಸ್ವಾಮಿ, ಎಂ.ಎಲ್.ಮೂರ್ತಿ, ಎಚ್.ಎಚ್.ದೇವರಾಜ್, ಕೆ.ಮಹಮದ್, ನಯಾಜ್ ಅಹಮದ್, ಬಿ.ಎಚ್.ಹರೀಶ್, ಪ್ರವೀಣ್, ರಮೇಶ್, ರಾಬಿನ್ ಮೋಸಸ್, ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಾರೂಕ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಮಧುಸೀರ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.