ಶಿವಮೊಗ್ಗ: ನಾಗರಿಕರು ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದಾಗ ಮಾತ್ರ ಸುಧಾರಣೆ ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.ನಗರದ ಶುಭಂ ಸಭಾಂಗಣದಲ್ಲಿ ಬುಧವಾರ ಶಿವಮೊಗ್ಗ ಜಿಲ್ಲಾ ಪೊಲೀಸ್, ಶಿವಮೊಗ್ಗ ಸಂಚಾರ ಪೊಲೀಸ್ ಹಾಗೂ ನೆಹರೂ ರಸ್ತೆಯ ವರ್ತಕರ ಸಂಘ ಜಂಟಿಯಾಗಿ ನೆಹರೂ ರಸ್ತೆಯ ಸುಗಮ ಸಂಚಾರ ವ್ಯವಸ್ಥೆಗೆ ಹಮ್ಮಿಕೊಂಡಿದ್ದ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.
ನಗರದ ಅಮೀರ್ ಅಹ್ಮದ್ ವೃತ್ತದಿಂದ ಸೀನಪ್ಪಶೆಟ್ಟಿ ವೃತ್ತದವರೆಗೆ ಪ್ರತಿನಿತ್ಯ ಸಾವಿರಾರು ದ್ವಿಚಕ್ರ ಮತ್ತು ನೂರಾರು ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ಸಂಬಂಧಿಸಿದಂತೆ ಅನೇಕ ದೂರುಗಳು ಬರುತ್ತಿದ್ದು, ಎಲ್ಲರೂ ಕೈಜೋಡಿಸಿದರೆ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದರು.ಈಗಾಗಲೇ ಒಟ್ಟು 21 ಕನ್ಸರ್‌ವೆನ್ಸಿಗಳನ್ನು ಪಾಲಿಕೆಯಿಂದ ಅಭಿವೃದ್ಧಿಪಡಿಸಲಾಗಿದೆ. ಅಲ್ಲಿ ಸಿಸಿ ಕ್ಯಾಮೆರಾ ಮತ್ತು ಬೆಳಕಿನ ವ್ಯವಸ್ಥೆ ಮಾಡಲು ಪಾಲಿಕೆ ಒಪ್ಪಿಕೊಂಡಿದ್ದು, ವರ್ತಕರ ಸಂಘದವರು ಕನ್ಸರ್‌ವೆನ್ಸಿ ನಿರ್ವಹಣೆಗೆ ಒಬ್ಬ ಸೆಕ್ಯೂರಿಟಿಯನ್ನು ನೇಮಿಸಿದರೆ ನೆಹರೂ ರಸ್ತೆಯ 150ಕ್ಕೂ ಹೆಚ್ಚಿನ ಅಂಗಡಿಗಳ ಮಾಲೀಕರು ಮತ್ತು ಸಿಬ್ಬಂದಿಗಳ ದ್ವಿಚಕ್ರ ವಾಹನಗಳನ್ನು ಕನ್ಸರ್‌ವೆನ್ಸಿಯಲ್ಲಿ ನಿಲುಗಡೆ ಮಾಡಿದರೆ ಸಮಸ್ಯೆ ಕಡಿಮೆಯಾಗುತ್ತದೆ. ಅಂಗಡಿ ಮುಂಭಾಗ ಕೆಲವು ವರ್ತಕರು ಫುಟ್‌ಬೋರ್ಡ್ ಜಾಲರಿ ಹಾಕುತ್ತಿದ್ದಾರೆ. ಇದರಿಂದ ದ್ವಿಚಕ್ರವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಡಿಮೆಯಾಗುತ್ತದೆ. ಇನ್ನು ಮುಂದೆ ನಿರ್ಧಾಕ್ಷಿಣ್ಯವಾಗಿ ಅದನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.ಹಾಸ್ಪೆಟಲ್ ಬಳಿಯ ಕನ್ಸರ್‌ವೆನ್ಸಿಗಳಲ್ಲಿ ಆಸ್ಪತ್ರೆಗೆ ಬರುವ ರೋಗಿಗಳ, ಸಂಬಂಧಿಕರ ಮತ್ತು ಸಿಬ್ಬಂದಿಗಳ ವಾಹನಗಳನ್ನು ನಿಲುಗಡೆಗೊಳಿಸಬೇಕು. ನೆಹರೂ ರಸ್ತೆಯಲ್ಲಿ ನಾಲ್ಕುಚಕ್ರ ಹಾಗೂ ದ್ವಿಚಕ್ರವಾಹನಗಳ ನಿಲುಗಡೆಗೆ ಪೇಯಿಟಿಂಗ್ ಮಾಡಿ ನಿಗದಿಪಡಿಸಿದ ಜಾಗದಲ್ಲೇ ಅದನ್ನು ನಿಲ್ಲಿಸಬೇಕು. ಪ್ರತಿ ಅಂಗಡಿಗಳ ಮುಂದೆ ರಸ್ತೆ ಕಾಣುವಂತೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಆಗ ಯದ್ವಾತದ್ವಾ ನಿಲುಗಡೆ ಮಾಡುವ ವಾಹನಗಳು ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗುತ್ತದೆ. ಅವರಿಗೆ ದಂಡ ವಿಧಿಸಲಾಗುವುದು. ಸದ್ಯಕ್ಕೆ ಸಂಚಾರ ವಿಭಾಗದಲ್ಲಿರುವ ಟೈಗರ್ ವಾಹನದ ಅವಧಿ ಮೀರಿದ್ದು, ಅದು ಬಳಸಲು ಅವಕಾಶ ಇಲ್ಲದೇ ಇರುವುದರಿಂದ ಟೈಗರ್ ವಾಹನ ಬರುವವರೆಗೆ ಸಮಸ್ಯೆ ಇದೆ. ಜನಪ್ರತಿನಿಧಿಗಳಿಗೆ ಈಗಾಗಲೇ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.ಟ್ರಾಫಿಕ್ ಉಲ್ಲಂಘನೆ ಮತ್ತು ಬೇಕಾಬಿಟ್ಟಿ ವಾಹನ ನಿಲುಗಡೆ ಬಗ್ಗೆ ದೂರುಗಳಿದ್ದರೆ ಟೋಲ್ ಫ್ರೀ ನಂಬರ್ ಟ್ರಾಫಿಕ್ ಹೆಲ್ಪ್‌ಲೈನ್ 8277983404ಕ್ಕೆ ಸಂಪರ್ಕಿಸುವಂತೆ ತಿಳಿಸಿದರು.ಸಾರ್ವಜನಿಕರು ಪೊಲೀಸರೊಂದಿಗೆ ಸಭ್ಯತೆಯಿಂದ ವರ್ತಿಸಬೇಕು. ಅವರನ್ನು ಗೌರವಿಸಬೇಕು. ಕಠಿಣ ಸಂದರ್ಭಗಳಲ್ಲೂ ಮಳೆ, ಬಿಸಲು ಲೆಕ್ಕಿಸದೆ ತಾಸುಗಟ್ಟಲೆ ಸಂಚಾರಿ ಪೊಲೀಸರು ಕಾರ್ಯನಿರ್ವಹಿಸುತ್ತಾರೆ. ಅವರ ಬಳಿ ವಿನಾಕಾರಣ ಜಗಳ ಮಾಡದೆ ಸಹಕರಿಸಬೇಕು ಎಂದು ಕೋರಿದರು.ಸಭೆಯಲ್ಲಿ ಸಂಚಾರಿ ಇನ್ಸ್‌ಪೆಕ್ಟರ್ ದೇವರಾಜ್, ಪ್ರಮುಖರಾದ ಪಾಲಿಕೆಯ ಎಇಇ ಜ್ಯೋತಿ, ಪುಷ್ಪಾವತಿ, ಪಿಎಸ್‌ಐ ಭಾರತಿ, ಸ್ವಪ್ನ ಸೇರಿದಂತೆ ಸಂಚಾರಿ ಠಾಣೆಯ ಪೊಲೀಸರು ಮತ್ತು ನೆಹರೂ ರಸ್ತೆಯ ವರ್ತಕರ ಸಂಘದ ಸದಸ್ಯರು, ಪದಾಧಿಕಾರಿಗಳು ಇದ್ದರು.
ಪ್ರತಿ ಮನೆಯಲ್ಲೂ ಮೂರ್‍ನಾಲ್ಕು ವಾಹನಗಳಿವೆ. ನೆಹರೂ ರಸ್ತೆಯ ಕಸ್ತೂರಬಾ ಕಾಲೇಜು ಹಿಂಭಾಗದಲ್ಲಿ ಕನ್ಸರ್‌ವೆನ್ಸಿ ಇದೆ. ಜೆ.ಎಚ್.ಪಟೇಲ್ ಕಾಂಪ್ಲೆಕ್ಸ್‌ನಲ್ಲೂ ಕೂಡ ಮಲ್ಟಿಲೆವೆಲ್ ಪಾರ್ಕಿಂಗ್ ವ್ಯವಸ್ಥೆಗೆ ಜಾಗ ಕಲ್ಪಿಸಬಹುದು. ಸುಲ್ತಾನ್‌ಗೋಲ್ಡ್ ಪಕ್ಕದಲ್ಲೂ ಕೂಡ ಪಾಲಿಕೆಗೆ ಸೇರಿದ ಜಾಗದಲ್ಲಿ ದ್ವಿಚಕ್ರ ವಾಹನಕ್ಕೆ ಅವಕಾಶ ನೀಡಬಹುದು. ನಾಗರಿಕರು ಶಿಷ್ಟಾಚಾರ ಮತ್ತು ಶಿಸ್ತುಪಾಲನೆ ಮಾಡದೇ ಇದ್ದಲ್ಲಿ ಸಮಸ್ಯೆ ಬಗೆಹರಿಯುವುದಿಲ್ಲ. -ರಂಗನಾಥ್, ಅಧ್ಯಕ್ಷ, ವರ್ತಕರ ಸಂಘ ವ್ಯಾಪಾರದಲ್ಲಿ ಸ್ಪರ್ಧೆ ಇದೆ. ಪಾರ್ಕಿಂಗ್ ಜಾಗ ಇಲ್ಲದೆ ಗ್ರಾಹಕರು ಬರುವುದಿಲ್ಲ. ಸಿಗ್ನಲ್‌ಲೈಟ್‌ಗಳಲ್ಲಿ ನಿಲ್ಲುವ ತಾಳ್ಮೆ ಕೂಡ ಸವಾರರಿಗೆ ಇಲ್ಲ, ಮೊದಲು ನಾವು ಬದಲಾಗಬೇಕು. ನಾಗರಿಕ ಪ್ರಜ್ಞೆ ಇರಬೇಕು ಸಂಚಾರಿ ಪೊಲೀಸರಿಗೆ ವರ್ತಕರ ಪೂರ್ಣ ಸಹಕಾರವಿದೆ.- ಅಶ್ವತ್ಥನಾರಾಯಣಶೆಟ್ಟಿ, ಶ್ರೀನಿಧಿ ಸಿಲ್ಕ್‌ನ ಪ್ರಮುಖರು