ರಾಮನಗರ: ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಮತದಾರರ ಪಟ್ಟಿಯ ನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆ. ಜ್ಞಾನೇಶ್ ಕುಮಾರ್ ಅಪರಾಧ ಮತ್ತು ದೇಶ ದ್ರೋಹದ ಕೃತ್ಯ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು. ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಚುನಾವಣಾ ಆಯೋಗವನ್ನು ಬಿಜೆಪಿ ಕಾರ್ಯಾಲಯ ಮಾಡಬೇಡಿ. ದೇಶದಲ್ಲಿ ಸಂವಿಧಾನವೇ ದೊಡ್ಡದು. ಜ್ಞಾನೇಶ್ ಕುಮಾರ್ ಕೂಡಲೇ ರಾಜೀನಾಮೆ ನೀಡಬೇಕೆಂಬ ಘೋಷಣೆಗಳನ್ನು ಕೂಗಿ ಕಾಂಗ್ರೆಸ್ಸಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿಎನ್ಆರ್ ವೆಂಕಟೇಶ್ ಮಾತನಾಡಿ, ಚುನಾವಣಾ ಆಯೋಗ ಸ್ವತಂತ್ರ ಮತ್ತು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಟೀಕಿಸಿದರು.ಎಸ್ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಅಕ್ರಮವಾಗಿ ಮತ್ತು ಏಕಪಕ್ಷೀಯವಾಗಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುತ್ತಿದೆ. ಕರ್ನಾಟಕದಲ್ಲಿಯೇ ಕೋಟ್ಯಂತರ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಅಥವಾ ನಕಲಿ ವರ್ಗೀಕರಣದ ಹೆಸರಿನಲ್ಲಿ ಬ್ಲಾಕ್ ಮಾಡಲಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಬಿ.ಚೇತನ್ ಕುಮಾರ್, ವಿ.ಎಚ್.ರಾಜು, ಪೂಜಾರಿಪಾಳ್ಯ ಕೃಷ್ಣಮೂರ್ತಿ, ವೆಂಕಟೇಶ್, ಪ್ರಮೋದ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಎಚ್.ನರಸಿಂಹಯ್ಯ, ಮುಖಂಡರಾದ ಕಲ್ಪನಾ ಶಿವಣ್ಣ, ಕೋಕಿಲಾ, ಗಿರಿಜಮ್ಮ, ಆಯಿಷಾ ಬಾನು, ಬೈರೇಗೌಡ, ಗುರುಪ್ರಸಾದ್, ರವಿ, ರೈಡ್ ನಾಗರಾಜು, ಪುಟ್ಟರಾಜು, ಕುರುಬಳ್ಳಿ ರಘು, ದೇವರಾಜು, ಅನಿಲ್ ಜೋಗೆಂದರ್, ಭೂಷಣ್, ಫೈರೋಜ್ ಖಾನ್, ಶಂಭೂಗೌಡ, ನರಸಿಂಹಯ್ಯ, ಗುಡ್ಡೆವೆಂಕಟೇಶ್, ಶಿವಶಂಕರ್, ಚಿಕ್ಕಸ್ವಾಮಿ, ಕೈಲಾಂಚ ಗಿರಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರಿ ‘ಮತ ಕಳ್ಳತನ’ ಮಾಡಲಾಗುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂಪೂರ್ಣ ನಿಯಮಾನುಸಾರ ನಡೆಯುತ್ತಿಲ್ಲ. ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಕೈಬಿಟ್ಟಿರುವ ಹೊಸ ಕಾನೂನು, ಸಂಸ್ಥೆಯ ಸ್ವಾಯತ್ತತೆಯನ್ನು ದುರ್ಬಲಗೊಳಿಸಿದೆ.
ಕೋಟ್...
- ವಿ.ಎಚ್.ರಾಜು, ಅಧ್ಯಕ್ಷರು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ
ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.