ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿಯಿಂದ ಕೈಗೊಂಡಿರುವ ಕೆ-100 (ನಾಗರಿಕ ಜಲಮಾರ್ಗ) ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಸೂಚಿಸಿದರು.ಕೋರಮಂಗಲ ರಾಜಕಾಲುವೆಯ (ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆವರೆಗೆ) 9.2 ಕಿ.ಮೀ. ಉದ್ದದ ಜಲಮಾರ್ಗ ಯೋಜನೆ ಕಾಮಗಾರಿಯನ್ನು ಬುಧವಾರ ಪರಿಶೀಲನೆ ನಡೆಸಿದರು. ಕುಂಬಾರಗುಂಡಿ ಬಳಿ ರಾಜಕಾಲುವೆಯಲ್ಲಿ ಹರಿಯುವ ನೀರನ್ನು ಶುದ್ಧೀಕರಿಸಲು 5 ಎಂಎಲ್‌ಡಿ ಎಸ್‌ಟಿಪಿ (ತ್ಯಾಜ್ಯ ನೀರು ಸಂಸ್ಕರಣಾ ಘಟಕ) ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳ್ಳಿಸುವಂತೆ ನಿರ್ದೇಶಿಸಿದರು.
ಕೆಎಸ್‌ಆರ್‌ಟಿಸಿ ಸ್ಥಳ ಹಸ್ತಾಂತರ ಬಾಕಿ:ಶಾಂತಿನಗರ ಬಸ್ ನಿಲ್ದಾಣದ ಬಳಿ ರಾಜಕಾಲುವೆಗೆ ತ್ಯಾಜ್ಯನೀರು ಬರುತ್ತಿರುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಜಲಮಂಡಳಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಅದಕ್ಕೆ ಜಲಮಂಡಳಿಯ ಮುಖ್ಯ ಅಭಿಯಂತರರು ಪ್ರತಿಕ್ರಿಯಿಸಿ, ರಾಜಕಾಲುವೆಗೆ ತ್ಯಾಜ್ಯ ನೀರು ಬರುವುದನ್ನು ನಿಲ್ಲಿಸಲು 15 ಎಂಎಲ್‌ಡಿ ಸಾಮರ್ಥ್ಯದ ಇಂಟರ್ ಮೀಡಿಯೆಟ್ ಸೀವೆಜ್ ಪಂಪಿಂಗ್ ಸ್ಟೇಷನ್ (ಐಎಸ್‌ಪಿಎಸ್) ನಿರ್ಮಿಸಲು ಸ್ಥಳದ ಅವಶ್ಯಕತೆ ಇದೆ. ಕೆಎಸ್‌ಆರ್‌ಟಿಸಿಯ ಸ್ಥಳವನ್ನು ನೀಡಿದ್ದು, ಹಸ್ತಾಂತರ ಪ್ರಕ್ರಿಯೆ ಬಾಕಿಯಿದೆ ಎಂದು ತಿಳಿಸಿದರು. ಕೂಡಲೇ ಜಾಗ ಹಸ್ತಾಂತರಿಸಿಕೊಂಡು ಕಾಮಗಾರಿ ನಡೆಸುವಂತೆ ಜಲಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ। ಕೆ.ಹರೀಶ್ ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ಪಾಲಿಕೆ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಹ್ಲಾದ್ ಇದ್ದರು.ಕೆ-100 ಯೋಜನೆ ಪ್ರಗತಿಯ ವಿವರಕೆ-100 ಯೋಜನೆಯು 9.2 ಕಿ.ಮೀ ಉದ್ದವಿದ್ದು, ರಾಜಕಾಲುವೆಯ ತಳಭಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ನೀರು ಇಂಗುವಂತೆ ವಿನ್ಯಾಸಗೊಳಿಸಲಾಗಿದೆ. ರಾಜಕಾಲುವೆ ಮಾರ್ಗದ ಎರಡೂ ಬದಿಯ ತಡೆಗೋಡೆ ಬಹುತೇಕ ಪೂರ್ಣಗೊಂಡಿದೆ. ಹಸಿರೀಕರಣ, ರಾತ್ರಿ ಸಮಯದಲ್ಲಿ ಉದ್ಯಾನವನದ ರೀತಿಯಲ್ಲಿ ಅಲಂಕಾರಿಕ ವಿದ್ಯುದ್ದೀಕರಣ ಅಳವಡಿಕೆ ಕಾರ್ಯ, ಗ್ರಾನೈಟ್ ಅಳವಡಿಕೆ, ತೋಟಗಾರಿಕೆ, ಪಾದಚಾರಿ ಮಾರ್ಗ, ಗ್ರಿಲ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ರಾಜಕಾಲುವೆ ಮೇಲೆ ಎರಡೂ ಬದಿ ಸಂಚರಿಸಲು ಸೇತುವೆಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ರಾಜಕಾಲುವೆಯ ಎರಡೂ ಬದಿಯ ಸರ್ವೀಸ್ ರಸ್ತೆ ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.