- ಸ್ಟ್ರಾಂಗ್ ರೂಂ ಬೀಗ ತೆಗೆಯದೇ ಒಡೆದಿದ್ದು ಅಕ್ರಮದ ವಾಸನೆ: ಆರೋಪ - - -
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಗಳಿಗೆ ದೂರು ನೀಡುವ ಜೊತೆಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕ್ಷೇತ್ರದ ಮತ ಎಣಿಕೆ ಕೇಂದ್ರವಾದ ಡಿಆರ್‌ಆರ್ ಶಾಲೆಯ ಸ್ಟ್ರಾಂಗ್ ರೂಂಗಳ ಬಾಗಿಲುಗಳ ಬೀಗ ತೆಗೆಯುವ ಬದಲಿಗೆ, ಬಾಗಿಲುಗಳಿಗೆ ಅಳವಡಿಸಿದ್ದ ಚಿಲಕಗಳನ್ನೇ ಒಡೆದಿದ್ದಾರೆ. ಇದರಿಂದಲೇ ಅಲ್ಲಿ ಅಕ್ರಮದ ವಾಸನೆ ಬಂದಿದೆ ಎಂದು ದೂರಿದರು.ಚುನಾವಣಾಧಿಕಾರಿ ಬೀಗ ಮರೆತು ಬರುತ್ತಾರೆಂದರೆ ಅಲ್ಲೇನೋ ನಡೆದಿದೆಯೆಂದೇ ಅರ್ಥ. ಜವಾಬ್ದಾರಿಯುತ ಚುನಾವಣಾಧಿಕಾರಿಗಳು ಮೋಸ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ರಾಜ್ಯ, ಕೇಂದ್ರ ಚುನಾವಣಾ ಆಯೋಗಗಳಿಗೆ ದೂರು ನೀಡುವ ಜೊತೆಗೆ ನ್ಯಾಯಾಲಯದಲ್ಲೂ ಕಾನೂನು ಹೋರಾಟ ನಡೆಸುವೆ ಎಂದು ಎಚ್ಚರಿಸಿದರು.
ನಮ್ಮ ಬಿಜೆಪಿ ಕಾರ್ಯಕರ್ತರು ಎದೆಗುಂದುವುದು ಬೇಡ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಸಾಧಿಸಲಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ತಮಗೆ ಮತ ನೀಡಿದ ಬೆಂಬಲಿಸಿದ ಪ್ರತಿಯೊಬ್ಬ ಮತದಾರರಿಗೂ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಪಕ್ಷ, ನನ್ನ ಪರವಾಗಿ ಕೆಲಸ ಮಾಡಿದ ಎಲ್ಲ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು, ಸ್ನೇಹಿತರು, ಎಲ್ಲ ಸಮುದಾಯಗಳಿಗೂ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಹೇಳಿದರು.
ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ಸಿನ ಬಗ್ಗೆ ಸಾಕಷ್ಟು ಅಸಮಾಧಾನ ಹೊಂದಿತ್ತು. ಈ ಹಿನ್ನೆಲೆ ಮುಸ್ಲಿಮರು ಎಸ್‌ಡಿಪಿಐಗೆ ಮತದಾನ ಮಾಡಿದ್ದಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾದಿಯಾಗಿ ಇಡೀ ರಾಜ್ಯ ಸರ್ಕಾರದ ಸಂಪುಟ ಸದಸ್ಯರು, ಮುಖಂಡರೆಲ್ಲಾ ಬಂದು ದಕ್ಷಿಣ ಕ್ಷೇತ್ರದಲ್ಲಿ ಕುಳಿತರೂ ಇಲ್ಲಿ ಕೇವಲ 4800 ಮತಗಳ ಅಂತರದಲ್ಲಿ ಮಾತ್ರ ಗೆದ್ದಿದ್ದಾರೆ. ಸಾವಿರಾರು ಕೋಟಿ ರು. ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.
- - -