ಮಳಿಗೆಗಳ ಹರಾಜು ಮುಂದೂಡಿಕೆ ವಿರುದ್ಧ ಲೋಕಾಯುಕ್ತಕ್ಕೆ ದೂರು

KannadaprabhaNewsNetwork | Published : Apr 5, 2025 12:50 AM

ಸಾರಾಂಶ

ನಗರದ ಗಾಂಧಿ ಮೈದಾನದಲ್ಲಿರುವ ತಾಲೂಕು ಕ್ರೀಡಾಂಗಣದ ವಾಣಿಜ್ಯ ಮಳಿಗೆಗಳ ಮರು ಹರಾಜು ಪ್ರಕ್ರಿಯೆ ಕ್ರೀಡಾ ಇಲಾಖೆ ಅಧಿಕಾರಿಗಳು ಪದೇಪದೇ ಮುಂದೂಡುತ್ತಿದ್ದಾರೆ. ಕರ್ತವ್ಯಲೋಪ ಎಸಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಗೋವಿಂದ ಹೇಳಿದ್ದಾರೆ.

- ಪ್ರಭಾವಿಗಳ ಕೈಗೊಂಬೆಯಾಗಿರುವ ಅಧಿಕಾರಿಗಳ ವಿರುದ್ಧ ತನಿಖೆಯಾಗಬೇಕು: ಗೋವಿಂದ ಒತ್ತಾಯ

- - -

ಕನ್ನಡಪ್ರಭ ವಾರ್ತೆ ಹರಿಹರ

ನಗರದ ಗಾಂಧಿ ಮೈದಾನದಲ್ಲಿರುವ ತಾಲೂಕು ಕ್ರೀಡಾಂಗಣದ ವಾಣಿಜ್ಯ ಮಳಿಗೆಗಳ ಮರು ಹರಾಜು ಪ್ರಕ್ರಿಯೆ ಕ್ರೀಡಾ ಇಲಾಖೆ ಅಧಿಕಾರಿಗಳು ಪದೇಪದೇ ಮುಂದೂಡುತ್ತಿದ್ದಾರೆ. ಕರ್ತವ್ಯಲೋಪ ಎಸಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಗೋವಿಂದ ಹೇಳಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 48 ಮಳಿಗೆಗಳ ಬಾಡಿಗೆ ಕರಾರು ಅವಧಿ 2019ರ ಡಿಸೆಂಬರಲ್ಲೇ ಪೂರ್ಣಗೊಂಡಿದೆ. ಕ್ರೀಡಾ ಅಧಿಕಾರಿಗಳು ಅಂದೇ ಸ್ವಪ್ರೇರಿತರಾಗಿ ಎಲ್ಲ ಮಳಿಗೆಗಳ ಬಾಡಿಗೆದಾರರನ್ನು ಖಾಲಿ ಮಾಡಿಸಿ, ಹೊಸದಾಗಿ ನಿಯಮಾನುಸಾರ ಹರಾಜು ಪ್ರಕ್ರಿಯೆ ಕೈಗೊಳ್ಳಬೇಕಿತ್ತು. ಆದರೆ, ಅದಾಗಿಲ್ಲ. ಅಧಿಕಾರಿಗಳ ತಾತ್ಸಾರ ಧೋರಣೆಯಿಂದಾಗಿ ಸಂಘಟನೆಯಿಂದ 182 ದಿನಗಳಿಂದ ವಿವಿಧ ರೀತಿಯಲ್ಲಿ ಪ್ರತಿಭಟಿಸುತ್ತಿದ್ದೇವೆ ಎಂದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಕ್ಕೆ ಲಕ್ಷಾಂತರ ರು. ನಷ್ಟವಾಗಿದೆ. ಅಧಿಕಾರಿಗಳು ಮಳಿಗೆ ಬಾಡಿಗೆದಾರರೊಂದಿಗೆ ಶಾಮೀಲಾಗಿ, ರಾಜಕೀಯ ಮುಖಂಡರ ಕೈಗೊಂಬೆಯಾಗಿದ್ದಾರೆ. ಈ ಹಿಂದೆ ಕೆಲ ಮಳಿಗೆ ಬಾಡಿಗೆದಾರರು ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿದ್ದು, ಅವರನ್ನು ಹೊರತುಪಡಿಸಿ ಇನ್ನುಳಿದ ಮಳಿಗೆಗಳಿಗೆ ಮರುಹರಾಜು ಮಾಡಬೇಕು ಎಂದು ಕಿಡಿಕಾರಿದರು.

2022ರಲ್ಲಿ ಕ್ರೀಡಾ ಇಲಾಖೆ ಮಳಿಗೆ ಮರುಹರಾಜು ನಡೆಸುತ್ತೇವೆಂದು 184 ಜನರಿಂದ ತಲಾ ₹500 ಅರ್ಜಿ ಶುಲ್ಕ ವಸೂಲು ಮಾಡಿದ್ದಾರೆ. ಅರ್ಜಿಗಳಿಂದ ₹92,000 ಸಂದಾಯ ಆಗಿದೆ. ಅಲ್ಲದೇ, 2025ರ ಮಾರ್ಚ್‌ 13, ಮಾ.20 ಮತ್ತು ಏ.1ರಂದು ಮಳಿಗೆಗಳ ಮರುಹರಾಜು ಕೈಗೊಳ್ಳುತ್ತೇವೆಂದು ಘೋಷಿಸಿದ್ದರು. ಆದರೆ, ಎಲ್ಲ ದಿನಾಂಕಗಳನ್ನು ಮುಂದೂಡಿದ್ದಾರೆ. ಏ.7ರಂದು ಅಂತಿಮವಾಗಿ ತಿಳಿಸುತ್ತೇವೆ ಎಂದು 74 ಬಿಡ್‍ದಾರರಿಂದ ತಲಾ ₹25,000ದಂತೆ ಡಿ.ಡಿ. ಪಾವತಿ ಮಾಡಿಸಿಕೊಂಡಿದ್ದಾರೆ ಎಂದರು.

ತಾಲೂಕಿನ ಹಾಲಿ ಶಾಸಕರಾಗಲಿ, ಮಾಜಿ ಶಾಸಕರಾಗಲಿ, ಗ್ಯಾರಂಟಿ ಅನುಷ್ಠಾನ ಯೋಜನೆ ಅಧ್ಯಕ್ಷರಾಗಲಿ, ಪ್ರತಿಭಟನಾ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸದೇ ಇರುವುದು ವಿಪರ್ಯಾಸ. ಈ ಬಗ್ಗೆ ಸಂಘಟನೆಯಿಂದ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೂ, ಮೇಲಧಿಕಾರಿಗಳಿಗೂ, ರಾಜಕೀಯ ಮುಖಂಡರಿಗೂ ಸರ್ಕಾರದ ಗಮನಕ್ಕೂ ತಂದು ಮನವಿ ಪತ್ರ ಸಲ್ಲಿಸಿದ್ದೇವೆ. ಕೆಲ ಪ್ರಭಾವಿ ಉದ್ಯಮಿದಾರರ ಪ್ರಭಾವದಿಂದ ಮರುಹರಾಜು ಮುಂದೂಡುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂಬ ಉದ್ದೇಶದಿಂದ ಲೋಕಾಯುಕ್ತರಿಗೆ ದೂರು ನೀಡುತ್ತಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಆನಂದ್ ಎಂ.ಆರ್., ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಶ್ರೀನಿವಾಸ್, ಎಚ್.ಪಿ. ಪ್ರಭಾಕರ್, ಚರಣ್, ರಾಜಪ್ಪ, ಸಂಜೀವಪ್ಪ ಇತರರು ಇದ್ದರು.

- - -

ಕೋಟ್‌

9 ಮಳಿಗೆಗಳ ಬಾಡಿಗೆದಾರರು ಕ್ರೀಡಾ ಇಲಾಖೆಯಿಂದ ಪರವಾನಿಗೆ ಪಡೆಯದೇ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದಾರೆ. ಮಳಿಗೆ ಬಾಡಿಗೆ ಹಣ ಎಲ್ಲಿ, ಯಾರಿಗೆ ಜಮಾ ಆಗುತ್ತಿದೆ ಎಂಬ ಯಕ್ಷಪ್ರಶ್ನೆಯಾಗಿದೆ. ಬಾಡಿಗೆದಾರರು ಹರಿಹರ ನಗರಸಭೆಯಲ್ಲಿ ಉದ್ಯಮ ಪರವಾನಿಗೆ ಪಡೆದುಕೊಳ್ಳದೇ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ತಂದಿದ್ದಾರೆ

- ಎಸ್.ಗೋವಿಂದ, ತಾಲೂಕು ಅಧ್ಯಕ್ಷ

- - -

-04ಎಚ್‍ಆರ್‍ಆರ್01:

ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಗೋವಿಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article