ರಾಜ್ಯದಲ್ಲಿ ಜನತಾ ಪರಿವಾರ ಸರ್ಕಾರವಿದ್ದ ಸಂದರ್ಭದಲ್ಲಿ ದಲಿತರಿಗೆ ಪೂರಕ ಯೋಜನೆಗಳನ್ನು ದೇವೇಗೌಡರು ಜಾರಿಗೊಳಿಸಿದ್ದಾರೆ. ದಲಿತರ ಶ್ರೇಯೋಭಿವೃದ್ಧಿಗೆ ಮತ್ತಷ್ಟು ಯೋಜನೆಗಳು ಜಾರಿಯಾಗಬೇಕಾದರೆ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿಯನ್ನು ಕೈಹಿಡಿಯಬೇಕು ಮಾಜಿ ಶಾಸಕ ಡಾ.ಕೆ.ಅನ್ನದಾನಿ ದಲಿತ ಸಮುದಾಯದವರಲ್ಲಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದಲ್ಲಿ ಜನತಾ ಪರಿವಾರ ಸರ್ಕಾರವಿದ್ದ ಸಂದರ್ಭದಲ್ಲಿ ದಲಿತರಿಗೆ ಪೂರಕ ಯೋಜನೆಗಳನ್ನು ದೇವೇಗೌಡರು ಜಾರಿಗೊಳಿಸಿದ್ದಾರೆ. ದಲಿತರ ಶ್ರೇಯೋಭಿವೃದ್ಧಿಗೆ ಮತ್ತಷ್ಟು ಯೋಜನೆಗಳು ಜಾರಿಯಾಗಬೇಕಾದರೆ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿಯನ್ನು ಕೈಹಿಡಿಯಬೇಕು ಮಾಜಿ ಶಾಸಕ ಡಾ.ಕೆ.ಅನ್ನದಾನಿ ದಲಿತ ಸಮುದಾಯದವರಲ್ಲಿ ಮನವಿ ಮಾಡಿದರು. ಸ್ಥಳೀಯ ಸಂಸ್ಥೆಗಳಲ್ಲಿ ದಲಿರಿಗೆ ಮೀಸಲಾತಿ ದೊರಕಿಸಿಕೊಟ್ಟು ರಾಜಕೀಯ ಸ್ಥಾನ-ಮಾನ ದೊರಕಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆ ಜಾರಿಗೆ ತಂದು ವ್ಯವಸಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇವೆಲ್ಲವೂ ದೇವೇಗೌಡರ ಕೊಡುಗೆಗಳಾಗಿವೆ. ನೀರಾವರಿಯಲ್ಲಿ ಇನ್ನಷ್ಟು ಯೋಜನೆಗಳು ದಲಿತರಿಗೆ ಸಿಗಬೇಕಾದರೆ ಕುಮಾರಸ್ವಾಮಿ ಗೆಲುವು ಮುಖ್ಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ದಲಿತರ ಕಲ್ಯಾಣಕ್ಕಾಗಿ ಮೀಸಲಾಗಿದ್ದ ೧೧೫೦೦ ಕೋಟಿ ರು. ಅನುದಾನವನ್ನು ಅನ್ಯ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ದಲಿತರಿಗೆ ಮೀಸಲಿಟ್ಟ ಅನುದಾನ ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಂಡರೆ ಕ್ರಿಮಿನಲ್ ಅಪರಾಧ ಎಂದು ಸರ್ಕಾರವೇ ಹೇಳುತ್ತದೆ. ಮತ್ತೊಂದೆಡೆ ಸರ್ಕಾರವೇ ಇಂತಹ ಕೆಲಕಕ್ಕೆ ಮುದಾಗಿರುವುದು ದಲಿತರಿಗೆ ಮಾಡಿರುವ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ೯೮ ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರುವ ಮೂಲಕ ದಲಿತರ ಬದುಕಿಗೆ ಪೆಟ್ಟು ನೀಡಿದ್ದರು. ಇದು ಸಂವಿಧಾನ ವಿರೋಧಿ ಕ್ರಮವಲ್ಲವೇ ಎಂದು ಪ್ರಶ್ನಿಸಿದರು. ಸಂವಿಧಾನ ಕೊಟ್ಟ ಅಂಬೇಡ್ಕರ್‌ಗೆ ಕಾಂಗ್ರೆಸ್ ಅಪಮಾನ ಮಾಡಿದೆ. ದಲಿತ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡಿದೆ ಎಂದು ಆರೋಪಿಸಿದರು. ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ.ಪರಮೇಶ್ವರ್ ಮುಂದಿಟ್ಟುಕೊಂಡು ದಲಿತರ ಓಟನ್ನು ಕಾಂಗ್ರೆಸ್ ಪಡೆಯುತ್ತಿದೆ. ಖರ್ಗೆ ಪ್ರಧಾನಿ ಅಭ್ಯರ್ಥಿಯಾಗುವುದಾದರೆ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶವೇಕೆ ನೀಡಲಿಲ್ಲ. ಖರ್ಗೆ ಪ್ರಧಾನಿಯಾಗುವುದು ಕಾಂಗ್ರೆಸ್ಸಿಗರಿಗೆ ಇಷ್ಟವಿಲ್ಲ. ಅದೇ ರೀತಿ ಡಾ.ಜಿ.ಪರಮೇಶ್ವರ್ ಸಿಎಂ ಆಗುವುದು ಬಹುತೇಕ ಕಾಂಗ್ರೆಸ್ ನಾಯಕರಿಗೆ ಇಷ್ಟವಿಲ್ಲ. ಖರ್ಗೆ, ಪರಮೇಶ್ವರ್ ಮುಖ ತೋರಿಸಿ ದಲಿತರ ಮತ ಪಡೆಯುವ ಹುನ್ನಾರ ಕಾಂಗ್ರೆಸ್‌ನದ್ದು ಎಂದು ಟೀಕಿಸಿದರು. ಮಾಜಿ ಸಚಿವ ಹಾಲ್ಕೋಡು ಹನುಮಂತಪ್ಪ ಮಾತನಾಡಿ, ರಾಜ್ಯದ ನೀರಾವರಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಲು ಪ್ರಭಾವಿಗಳು ಕೇಂದ್ರವನ್ನು ಪ್ರತಿನಿಧಿಸಬೇಕು. ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಆ ಪ್ರಭಾವ ಇದೆ. ಇದರಿಂದಾಗಿ ರಾಜ್ಯ ಮತ್ತು ಜಿಲ್ಲೆಗೆ ಒಳಿತಾಗಲಿದೆ ಎಂದರು. ಜನತಾ ಪರಿವಾರದ ಅವಧಿಯಲ್ಲೇ ರಾಜ್ಯದಲ್ಲಿ ಹಲವಾರು ಒಳ್ಳೆಯ ಕೆಲಸಗಳು ಜಾರಿಯಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಕುಮಾರಸ್ವಾಮಿಯವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಜೆಡಿಎಸ್ ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಸಾತನೂರು ಜಯರಾಂ, ಮುಖಂಡರಾದ ಕೃಷ್ಣಮೂರ್ತಿ, ಸಿ.ಕೆ. ಪಾಪಯ್ಯ, ಭದ್ರಾಚಲಮೂರ್ತಿ ಇತರರು ಗೋಷ್ಠಿಯಲ್ಲಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.