ರೈಲುಮಾರ್ಗ ಭೂಸ್ವಾಧೀನ ಪ್ರಕ್ರಿಯೆ ಡಿಸೆಂಬರ್‌ ಒಳಗೆ ಪೂರ್ಣಗೊಳಿಸಿ: ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ತಾಕೀತು

KannadaprabhaNewsNetwork |  
Published : Sep 27, 2024, 01:26 AM ISTUpdated : Sep 27, 2024, 12:07 PM IST
ಫೋಟೋ: 26ಎಸ್‌ಎಂಜಿಕೆಪಿ06ಶಿವಮೊಗ್ಗದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ರೈಲ್ವೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಯಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ- ಶಿಕಾರಿಪುರ - ರಾಣೆಬೆನ್ನೂರು ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಹಾಗೂ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕೆಂದು ಕೇಂದ್ರ ಸಚಿವ ವಿ. ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.  

  ಶಿವಮೊಗ್ಗ : ಶಿವಮೊಗ್ಗ- ಶಿಕಾರಿಪುರ - ರಾಣೆಬೆನ್ನೂರು ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ರೈತರ ಮನೆ, ಮರಗಳು ಇತ್ಯಾದಿ ರೈಲು ಮಾರ್ಗದಲ್ಲಿ ಬರುವುದರಿಂದ ಅವುಗಳಿಗೆ ಪರಿಹಾರ ನೀಡುವಲ್ಲಿ ಕಂಜೂಸುತನ ಬೇಡ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ಇಲ್ಲಿನ ಜಿಪಂ ಸಭಾಂಗಣದಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ರೈಲ್ವೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ,

ಶಿವಮೊಗ್ಗ- ಶಿಕಾರಿಪುರದವರೆಗೆ ಭೂಸ್ವಾಧೀನ ಬಹುತೇಕ ಪೂರ್ಣವಾಗಿದೆ. ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ 21 ಗ್ರಾಮಗಳ 645 ಎಕರೆ ಭೂಮಿ ಭೂಸ್ವಾಧೀನ ವಿಳಂಬವಾಗುತ್ತಿದೆ. ಶೇ.90ರಷ್ಟು ಭೂಸ್ವಾಧೀನ ಆದರೆ ಮಾತ್ರ ರೈಲುಮಾರ್ಗದ ಕಾಮಗಾರಿ ಪ್ರಾರಂಭವಾಗುವುದು. ಭೂಸ್ವಾಧೀನ ಮಾಡುವುದು ಮುಖ್ಯವಾಗಿದೆ. ಇದಕ್ಕೆ ವಿಳಂಬ ಮಾಡಬೇಡಿ ಎಂದು ಹೇಳಿದರು.

ರೈಲ್ವೆ ಇಲಾಖೆ ರಕ್ಷಣಾ ಇಲಾಖೆಯಿದ್ದಂತೆ ವರ್ಷದ ಎಲ್ಲಾ ದಿನಗಳೂ ನಿರಂತರ ಸೇವೆಯಲ್ಲಿರುತ್ತದೆ. ಈ ಇಲಾಖೆಯಲ್ಲಿ ಪ್ರಧಾನಿ ಮೋದಿ ಅವರು ಕ್ರಾಂತಿಕಾರಿ ಬದಲಾವಣೆ ತರುತ್ತಿದ್ದಾರೆ. ಇದರ ಸದ್ಬಳಕೆ ಮಾಡಿಕೊಳ್ಳುವಲ್ಲಿ ಶಿವಮೊಗ್ಗ ಜಿಲ್ಲೆಯ ಸಂಸದ ಬಿ.ವೈ.ರಾಘವೇಂದ್ರ ರಾಜ್ಯದಲ್ಲೇ ಮೊದಲಿಗರು. ಅವರ ಪ್ರಯತ್ನ ದಿಂದಾಗಿ ಜಿಲ್ಲೆಗೆ ಹಲವು ಯೋಜನೆ ಬರುತ್ತಿವೆ ಎಂದರು.

ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿ ವಿಳಂಬದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಇದಕ್ಕೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಪಿಟ್‍ ಲೈನ್ 2025 ಜನವರಿ 25ಕ್ಕೆ ಪೂರ್ಣವಾಗಲಿದೆ. ಇದಾದ ನಂತರ ಶಿವಮೊಗ್ಗ ಜಿಲ್ಲೆಗೆ ಹೆಚ್ಚು ರೈಲುಗಳನ್ನು ತರುವ ಸಂಸದರ ಬೇಡಿಕೆಗಳೆಲ್ಲ ಈಡೇರಲಿವೆ ಎಂದರು.

ಶಿವಮೊಗ್ಗ ಸ್ಟೇಷನ್‍ಗೆ 22 ಕೋಟಿ ರು., ಸಾಗರ 24 ಕೋಟಿ ರು. ಹಾಗೂ ತಾಳಗುಪ್ಪ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ 25.5 ಕೋಟಿ ರು.ಗಳನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಮೀಸಲಿಡಲಾಗಿದೆ. ಶಿವಮೊಗ್ಗಕ್ಕೆ ಇನ್ನೂ ಹೆಚ್ಚು ಹಣ ನೀಡಬೇಕು ಹಾಗೂ ಭದ್ರಾವತಿಗೂ ಈ ಯೋಜನೆ ಸೇರಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಇದಕ್ಕೆ ಉತ್ತರಿಸಿದ ಕೇಂದ್ರ ಸಚಿವರು, ಶಿವಮೊಗ್ಗ ದೊಡ್ಡ ಜಿಲ್ಲಾ ಕೇಂದ್ರವಾಗಿದೆ. ಇದಕ್ಕೆ ಹೆಚ್ಚಿನ ಹಣ ಒದಗಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ಭದ್ರಾವತಿ ರೈಲ್ವೆ ಸ್ಟೇಷನ್ ಅಭಿವೃದ್ಧಿಗೆ ಪ್ರಸ್ತಾವನೆ ಕಳುಹಿಸಿರುವುದಾಗಿ ತಿಳಿಸಿದರು.

ಹಾರ್ನಹಳ್ಳಿ ರೈಲ್ವೆ ಸ್ಟೇಷನ್ ಪ್ಲಾಟ್ ಫಾರಂ ವಿಸ್ತರಣೆಗೆ 2 ಕೋಟಿ ರು. ಬಿಡುಗಡೆಯಾಗಿದೆ. ಶಿವಮೊಗ್ಗದ ಉಷಾ ನರ್ಸಿಂಗ್ ಹೋಂ ವೃತ್ತವನ್ನು ರೈಲ್ವೆ ಇಲಾಖೆ ಯಿಂದ 4.8 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಈ ಪೈಕಿ 2 ಕೋಟಿ ರು.ಗಳನ್ನು ಮಹಾನಗರ ಪಾಲಿಕೆಗೆ ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿ ಗಳು ಸಭೆಗೆ ತಿಳಿಸಿದರು.

ವಿದ್ಯಾನಗರದ ರೈಲ್ವೆ ಗೇಟ್ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಿಸಲು ಶಾಸಕ ಎಸ್.ಎನ್.ಚನ್ನಬಸಪ್ಪ ಮನವಿ ಮಾಡಿದರು. ಇಲ್ಲಿನ ಆರ್‌ಓಬಿ ಪಕ್ಕದಲ್ಲಿರುವ 1 ಎಕರೆ ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಬರುವಂತೆ ಸದ್ಬಳಕೆ ಮಾಡುವಂತೆ ಸಂಸದ ಬಿವೈಆರ್ ಸಲಹೆ ನೀಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಈ ಎರಡು ಅಂಶಗಳನ್ನು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳಲು ಸೂಚಿಸಿದರು.

ಭದ್ರಾವತಿ ರೈಲ್ವೆ ಆರ್‌ಓಡಿ ಕಾಮಗಾರಿ ಬೇಗ ಮುಗಿಸಲು ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು ಮಾಡಿದ ಮನವಿಗೆ ಉತ್ತರಿಸಿದ ಸಚಿವರು, ಡಿಸೆಂಬರ್ ಅಂತ್ಯಕ್ಕೆ ಕೆಲಸ ಮುಗಿಸುವ ಭರವಸೆ ನೀಡಿದರು.

ಜಿಲ್ಲೆಗೆ ವಂದೇ ಭಾರತ್ ರೈಲು ತರಬೇಕು ಎನ್ನುವ ಸಂಸದ ಬಿ.ವೈ.ರಾಘವೇಂದ್ರ ಅವರ ಕನಸು ನನಸಾಗಲಿದೆ. ಈ ಕನಸಿಗೆ ಶಕ್ತಿ ತುಂಬುವ ಕಾರ್ಯ ಮಾಡು ತ್ತೇನೆ. ಅದೇ ರೀತಿ ಬೀರೂರು-ಶಿವಮೊಗ್ಗ ಡಬ್ಲಿಂಗ್ ಲೈನ್ ಪ್ರಗತಿಯಲ್ಲಿದೆ. ಇದಕ್ಕೆ ಗುತ್ತಿಗೆ ಸಹ ಕರೆಯಲಾಗಿದೆ. ಅಮೃತ ಭಾರತ್ ಯೋಜನೆಯಡಿ ಅನೇಕ ಅಭಿವೃದ್ಧಿ ಕಾರ್ಯ ನಡೆಯುತ್ತಿವೆ. ರಾಜ್ಯದಲ್ಲಿ ಎಕ್ಸ್ ಪ್ರೆಸ್ ರೈಲುಗಳಿಗೆ ಗಂಟೆಗೆ 110 ಕಿ.ಮೀ. ವೇಗದ ಮಿತಿ ಇದೆ. ಇದನ್ನು ಗಂಟೆಗೆ 135 ಕಿ.ಮೀ. ಮಿತಿಗೆ ಏರಿಸುವ ಪ್ರಯೋಗಕ್ಕೆ ರೈಲ್ವೆ ಇಲಾಖೆ ಮಾಡುತ್ತಿದೆ. ರಾಜ್ಯಕ್ಕೆ ರೈಲ್ವೆ ಯೋಜನೆಗಳನ್ನು ತರುವ ವಿಚಾರದಲ್ಲಿ ಯಾವುದೇ ರಾಜಕೀಯ ಸಲ್ಲದು. ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರಿಗೆ ಸಹಕರಿಸಬೇಕು ಎಂದು ವಿ.ಸೋಮಣ್ಣ ಹೇಳಿದರು.

ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಹೊಸ ಮಾರ್ಗ ಸಮೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ರೈಲ್ವೆ ಅಧಿಕಾರಿಗಳಾದ ಅರವಿಂದ್ ಶ್ರೀವತ್ಸಾ, ಎಸ್.ವಿ. ಶಾಸ್ತ್ರಿ, ಅಜಯ್ ಶರ್ಮ, ಶೃತಿ ಅಗರವಾಲ್, ಆಶಾ ಮತ್ತಿತರರು ಇದ್ದರು. ಕೋಟೆಗಂಗೂರು ಟರ್ಮಿನಲ್‌ ಶೀಘ್ರ ಪೂರ್ಣವಾಗಲಿ: ವಿ.ಸೋಮಣ್ಣ

ಶಿವಮೊಗ್ಗ: ಕೋಟೆಗಂಗೂರಿನಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೇ ಕೋಚಿಂಗ್ ಟರ್ಮಿನಲ್ ರಾಜ್ಯದಲ್ಲೇ ಮೊದಲನೆಯದಾಗಿದ್ದು, 2026ರೊಳಗೆ ಗುಣಮಟ್ಟದೊಂದಿಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದು ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.

ಗುರುವಾರ ಶಿವಮೊಗ್ಗದ ಕೋಟೆಗಂಗೂರಿನಲ್ಲಿ ನಿರ್ಮಿಸಲಾಗುತ್ತಿರುವ ರೈಲುಗಳನ್ನು ಸ್ವಚ್ಛಗೊಳಿಸುವ ಕೋಚಿಂಗ್ ಟರ್ಮಿನಲ್‌ಗೆ ಭೇಟಿ ನೀಡಿ ಇಲ್ಲಿ ನಡೆಯುತ್ತಿ ರುವ ಕಾಮಗಾರಿಗಳನ್ನು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದರು.ಒಟ್ಟು 74 ಎಕರೆಯಲ್ಲಿ 80 ಕೋಟಿ ರು. ವೆಚ್ಚದಲ್ಲಿ ಕೋಚಿಂಗ್ ಟರ್ಮಿನಲ್ ನಿರ್ಮಾಣವಾಗುತ್ತಿದೆ. ರೈಟ್ಸ್ ಸಂಸ್ಥೆಯು ಕಾಮಗಾರಿ ನಡೆಸುತ್ತಿದೆ. ರೈಟ್ಸ್ ಸಂಸ್ಥೆಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಹಾಗೂ ಕಾಮಗಾರಿಯು ಗುಣಮಟ್ಟದಿಂದ ಕೂಡಿ ರುವಂತೆ ನಿರ್ವಹಿಸಬೇಕೆಂದು ನಿರ್ದೇಶಕರಿಗೆ ಸೂಚನೆ ನೀಡಿದರು.

ಇಲ್ಲಿ ಟರ್ಮಿನಲ್ ಆಗುವುದರಿಂದ ರಾಜ್ಯದ ಎಲ್ಲ ರೈಲುಗಳು ಇಲ್ಲಿ ಸ್ವಚ್ಛತೆಗಾಗಿ ಬರಲಿವೆ. ಇಲ್ಲಿ ಡಿಪೋ ಆಗುವುದರಿಂದ ವಂದೇ ಭಾರತ್ ರೈಲು ಸಹ ಬರಲಿದೆ. ಟರ್ಮಿನಲ್ ನಿರ್ಮಾಣದಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹೆಚ್ಚಲಿವೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮತ್ತು ಗುಣಮಟ್ಟ ವನ್ನು ಪರಿಶೀಲಿಸಲು ರೈಲ್ವೇ ಮುಖ್ಯ ಅಭಿಯಂತರರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳ್ಳಲು ಸಹಕರಿಸಬೇಕು ಎಂದು ಹೇಳಿದರು.ಶಿಕಾರಿಪುರ- ಶಿರಾಳಕೊಪ್ಪ - ರಾಣೆಬೆನ್ನೂರು ರೈಲ್ವೆಗೆ ರೈತರಿಂದ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆಲಸಗಳು ನಡೆಯುತ್ತಿವೆ. ಸಂಸದರು ಜಿಲ್ಲೆಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ, ರೈಲ್ವೆ ಇಲಾಖೆ ಐತಿಹಾಸಿಕ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಡಬ್ಲಿಂಗ್, ಎಲೆಕ್ಟ್ರಿಫಿಕೇಷನ್ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ರಾಜ್ಯದಲ್ಲಿ ಒಟ್ಟು 45 ಸಾವಿರ ಕೋಟಿ ರು. ಮೊತ್ತದ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು.

ರೈತರು - ಜಾನುವಾರು ಓಡಾಟಕ್ಕೆ ರಸ್ತೆ: ಈ ಭಾಗದ ರೈತರು, ಸ್ಥಳೀಯರು ಇಲ್ಲಿ ಆಚೆ ಕಡೆ ಓಡಾಡಲು ರಸ್ತೆ ಬೇಕೆಂದು ಮನವಿ ಮಾಡಿದ್ದು, ಜನ-ಜಾನುವಾರು ಓಡಾಡಲು ಅನುಕೂಲವಾಗುವಂತೆ ಆರ್‌ಓಬಿ ನಿರ್ಮಿಸಲು ಸೂಚಿಸಿದ್ದೇನೆ. ಹಾಗೂ ದೇವಸ್ಥಾನಕ್ಕೆ ಹೋಗಲು ದಾರಿ ಕೇಳಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.ಈ ಹಿಂದೆ ರೈಲ್ವೆ ಲೈನ್ ನಿರ್ಮಿಸಿದಾಗ ರೈತರಿಗೆ ಪರಿಹಾರ ಸಿಕ್ಕಿಲ್ಲ, ಒದಗಿಸುವಂತೆ ಕೋರಿದ್ದು, ರೈತರು ದಾಖಲಾತಿ ನೀಡಿದಲ್ಲಿ ಕಂದಾಯ ಮತ್ತು ರೈಲ್ವೇ ಇಲಾಖೆಯೊಂದಿಗೆ ಮಾತನಾಡುತ್ತೇನೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರಸ್ತುತ ಟರ್ಮಿನಲ್‌ನಲ್ಲಿ ಶೇ.25ರಷ್ಟು ಕೆಲಸ ಆಗಿದೆ. ಕೆಲಸ ಶೀಘ್ರಗತಿಯಲ್ಲಿ ಆಗಬೇಕು. ಡಿಸೆಂಬರ್ ಒಳಗೆ ಪಿಟ್‌ಲೈನ್ ಆಗಬೇಕು ಎಂದರು.ಈ ವೇಳೆ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಭಾರತಿ ಶೆಟ್ಟಿ, ಡಾ.ಧನಂಜಯ ಸರ್ಜಿ, ರೈಲ್ವೇ ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!