ಮೇ ಅಂತ್ಯದೊಳಗೆ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Feb 26, 2025, 01:01 AM IST
ದಿಶಾ ಸಭೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು. | Kannada Prabha

ಸಾರಾಂಶ

ಜಲಜೀವನ್ ಮಿಷನ್ ಯೋಜನೆಗೆ ಕೋಟಿಗಟ್ಟಲೆ ಅನುದಾನ ವೆಚ್ಚ ಮಾಡಲಾಗುತ್ತಿದೆ. ಆದರೆ ಜನರಿಗೆ ನೀರು ಸಿಗುತ್ತಿಲ್ಲ. ಕೇವಲ ನಳ ಅಳಡಿಸಿದರೆ ಸಾಲದು. ಅತ್ಯಂತ ಜವಾಬ್ದಾರಿಯಿಂದ ಗುಣಮಟ್ಟದ ಕಾಮಗಾರಿ ಮಾಡಬೇಕು.

ಹಾವೇರಿ: ಜಿಲ್ಲೆಯ ತಡಸ, ಆನೂರ ಹಾಗೂ ಹಂಸಭಾವಿ ಈ ಮೂರು ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗಳನ್ನು ಬರುವ ಮೇ ಅಂತ್ಯದೊಳಗೆ ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಂಸದ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ದಿಶಾ ಸಭೆಯಲ್ಲಿ, ಜಲಜೀವನ್ ಕಾಮಗಾರಿ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಕಾಮಗಾರಿ ಆರಂಭವಾಗಿ ಎರಡೂವರೆ ವರ್ಷ ಆಗಿದೆ. ಕುಡಿಯುವ ನೀರಿನ ಕಾಮಗಾರಿ ಪ್ರಗತಿ ಬಗ್ಗೆ ಕಾಳಜಿ, ಜವಾಬ್ದಾರಿ ಇಲ್ಲ ಅಂದರೆ ಏನು ಕೆಲಸ ಮಾಡುತ್ತಿರಿ. ಕೆಲಸ ಮಾಡಲು ಮನಸ್ಸಿಲ್ಲದಿದ್ದರೆ ವರ್ಗಾವಣೆ ತೆಗೆದುಕೊಂಡು ಬೇರೆ ಕಡೆ ಹೋಗಿ ಎಂದು ಸಂಬಂಧಪಟ್ಟ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.ಪ್ರತಿ 15 ದಿನಕ್ಕೆ ವರದಿ ನೀಡಿ: ಜಲಜೀವನ್ ಮಿಷನ್ ಯೋಜನೆಗೆ ಕೋಟಿಗಟ್ಟಲೆ ಅನುದಾನ ವೆಚ್ಚ ಮಾಡಲಾಗುತ್ತಿದೆ. ಆದರೆ ಜನರಿಗೆ ನೀರು ಸಿಗುತ್ತಿಲ್ಲ. ಕೇವಲ ನಳ ಅಳಡಿಸಿದರೆ ಸಾಲದು. ಅತ್ಯಂತ ಜವಾಬ್ದಾರಿಯಿಂದ ಗುಣಮಟ್ಟದ ಕಾಮಗಾರಿ ಮಾಡಬೇಕು. ಕುಂಟುನೆಪ ಹೇಳುವುದನ್ನು ಮೊದಲು ಬಿಡಿ. ಕಚೇರಿಯಲ್ಲಿ ಕುಳಿತುಕೊಳ್ಳದೇ ಕಾಮಗಾರಿ ಸ್ಥಳಗಳಿಗೆ ಭೇಟಿ ಪರಿಶೀಲನೆ ನಡೆಸಿ, ಸಮಸ್ಯೆ ಇದ್ದರೆ ಪರಿಹರಿಸಿ ಜನರಿಗೆ ನೀರು ಕೊಡುವ ಕೆಲಸ ಮಾಡಬೇಕು. ಯಾವುದೇ ಹಳ್ಳಿಗೆ ನೀರು ಬಂದಿಲ್ಲ ಎಂಬು ದೂರು ಬರಬಾರದು. ಪ್ರತಿ 15 ದಿನಗಳಿಗೆ ಕಾಮಗಾರಿ ವರದಿ ನೀಡಬೇಕು ಎಂದು ಸೂಚನೆ ನೀಡಿದರು.ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ದೊಡ್ಡ ಪ್ರಮಾಣದ ಯೋಜನೆ ರೂಪಿಸಲಾಗಿದೆ. ಹಾಗಾಗಿ ಸಮರ್ಪಕವಾಗಿ ನೀರು ಪೂರೈಸುವ ಕೆಲಸವಾಗಬೇಕು. ಕಾರಣ ಬೇಡ, ಪರಿಣಾಮಕಾರಿ ಕೆಲಸವಾಗಬೇಕು ಎಂದರು. ಕಾಮಗಾರಿ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ₹20 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಅಲ್ಲಿ ಜನರು ಓಡಾಡುವುದಿಲ್ಲ ಹಾಗೂ ಸಂಪೂರ್ಣ ಅವೈಜ್ಞಾನಿಕವಾಗಿದೆ. ಸಾರ್ವಜನಿಕರು ಓಡಾಡುವಲ್ಲಿ ಕಾಮಗಾರಿ ಮಾಡಿ. ರಸ್ತೆ ಮಾಡುವ ಮೊದಲು ಸ್ಥಳೀಯ ಜನಪ್ರತಿನಿಧಿಗಳನ್ನು ಸಂಪರ್ಕಿಸಬೇಕು ಎಂದು ಸೂಚನೆ ನೀಡಿದರು.ಸರ್ವೇ ಮಾಡಿ: ಪ್ರಧಾನಮಂತ್ರಿ ಗ್ರಾಮ ಸಡಕ್ ಗ್ರಾಮ ಸಡಕ್ ಯೋಜನೆಯಡಿ ಒಂದರಿಂದ ನಾಲ್ಕು ಹಂತದಲ್ಲಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಲಾಗುವುದು. ಮೊದಲನೇ ಹಂತ ಕಾಮಗಾರಿ ಮುಗಿದರೆ ನಂತರದ ಹಂತಗಳಿಗೆ ಅನುದಾನ ಮಂಜೂರು ಮಾಡಲಾಗುತ್ತದೆ. ಹಾಗಾಗಿ ಐದು ಸಾವಿರ ಜನಸಂಖ್ಯೆ ಇದ್ದು, ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಸಂಪರ್ಕ ಇಲ್ಲದ ಜಿಲ್ಲೆಯ ಗ್ರಾಮಗಳ ಸರ್ವೇ ಮಾಡಿ, ಆ ಗ್ರಾಮಗಳ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಹೆಚ್ಚಿನ ಬೆಡ್‌ಗಳಿಗೆ ಪ್ರಸ್ತಾವನೆ ಸಲ್ಲಿಸಿ: ತಾಯಿ ಹಾಗೂ ಶಿಶು ಮರಣದ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಐಸಿಯು ಬೆಡ್ ಸಮಸ್ಯೆ ಇದ್ದರೆ, ಜಿಲ್ಲಾ ಆಸ್ಪತ್ರೆಗೆ ಹೆಚ್ಚುವರಿ 30 ಹಾಗೂ ತಾಲೂಕು ಆಸ್ಪತ್ರೆಗಳಿಗೆ ತಲಾ ಐದು ಐಡಿಯು ಬೆಡ್‌ಗಳಿಗೆ ಪ್ರಸ್ತಾವನೆ ಸಲ್ಲಿಸಿ. ಜಿಲ್ಲೆಯಲ್ಲಿ ತಾಯಿ ಹಾಗೂ ಶಿಶು ಮರಣ ಸಂಭವಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆ ಯಾವುದೇ ಕ್ಷೇತ್ರದಲ್ಲಿ ಹಿಂದೆ ಉಳಿಯಬಾರದು. ರೈತರು, ಆರೋಗ್ಯ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಆಸಕ್ತಯಿಂದ ಕೆಲಸ ಮಾಡಬೇಕು ಎಂದರು.

ಶಾಸಕರು ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರೈತರ ಹೊಲಗಳಿಗೆ ದಾರಿ ನಿರ್ಮಾಣ ಮಾಡಿಕೊಡುವಂತೆ ತಿಳಿಸಿದರು.ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ. ರಂಗಸ್ವಾಮಿ ಅವರು, ವಿವಿಧ ವಸತಿ ಯೋಜನೆ, ಸ್ವಚ್ಛ ಭಾರತ ಯೋಜನೆ, ಮನರೇಗಾ ಯೋಜನೆ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಾಲ್ ಉಪಸ್ಥಿತರಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ