ಇಂದ್ರಾಳಿ ಸೇತುವೆ ತ್ವರಿತ ಪೂರ್ಣಗೊಳಿಸಿ, ಇಲ್ಲವೇ ಕಾನೂನು ಕ್ರಮ ಎದುರಿಸಿ: ಉಡುಪಿ ಡಿಸಿ

KannadaprabhaNewsNetwork | Published : Mar 7, 2025 11:46 PM

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಪ್ರಗತಿ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಐದಾರು ವರ್ಷಗಳಿಂದ ನಡೆಯುತ್ತಿರುವ ಇಲ್ಲಿನ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ತಪ್ಪಿದ್ದಲ್ಲಿ ಪರಿಣಾಮ ಎದುರಿಸಿ ಎಂದು ಪುನಃ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಐದಾರು ವರ್ಷಗಳಿಂದ ನಡೆಯುತ್ತಿರುವ ಇಲ್ಲಿನ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ತಪ್ಪಿದ್ದಲ್ಲಿ ಪರಿಣಾಮ ಎದುರಿಸಿ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಗುತ್ತಿಗೆದಾರರಿಗೆ ಪುನಃ ಎಚ್ಚರಿಕೆ ನೀಡಿದ್ದಾರೆ.

ಅವರು ಶುಕ್ರವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಪ್ರಗತಿ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಇಂದ್ರಾಳಿ ರೈಲ್ವೆ ಮೇಲ್ಸುತುವೆ ಸೇತುವೆ ಕಾಮಗಾರಿಯು 2018 ರಿಂದಲೇ ಪ್ರಾರಂಭವಾದರೂ ಈವರೆಗೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿ, ಅನೇಕ ಅಪಘಾತಗಳು, ಸಾವು ನೋವುಗಳು ಆಗಿವೆ. ಸಾರ್ವಜನಿಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವೆಲ್ಲವುಗಳಿಗೂ ಜಿಲ್ಲಾಡಳಿತ ಉತ್ತರ ನೀಡಬೇಕು. ಆದರೆ, ಕಾಮಗಾರಿಯ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂದವರು ತೀವ್ರ ಅಸಮಾಧಾನ ವ್ಕ್ಚಪಡಿಸಿದರು.

ಕಳೆದ ಆರು ತಿಂಗಳಿನಿಂದ ಈ ಸೇತುವೆ ಪ್ರಗತಿಯ ಬಗ್ಗೆ ಸಭೆ ಹಾಗೂ ಕಾಮಗಾರಿಯ ಪರಿಶೀಲನೆ ನಡೆಸುತ್ತಿದ್ದೇವೆ. ಆದರೂ ಸಹ ಕಾಮಗಾರಿಯ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಅಭಿಯಂತರರು ಹಾಗೂ ಗುತ್ತಿಗೆದಾರರು ಜಿಲ್ಲಾಡಳಿತದ ಸೂಚನೆ, ಜನರ ಸಮಸ್ಯೆ, ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಾಮಗಾರಿಯ ಪ್ರಗತಿಯ ವೇಗವನ್ನು ಹೆಚ್ಚಿಸಿ ಪೂರ್ಣಗೊಳಿಸಬೇಕು. ತಪ್ಪಿದ್ದಲ್ಲಿ ಕಾನೂನು ರೀತಿಯಲ್ಲಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಕೂಡ ನಿಗಧಿತ ಕಾಲಾವಧಿಯಲ್ಲಿ ಪೂರ್ಣಗೊಳ್ಳದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಾಮಗಾರಿ ವೇಗವನ್ನು ಹೆಚ್ಚಿಸಲು, ನಿರಂತರ ಅನುಸರಣೆ ಮಾಡಿದರೂ ಸಹ ಕುಂಠಿತಗೊಳ್ಳುತ್ತಿದೆ. ಕಾಮಗಾರಿಯನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕು ಎಂದವರು ಆದೇಶಿಸಿದರು.

ರಾ.ಹೆ. 169 ಎ ಇದರ ಕರಾವಳಿ ಬೈಪಾಸ್ ನಿಂದ ಮಲ್ಪೆವರೆಗಿನ ರಸ್ತೆ ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಬೇಕು. ವಿದ್ಯುತ್ ಕಂಬಗಳ ಸ್ಥಳಾಂತರ ಆದಷ್ಟು ತ್ವರಿತ ಮಾಡಬೇಕು. ಆಸ್ತಿಯ ಮಾಲೀಕರು ಇದಕ್ಕೆ ಸಹಕರಿಸಬೇಕು. ಭೂಸ್ವಾಧೀನ ಹಣವನ್ನು ಮುಂಚಿತವಾಗಿಯೇ ಠೇವಣಿ ಇಡಬೇಕು ಎಂದ ಅವರು, ಕಾಮಗಾರಿ ಕೈಗೊಳ್ಳುವಲ್ಲಿ ಯಾವುದೇ ರೀತಿಯ ಅಡಚಣೆಗಳು ಉಂಟಾದಲ್ಲಿ ಪೊಲೀಸ್ ಇಲಾಖೆಯ ನೆರವು ಪಡೆಯರಿ ಎಂದರು.

ರಾ.ಹೆ. 66 ಸಂತೆಕಟ್ಟೆ-ಅಂಬಲಪಾಡಿಯ ಅಂಡರ್ಪಾಸ್ ಕಾಮಗಾರಿಯನ್ನು ತಿಂಗಳೊಳಗಾಗಿ ಪೂರ್ಣಗೊಳಿಸಬೇಕು. ತಪ್ಪಿದ್ದಲ್ಲಿ ಮಳೆಗಾಲ ಪ್ರಾರಂಭವಾಗಿ ಕಾಮಗಾರಿಗೆ ಅಡಚಣೆಗಳು ಆಗುವ ಸಾಧ್ಯತೆ ಇರುತ್ತದೆ ಎಂದವರು ಎಚ್ಚರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಸಹಾಯಕ ಕಮಿಷನರ್ ಮಹೇಶ್ಚಂದ್ರ, ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಶೃಂಗೇರಿ-ಚಿಕ್ಕಮಗಳೂರು ರಾ.ಹೆ. ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಗುತ್ತಿಗೆದಾರರು ಮತ್ತಿತರರು ಇದ್ದರು.

Share this article