ಕನ್ನಡಪ್ರಭ ವಾರ್ತೆ ಉಡುಪಿ
ಕೋಟ್ಪಾ ಕಾಯ್ದೆಯಡಿ ಶಾಲಾ ಕಾಲೇಜುಗಳ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧವಿದ್ದು, ಇದನ್ನು ಉಲ್ಲಂಘಿಸುವ ಅಂಗಡಿಗಳ ಪರವಾನಗಿಯನ್ನು ಸ್ಥಳೀಯ ಸಂಸ್ಥೆಗಳು ತಕ್ಷಣ ರದ್ದುಪಡಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಸೂಚನೆ ನೀಡಿದರು.ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ, ಕೋಟ್ಪಾ-2003 ಕಾಯ್ದೆ ಅನುಷ್ಠಾನ ಕುರಿತ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೋಟ್ಪಾ ಕಾಯ್ದೆ ಉಲ್ಲಂಘಿಸಿ ಜಿಲ್ಲೆಯ 38 ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ದೂರು ಬಂದಿವೆ. ಈ ಬಗ್ಗೆ ಕೂಡಲೇ ಕ್ರಮವಹಿಸಬೇಕು. ಮಣಿಪಾಲದ 11, ಬೈಂದೂರಿನ 1 ಅಂಗಡಿಗಳ ಪರವಾನಗಿ ರದ್ದುಪಡಿಸಲಾಗಿದೆ. ಉಳಿದ ಅಂಗಡಿಗಳ ಪರವಾನಗಿಯನ್ನು ಕೂಡಲೇ ರದ್ದುಪಡಿಸಿ ಎಂದವರು ಆದೇಶಿಸಿದರು.
ಜಿಲ್ಲೆಯ ಕೋಡಿಬೆಂಗ್ರೆ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಲಾಗಿದೆ. ಉಳಿದ ಗ್ರಾಮಗಳನ್ನು ಸಹ ತಂಬಾಕುಮುಕ್ತ ಗ್ರಾಮಗಳನ್ನಾಗಿಸಲು ಗ್ರಾಪಂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹಕರಿಸಬೇಕು ಎಂದ ಅವರು, ಉಡುಪಿಯ ಕ್ಲಾಸಿಕಲ್ ನೆಸ್ಟ್, ಕಾರ್ಕಳದ ಪಂಚಮಿ ರೆಸಿಡೆನ್ಸಿ ಮತ್ತು ಗಂಗಾ ಪ್ಯಾರಡೈಸ್‌ಗಳನ್ನು ತಂಬಾಕು ಮುಕ್ತ ಅಪಾರ್ಟ್ಮೆಂಟ್‌ಗಳೆಂದು ಘೋಷಿಸಿ, ಪ್ರಮಾಣಪತ್ರ ನೀಡಲಾಗಿದೆ ಎಂದರು.ತಂಬಾಕು ಉತ್ಪನ್ನಗಳನ್ನು ಮಾರುವ ಅಂಗಡಿಗಳು ಪ್ರತ್ಯೇಕ ಪರವಾನಗಿ ಪಡೆಯಬೇಕು. ತಂಬಾಕಿನ ಉತ್ಪನ್ನಗಳ ಬಳಕೆಯಿಂದ ಮಕ್ಕಳ ಜೀವನವೇ ಹಾಳುಗುತ್ತದೆ. ಈ ಬಗ್ಗೆ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ., ಎಎಸ್ಪಿ ಪಿ.ಎ. ಹೆಗಡೆ, ಡಿಎಫ್ಓ ಗಣಪತಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.----------------ಜಿಲ್ಲಾಸ್ಪತ್ರೆ ಆವರಣದಲ್ಲಿಯೇ ಕೋಟ್ಪಾ ಉಲ್ಲಂಘನೆ !
ಏಪ್ರಿಲ್ ಮಾಹೆಯಲ್ಲಿ 5 ಕಡೆಗಳಲ್ಲಿ ದಿಢೀರ್ ದಾಳಿ ನಡೆಸಿ, ನಿಷೇಧಿತ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ 71 ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು 11,400 ರು. ದಂಡ ವಸೂಲಿ ಮಾಡಲಾಗಿದೆ. ಜಿಲ್ಲಾಸ್ಪತ್ರೆಯ ಆವರಣದಲ್ಲಿಯೂ ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸಿದ 11 ಪ್ರಕರಣಗಳಿಂದ 1100 ರು. ದಂಡ ವಸೂಲಿ ಮಾಡಲಾಗಿದೆ ಎಂದು ಡಿಸಿ ಸಭೆಯಲ್ಲಿ ವಿವರ ನೀಡಿದರು.