ಕುಂದಗೋಳ:
ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಹಾಗೂ ಇಲಾಖೆಗಳ ಸೇವೆಗಳು ಜನರಿಗೆ ಸುಲಭವಾಗಿ ದೊರೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸುವುದು ಅಥವಾ ಸಮಸ್ಯೆ ನಿರ್ಲಕ್ಷಿಸುವುದು ಕಂಡುಬಂದರೆ ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು.
ಆಂದೋಲನದಲ್ಲಿ ಒಟ್ಟು 35 ಅರ್ಜಿ ಸ್ವೀಕರಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪ್ರತಿಯೊಂದು ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಇತ್ಯರ್ಥಪಡಿಸಬೇಕು. ಅಗತ್ಯವಿದ್ದಲ್ಲಿ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದರು.ಕುಂದಗೋಳದ ಕೆರೆಯಲ್ಲಿ ಜಾನುವಾರುಗಳ ಮೈತೊಳೆಯುತ್ತಿರುವುದರಿಂದ ನೀರು ಕಲುಷಿತಗೊಳ್ಳುತ್ತಿದೆ ಎಂದು ಸ್ಥಳೀಯರಾದ ಸಂಭಾಜಿ ತಡಸದ ಹಾಗೂ ಮಂಜು ಹಿರೇಮಠ ದೂರು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಕೆರೆಯ ಅಭಿವೃದ್ಧಿಗೆ ಈಗಾಗಲೇ ಅನುದಾನ ನೀಡಲಾಗಿದ್ದು, ಕುಡಿಯುವ ನೀರು ಕಲುಷಿತಗೊಳ್ಳದಂತೆ ಆದ್ಯತೆ ಮೇರೆಗೆ ನೀರಿನ ತೊಟ್ಟಿಗಳನ್ನು ನಿರ್ಮಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಸಂಶಿ ಗ್ರಾಮದ ರಸ್ತೆ ಬದಿಯ ಅನಧಿಕೃತ ಅಂಗಡಿಗಳ ತೆರವಿಗೂ ಸೂಚಿಸಲಾಯಿತು. ಸಂಶಿ-ಅತ್ತಿಗೇರಿ ಸೇತುವೆ ಕಾಮಗಾರಿ ಕಳಪೆಯಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಬಿಲ್ ತಡೆಹಿಡಿಯಲಾಗಿದೆ. ಗುಣಮಟ್ಟದ ಕಾಮಗಾರಿ ಪೂರ್ಣಗೊಳ್ಳುವ ವರೆಗೆ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.