2 ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಬಳಕೆ ಸಂಪೂರ್ಣ ನಿಷೇಧ

KannadaprabhaNewsNetwork |  
Published : Dec 20, 2025, 03:00 AM IST
ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳ ಜೊತೆ ಪುರಸಭಾ ಅಧಿಕಾರಿಗಳಿಂದ ಸಭೆ ಸಂದರ್ಭ | Kannada Prabha

ಸಾರಾಂಶ

ಪುರಸಭೆ ವ್ಯಾಪ್ತಿಯಲ್ಲಿ ಎರಡು ಲೀಟರ್‌ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್‌ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಟಿ. ಜೆ. ಗಿರೀಶ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಎರಡು ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ.ಜೆ. ಗಿರೀಶ್ ತಿಳಿಸಿದ್ದಾರೆ.120 ಮೈಕ್ರಾನ್ ಗಿಂತ ಕಡಿಮೆ ಗಾತ್ರದ ಎಲ್ಲ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಮಾರಾಟ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯನ್ನು ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕುಶಾಲನಗರ ಕನ್ನಿಕಾ ಇಂಟರ್ನ್ಯಾಷನಲ್ ಹೊಟೀಲ್ ಸಭಾಂಗಣದಲ್ಲಿ ಚೇಂಬರ್ ಆಫ್ ಕಾಮರ್ಸ್ ಸ್ಥಳೀಯ ಪ್ರಮುಖರೊಂದಿಗೆ ಏರ್ಪಡಿಸಿದ್ದ ಪುರಸಭೆ ವ್ಯಾಪ್ತಿಯ ಪ್ಲಾಸ್ಟಿಕ್ ಮಾರಾಟ ಉದ್ಯಮಿಗಳ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಅಕ್ಟೋಬರ್ 2ರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ನಿಯಮ ಉಲ್ಲಂಘಿಸಿದ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಹೇಳಿದರು.ಪ್ಲಾಸ್ಟಿಕ್ ತ್ಯಜಿಸುವುದರೊಂದಿಗೆ ಕುಶಾಲನಗರ ಪುರಸಭೆ ವ್ಯಾಪ್ತಿಯನ್ನು ಸ್ವಚ್ಛ ಪಟ್ಟಣವಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಪ್ಲಾಸ್ಟಿಕ್ ನಿಷೇಧಿಸುವ ಕುರಿತು ಮತ್ತು ಎರಡು ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಬಳಕೆ ಸಂಪೂರ್ಣ ನಿರ್ಬಂಧಿಸಿ ಈಗಾಗಲೇ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದ್ದು, ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಮತ್ತು ನೀರಿನ ಬಾಟಲ್ ಮಾರಾಟ ಬಳಕೆ ನಿಟ್ಟಿನಲ್ಲಿ ಸ್ಥಳೀಯ ವರ್ತಕರು ಮತ್ತು ಗ್ರಾಹಕರು ಸಂಪೂರ್ಣ ಸಹಕರಿಸಬೇಕು ಎಂದು ವಿನಂತಿಸಿದರು. ಈ ಮೂಲಕ ತ್ಯಾಜ್ಯ ಪ್ರಮಾಣ ಕಡಿಮೆಯಾಗಲು ಸಾಧ್ಯ. ಸ್ವಚ್ಛ ಪಟ್ಟಣ ಹಾಗೂ ಸ್ವಚ್ಛ ಕಾವೇರಿ ನಿರ್ಮಾಣ ಸಾಧ್ಯ ಎಂದು ಹೇಳಿದರು. ಪಟ್ಟಣದ ಗಡಿ ಭಾಗಗಳಲ್ಲಿ ಹೊರ ಭಾಗಗಳಿಂದ ಬರುವ ಪ್ರವಾಸಿಗರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಈ ಹಿಂದೆ ಅ. 2ರ ತನಕ ಅಂತಿಮ ಗಡುವು ನೀಡಲಾಗಿತ್ತು ಎಂದ ಅವರು, ನಿರ್ಬಂಧಿತ ವಸ್ತುಗಳ ಅಕ್ರಮ ಮಾರಾಟ ದಾಸ್ತಾನು ಸಂಗ್ರಹಣೆ ಮತ್ತು ಬಳಕೆ ಕುರಿತಂತೆ ಕಂಡುಬಂದರೆ ದಂಡ ವಿಧಿಸಲಾಗುವುದು. ಅಪರಾಧಗಳು ಮರುಕಳಿಸಿದಲ್ಲಿ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸುವುದು ಮತ್ತು ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಪುರಸಭೆಯ ಈ ನಿರ್ಧಾರ ಸ್ವಾಗತಾರ್ಹ. ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ನಿಯಮ ಪಾಲಿಸಬೇಕು. ಎಲ್ಲ ಉದ್ಯಮಿಗಳು ಸಹಕರಿಸಬೇಕು ಎಂದರು.

ಈ ಸಂದರ್ಭ ಸಭೆಯಲ್ಲಿದ್ದ ಸ್ಥಳೀಯ ಉದ್ಯಮಿಗಳು, ದಾಸ್ತಾನುಗಾರರು ತಮಗೆ ಸ್ವಲ್ಪ ಕಾಲಾವಕಾಶ ಬೇಕೆಂದು ಕೋರಿದ ಹಿನ್ನೆಲೆಯಲ್ಲಿ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್. ನಾಗೇಶ್ ಅವರು ಜ. 30ರ ತನಕ ಕಾಲಾವಕಾಶ ಕಲ್ಪಿಸುವಂತೆ ಮಾಡಿದ ಮನವಿಗೆ ಅಧಿಕಾರಿಗಳು ಸ್ಪಂದಿಸಿ ಸಂಪೂರ್ಣ ಸಹಕಾರ ಕೋರಿದರು.

ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಚಿತ್ರ ರಮೇಶ್, ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ