ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಭಾರತ ಜನಗಣತಿ-2027ರ ಸಂಬಂಧ ಜಿಲ್ಲಾ ಅಧಿಕಾರಿಗಳು, ಚಾರ್ಜ್ ಅಧಿಕಾರಿಗಳು, ಇತರೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಆ್ಯಪ್ ಜನಗಣತಿ ನಿಖರತೆ ಮತ್ತು ಪಾರದರ್ಶಕತೆ ಹೆಚ್ಚಿಸಲಿದೆ. ಪ್ರತಿ ವಾರ್ಡ್ ಅಥವಾ ಗ್ರಾಮ ಮಟ್ಟದಲ್ಲಿ 150ರಿಂದ 200 ಕುಟುಂಬಗಳನ್ನು ಒಳಗೊಂಡ ಬ್ಲಾಕ್ ಗಳನ್ನು ಗುರುತಿಸಿ, ನಿಖರವಾದ ಬ್ಲಾಕ್ ನಕ್ಷೆ ಮತ್ತು ಪಟ್ಟಿಗಳನ್ನು ಸಿದ್ಧಪಡಿಸುವಂತೆ ಸೂಚನೆ ನೀಡಿದರು.
ಕೋವಿಡ್ ಮಹಾಮಾರಿಯಿಂದಾಗಿ ಮುಂದೂಡಲ್ಪಟ್ಟಿದ್ದ ಈ ಜನಗಣತಿಯು ಈಗ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆ ಪಟ್ಟಿ ಮತ್ತು ಮನೆ ಗಣತಿ ಕಾರ್ಯ ನಡೆಯಲಿದ್ದು, ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸಮರ್ಥವಾಗಿ ತರಬೇತಿ ಪಡೆದು ಕೆಲಸ ಆರಂಭಿಸಬೇಕು ಎಂದು ಸೂಚಿಸಿದರು.ಭಾರತ ಜನಗಣತಿ 2027ರ ಪೂರ್ವಸಿದ್ಧತಾ ಕಾರ್ಯಗಳು ಜಿಲ್ಲೆಯಲ್ಲಿ ಚುರುಕುಗೊಂಡಿದ್ದು, ಗಣತಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ನೀಡಬೇಡಿ. ಜನಗಣತಿ ಕಾರ್ಯವು ಯಶಸ್ವಿಯಾಗಲು ಬ್ಲಾಕ್‍ಗಳ ರಚನೆ ಅತ್ಯಂತ ಪ್ರಮುಖವಾಗಿದೆ. ಬ್ಲಾಕ್ ರಚನೆಯಲ್ಲಿ ಸಣ್ಣ ತಪ್ಪುಗಳಾದರೂ ಇಡೀ ಪ್ರಕ್ರಿಯೆ ಹಳಿ ತಪ್ಪುತ್ತದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರತಿ ಬ್ಲಾಕ್‍ಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.
ದೇಶದ ಅಭಿವೃದ್ಧಿ ಯೋಜನೆಗಳ ರೂಪಿಸುವಿಕೆಯಲ್ಲಿ ಜನಗಣತಿ ಅಂಕಿ-ಅಂಶಗಳು ಅಡಿಪಾಯವಾಗಿದ್ದು, ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳು ರಾಷ್ಟ್ರ ನಿರ್ಮಾಣದ ಅಳಿಲು ಸೇವೆಯಲ್ಲಿ ಭಾಗಿಗಳಾಗುತ್ತಿದ್ದೇವೆ ಎಂಬ ಭಾವನೆಯೊಂದಿಗೆ ಪ್ರಾಮಾಣಿಕವಾಗಿ ಹಾಗೂ ಸಮರ್ಪಕವಾಗಿ ಕೆಲಸ ಮಾಡಬೇಕು. ಸರ್ಕಾರಿ ನೌಕರರ ವೃತ್ತಿ ಜೀವನದಲ್ಲಿ ಚುನಾವಣೆ ಮತ್ತು ಜನಗಣತಿ ಕೆಲಸಗಳು ಅತ್ಯಂತ ಸ್ಮರಣೀಯವಾದವು. 1872ರಲ್ಲಿ ಮೊದಲ ಬಾರಿ ಆರಂಭವಾದ ಜನಗಣತಿ ಪ್ರಕ್ರಿಯೆ ಈಗ 16ನೇ ಜನಗಣತಿ ಹಂತಕ್ಕೆ ಬಂದು ನಿಂತಿದೆ. ಈ ಅಂಕಿ-ಅಂಶಗಳು ದೇಶದ ಆರ್ಥಿಕ ಗುರಿ ಮತ್ತು ಜನರ ಸ್ಥಿತಿಗತಿಗಳನ್ನು ತಿಳಿಯಲು ಬಹಳ ಮುಖ್ಯವಾಗಿದ್ದು, ನಿಖರತೆಯ ವಿಷಯದಲ್ಲಿ ಯಾವುದೇ ಅಜಾಗರೂಕತೆ ವಹಿಸಬಾರದು ಎಂದು ಎಚ್ಚರಿಸಿದರು.
ತರಬೇತಿ ಅಧಿಕಾರಿಗಳಾದ ವೈಭವ ಕೃಷ್ಣ, ಸೂರ್ಯನಾರಾಯಣ ಹಾಗೂ ಎಲ್.ಪಿ.ಅನುಜಾ ಜಣಗಣತಿ ಕುರಿತು ಅಧಿಕಾರಿಗಳಿಗೆ ತರಬೇತಿ ನೀಡಿದರು.ಉಪವಿಭಾಗಾಧಿಕಾರಿ ಡಾ.ಕೆ.ಜೆ. ಕಾಂತರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್, ಮಾಸ್ಟರ್ ಟ್ರೈನರ್ ರಾಮಚಂದ್ರಪ್ಪ, ಚುನಾವಣಾ ತಹಶೀಲ್ದಾರ್ ಬೀಬಿ ಫಾತಿಮ, ಚುನಾವಣಾ ಶಿರಸ್ತೆದಾರ್ ಮಲ್ಲಿಕಾರ್ಜುನ ನಾಯಕ ಇದ್ದರು.