ಕನ್ನಡಪ್ರಭ ವಾರ್ತೆ ಸಿಂದಗಿ
ಕಳೆದ ತಿಂಗಳು ಸಿಂದಗಿ ತಾಲೂಕು ಆಸ್ಪತ್ರೆಯ ಸಿಬ್ಬಂದಿ ನಕಲಿ ಪತ್ರಕರ್ತರು ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಆ ಪ್ರಕರಣ ಸತ್ಯಕ್ಕೆ ದೂರವಾದದ್ದು ಎಂದು ಪತ್ರಕರ್ತ ನಿಂಗರಾಜ ಅತನೂರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆ ಇದೆ. ಈ ಬಗ್ಗೆ ಜನರು ನಮ್ಮ ಬಳಿ ಹೇಳಿಕೊಂಡಾಗ ನಾವು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದ್ದೇವು. ಸುಮಾರು ದಿನಗಳಾದರೂ ಅವರು ಮಾಹಿತಿ ನೀಡಲಿಲ್ಲ. ಹೀಗಾಗಿ, ಅಲ್ಲಿನ ಸಿಬ್ಬಂದಿಗಳ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿದ್ದೇವೆ ಎಂದು ಅವರು ದೂರು ದಾಖಲಿಸಿದ್ದಾರೆ.
ಅಲ್ಲಿ ಸುಮಾರು 35 ಸಿಸಿ ಟಿವಿ ಕ್ಯಾಮರ್‌ಗಳಿವೆ ಅವುಗಳನ್ನು ನೋಡಿ ಸಂಪೂರ್ಣ ತನಿಖೆ ಮಾಡಿ. ತಪ್ಪು ಯಾರದಿದೆ ಎಂದು ಪರಿಗಣಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಪೊಲೀಸ್ ಅಧಿಕಾರಿಗಳು ನಮ್ಮದು ಒಂದು ಕೌಂಟರ್ ಕೇಸ್ ದಾಖಲು ಮಾಡಿಕೊಂಡು ಸತ್ಯ ಅಸತ್ಯತೆ ಏನೆಂಬುದನ್ನು ತನಿಖೆ ಮಾಡಬೇಕು ಎಂದರು.ಕಳೆದ ತಿಂಗಳ ತಾಲೂಕು ಸಾರ್ವಜನಿಕ ಆಸ್ಪತ್ರಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಸಮಸ್ಯೆ ಮತ್ತು ಒಂದು ಬಾಣಂತಿ ಸಾವಿನ ವಿಷಯದ ಬಗ್ಗೆ ಅವರ ಜೊತೆಗೆ ಚರ್ಚೆ ಮಾಡಿದ್ದೇವು. ಹೀಗಾಗಿ, ಈ ರೀತಿ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಕರ್ತ ಶಿವಕುಮಾರ ಬಿರಾದಾರ ಮಾತನಾಡಿ, ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಸರಿಯಾಗಿ ಬರುತ್ತಿಲ್ಲ. ಈ ಬಗ್ಗೆ ಮಾಹಿತಿ ಹಕ್ಕಿನಡಿ ನ.14ರಂದು ಆಸ್ಪತ್ರೆಯ 6 ಜನ ಸಿಬ್ಬಂದಿ ಸಂಬಳ ಮತ್ತು ಬಯೋಮೆಟ್ರಿಕ್ ಹಾಜರಾತಿ ನಕಲು ಪ್ರತಿ ಒದಗಿಸುವಂತೆ ಕೇಳಿದ್ದೇವು. ಕೊಡುವುದಕ್ಕೆ ಬರುವುದಿಲ್ಲ ಎಂದರು. ಹಿಂಬರ ನೀಡಿ ಎಂದಾಗ ನ.27ರಂದು ನೀಡಿದರು. ಡಾ.ರಾಜಶೇಖರ 150, ಡಾ.ರಮೇಶ ರಾಠೋಡ 77, ಡಾ.ಸಾಯಬಣ್ಣ ಗುಣಕಿ 58, ಡಾ.ಶಂಕರರಾವ್ ದೇಶಮುಖ 217, ಡಾ.ವಿಜಯಮಹಾಂತೇಶ 66 ದಿನ ಗೈರು ಹಾಜರಾಗಿದ್ದು, ಸಂಪೂರ್ಣ ಸಂಬಳ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.