ಹನೂರು : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಯನ್ನು ನಿಗದಿಗೊಳಿಸಿರುವ ಅವಧಿ ಒಳಗೆ ಪೂರ್ಣಗೊಳಿಸಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ತಲುಪಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಶಾಸಕ ಎಂ.ಆರ್. ಮಂಜುನಾಥ್ ಖಡಕ್ ಸೂಚನೆ ನೀಡಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ಪಿಡಬ್ಲ್ಯೂಡಿ ಅತಿಥಿಗೃಹದಲ್ಲಿ ಜಲಜೀವನ್ ಮಿಷನ್ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಾಡಂಚಿನ ಗ್ರಾಮಗಳಾದ ದೊಡ್ಡಾನೆ, ತೋಕೆರೆ ಕೊಕ್ಕಬರೆ ಹಾಗೂ ಇನ್ನಿತರ ಕಾಡಂಚಿನ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಬಿವೃದ್ಧಿ ಹಾಗೂ ವಿದ್ಯುತ್ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು. ಪೂರ್ಣಗೊಳ್ಳದ ಕಾಮಗಾರಿಯಗಳ ಮಾಹಿತಿಯನ್ನು ನಮಗೆ ಒದಗಿಸಬೇಕು ಎಂದು ತಿಳಿಸಿದರು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತ ಕ್ರಮ ವಹಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ನಿಮ್ಮನ್ನೇ ಹೊಣೆಗಾರನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹನೂರು ತಾಲೂಕು ವ್ಯಾಪ್ತಿಯಲ್ಲಿ ಇದುವರೆಗೆ ಯಾವುದೇ ರೀತಿಯಲ್ಲಿ ಡೆಂಘೀ ಪ್ರಕರಣ ಪತ್ತೆಯಾಗಿಲ್ಲ. ಇದೇ ನಿಟ್ಟಿನಲ್ಲಿ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ. ಇದಲ್ಲದೆ ಡಿಎಚ್ಒ ಅವರ ಜೊತೆ ದೂರವಾಣಿ ಮುಖಾಂತರ ಚರ್ಚೆ ನಡೆಸಿದ್ದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಈ ವೇಳೆ ಜಲಜೀವನ್ ಯೋಜನೆಯ ಎಇಇ ಹರೀಶ್, ಜೆಇ ಮಹೇಶ್, ಹಾಗೂ ಪೂರ್ಣಿಮಾ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.