ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಕುಡಿಯುವ ನೀರು ಪೂರೈಕೆ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಲು ಸೂಕ್ತ ಯೋಜನೆ ಹಾಕಿಕೊಂಡ ಕಾರ್ಯ ನಿರ್ವಹಿಸಬೇಕು. ಯಾವುದೇ ತಾಂತ್ರಿಕ ಸಮಸ್ಯೆ ಎದುರಾದಲ್ಲಿ ನಿಮ್ಮ ಮೇಲಾಧಿಕಾರಿ- ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದು ಅವರೊಂದಿಗೆ ಚರ್ಚಿಸಿ, ಪರಿಹರಿಸಿಕೊಳ್ಳಿ. ಸರ್ಕಾರದ ಹಂತದಲ್ಲಿರುವ ಸಮಸ್ಯೆಗಳ ಕುರಿತು ನನ್ನ ಗಮನಕ್ಕೆ ತಂದು ಶೀಘ್ರ ಪರಿಹಾರ ಕಂಡುಕೊಂಡು ಒಟ್ಟಾರೆ ಯಾವುದೇ ಕಾಮಗಾರಿ ನೈಜ ಕಾರಣವಿಲ್ಲದೇ ಬಾಕಿ ಇರದಂತೆ ನೋಡಿಕೊಂಡು ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ನಗರಕ್ಕೆ ಅವಶ್ಯಕತೆಯಿರುವ ಕುಡಿಯುವ ನೀರಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಸುಮಾರು ₹10 ಕೋಟಿ ವೆಚ್ಚದಲ್ಲಿ ಎಲ್ಲ 60 ಬಾವಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಈಗಾಗಲೇ 26 ಬಾವಡಿಗಳ ನೀರನ್ನು ಗೃಹಬಳಕೆಗೆ ಉಪಯೋಗಿಸಲಾಗುತ್ತಿದ್ದು, ಎಲ್ಲ 60 ಬಾವಡಿಗಳ ನೀರು ಬಳಕೆಯಾದಲ್ಲಿ ಅಂದಾಜು 10 ಎಂಎಲ್‌ಡಿ ನೀರಿನ ಲಭ್ಯತೆಯಾಗಿ ಕುಡಿಯುವ ನೀರಿನ ಒತ್ತಡ ಕಡಿಮೆಯಾಗುವುದು ಈ ಕುರಿತು ಅಧಿಕಾರಿಗಳು ಕ್ರಮ ವಹಿಸುವಂತೆ ಹೇಳಿದರು.ಸಿಂದಗಿ ನಗರದ ವಾರ್ಡ್ ನಂ.1, 2ರಲ್ಲಿ ಯುಜಿಡಿ ಕಾಮಗಾರಿ ಕುರಿತು ಶಾಸಕ ಅಶೋಕ ಮನಗೂಳಿ ಅಸಮಾಧಾನ ವ್ಯಕ್ತಪಡಿಸಿ, ಕಳೆದ ಒಂದು ವರ್ಷದಿಂದ ಫಾಲೋಅಪ್, ಹತ್ತಾರು ಬಾರಿ ಪುರಸಭೆಯಲ್ಲಿ ಸಭೆ ನಡೆಸಿ ಸೂಚಿಸಲಾಗಿತ್ತಾದ್ದರೂ ಕ್ರಿಯಾಯೋಜನೆಯ 94 ಕಿ.ಮೀ. ಕಾಮಗಾರಿ ಪೂರ್ಣಗೊಂಡಿಲ್ಲ. ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ನಿರ್ವಹಿಸಲು ಆಗದೆ ಇದ್ದಲ್ಲಿ, ಗುತ್ತಿಗೆದಾರರನ್ನು ಕಾಯ್ದು ಕುಳಿತುಕೊಳ್ಳದೇ, ಬದಲಾವಣೆ ಮಾಡಿ ಕಾಮಗಾರಿ ಪೂರ್ಣಗೊಳಿಸುವಂತೆ ಹೇಳಿದರು.
ಬೆಳೆ ವಿಮೆಯಡಿ ನೋಂದಾಯಿಸಿ, ವಿಮೆ ಕಂತು ಪಾವತಿಸುವುದರಿಂದ ಆಗುವ ಅನುಕೂಲತೆಗಳ ಕುರಿತು ರೈತರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕು. ಎಲ್ಲ ತಾಲೂಕಿಗೊಂದು ಕೋಲ್ಡರ್ ಸ್ಟೋರೇಜ್ ನಿರ್ಮಾಣಕ್ಕೆ ಸೂಕ್ತ ಪ್ರಸ್ತಾವನೆ ಸಿದ್ಧತೆ ಹಾಗೂ ಲಿಂಬೆ ಮಾದರಿಯಲ್ಲಿ ಡೋಣಿ ನದಿಯ ಬಿಳಿ ಜೋಳಕ್ಕೂ ಜಿಐ ಟ್ಯಾಗ್ ಒದಗಿಸಲು ಅಗತ್ಯ ಕ್ರಮ ವಹಿಸುವಂತೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆ, ರಾತ್ರಿ ತಂಗಲು ವ್ಯವಸ್ಥೆ ಕಲ್ಪಿಸಿ ಅತ್ಯಂತ ಕನಿಷ್ಠ ದರ ನಿಗದಿಗೊಳಿಸಬೇಕು. ಜಿಲ್ಲೆಯಲ್ಲಿ 5 ಮುಖ್ಯ, 5 ಉಪ ಮುಖ್ಯ ಮಾರುಕಟ್ಟೆಗಳಿದ್ದು, ಬಬಲೇಶ್ವರ ಸೇರಿದಂತೆ ಎಲ್ಲೆಲ್ಲಿ ಅವಶ್ಯಕತೆವಿದ್ದೆಡೆ ತಾಲೂಕಿಗೊಂದು ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಸಚಿವರು ತಿಳಿಸಿದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ನಮ್ಮ ಜಿಲ್ಲೆ ತೋಟಗಾರಿಕೆ ಬೆಳೆಗಳಿಗೆ ಪ್ರಸಿದ್ಧಿ ಪಡೆದಿದೆ. ಹೆಚ್ಚಾಗಿ ಲಿಂಬೆ ಬೆಳೆ ಬೆಳೆಯುತ್ತಿರುವುದರಿಂದ ಲಿಂಬೆ ಅಭಿವೃದ್ಧಿ ಮಂಡಳಿಯಿಂದ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಮಾತನಾಡಿ, ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ವಿವಿಧ ಅಭಿವೃದ್ಧಿ ಕಾಮಗಾರಿ, ಅವಶ್ಯಕವಿರುವ ಅನುದಾನ, ಕಾಮಗಾರಿಗಳನ್ನು ಕೈಗೊಳ್ಳಲು ಇರುವ ಸಮಸ್ಯೆ ಕುರಿತು ಅಧಿಕಾರಿಗಳು ಸಭೆಯಲ್ಲಿ ವಿವರಿಸುವುದರಿಂದ ಸಮಯ ವ್ಯರ್ಥವಾಗಿ ಪರಿಹಾರ ದೊರಕಿಸಲು ವಿಳಂಬವಾಗುತ್ತದೆ. ಹಾಗಾಗಿ ಪೂರ್ವದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು, ಸಮಸ್ಯೆ ಬಗೆಹರಿಸಿಕೊಂಡಲ್ಲಿ ತ್ವರಿತವಾಗಿ ಪರಿಹಾರ ಒದಗಿಸಲು ಪ್ರಯತ್ನಿಸಬೇಕು. ಇದರಿಂದ ಪ್ರಮುಖ ವಿಷಯಗಳ ಚರ್ಚೆಗೆ ಅವಕಾಶ ದೊರೆಯುತ್ತದೆ ಎಂದು ಹೇಳಿದರು.
ಸಭೆಯಲ್ಲಿ ವಿಪ ಸದಸ್ಯ ಪ್ರಕಾಶ ಹುಕ್ಕೇರಿ, ಪಿ.ಎಚ್.ಪೂಜಾರ, ಎನ್.ರವಿಕುಮಾರ, ಶಾಸಕರಾದ ರಾಜುಗೌಡ ಪಾಟೀಲ, ವಿಠ್ಠಲ ಕಟಕಧೋಂಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಇಲಿಯಾಸ ಬೋರಾಮಣಿ, ಕೆಡಿಪಿ ನಾಮನಿರ್ದೇಶಿತ ಸದಸ್ಯ ಬಾಬು ಸಾಹುಕಾರ ಮೇತ್ರಿ, ನೂರಅಹ್ಮದ, ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.