ಕಾಲಮಿತಿಯೊಳಗೆ ಮತಪಟ್ಟಿ ಪರಿಷ್ಕರಣೆ ಪೂರ್ಣಗೊಳಿಸಿ: ಡಾ.ಕುಮಾರ್

KannadaprabhaNewsNetwork |  
Published : Jun 26, 2026, 01:45 AM IST
25ಕೆಎಂಎನ್ ಡಿ15 | Kannada Prabha

ಸಾರಾಂಶ

ಮನೆ-ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಸಮರ್ಪಕವಾಗಿ ಪರಿಶೀಲಿಸಬೇಕು. ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಳವಳ್ಳಿ ವಿಧಾನಸಭಾ ವ್ಯಾಪ್ತಿಯ ಎಲ್ಲಾ ಮತಗಟ್ಟೆ ಅಧಿಕಾರಿಗಳೂ ಕೂಡ ನಿಯಮಗಳನ್ವಯ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) -2026 ಪ್ರಕ್ರಿಯೆಯನ್ನು ಯಾವುದೇ ಲೋಪ ಬಾರದಂತೆ ನಿಗದಿತ ಕಾಲ ಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ್ ಕರೆ ನೀಡಿದರು.

ಪಟ್ಟಣದ ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯ್ತಿಯಿಂದ ನಡೆದ ಮತಗಟ್ಟೆ ಅಧಿಕಾರಿಗಳಿಗೆ ಎಸ್ಐಆರ್ 2ನೇ ಹಂತದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮತದಾರರ ಹೆಸರು ಸೇರ್ಪಡೆ, ಹೆಸರು ಕೈಬಿಡುವಿಕೆ, ತಿದ್ದುಪಡಿ ಹಾಗೂ ವಿಳಾಸ ಬದಲಾವಣೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಚುನಾವಣಾ ಆಯೋಗದ ಮಾರ್ಗಸೂಚಿಗಳ ಅನುಸಾರ ಪಾರದರ್ಶಕವಾಗಿ ಮತ್ತು ನಿಖರವಾಗಿ ಕೈಗೊಳ್ಳುವಂತೆ ತಿಳಿಸಿದರು.

ಮನೆ-ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಸಮರ್ಪಕವಾಗಿ ಪರಿಶೀಲಿಸಬೇಕು. ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಾರ್ಯಾಗಾರದಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಬಿಎಲ್ ಒ, ಮೇಲ್ವಿಚಾರಕರು, ನೂಡಲ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗೆ ಅರ್ಜಿ ನಮೂನೆಗಳ ನಿರ್ವಹಣೆ, ದಾಖಲೆಗಳ ಪರಿಶೀಲನೆ, ಮತದಾರರ ಮಾಹಿತಿಯ ದೃಢೀಕರಣ, ಆನ್‌ಲೈನ್ ಸೇವೆಗಳ ಬಳಕೆ ಹಾಗೂ ಚುನಾವಣಾ ಆಯೋಗದ ಇತ್ತೀಚಿನ ನಿರ್ದೇಶನಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.

ಜಿಲ್ಲಾಧಿಕಾರಿಗಳು ತರಬೇತಿ ಕಾರ್ಯಾಗಾರದ ವ್ಯವಸ್ಥೆಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ಈ ವೇಳೆ ತಹಸೀಲ್ದಾರ್ ಎಸ್.ವಿ.ಲೋಕೇಶ್, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮತ್ತು ತಾಲೂಕು ಮತದಾರರ ನೋಂದಣಿ ಅಧಿಕಾರಿ ಪ್ರತೀಕ್ ಜಿ ಹೆಗ್ಡೆ, ಶಿರಸ್ತೇದಾರ್ ನಾಗಮಣಿ, ತಾಲೂಕು ಕಚೇರಿ ಚುನಾವಣಾ ಶಾಖೆ ಕೆ.ಜಿ.ಶ್ರೀನಿವಾಸ್ ಮೂರ್ತಿ, ಬಿ.ಚೇತನ್, ಪ್ರಜ್ವಲ್ ಮತ್ತು ಸಹನಾ ಜೊತೆಗೆ ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಂದ್ರ ಮೋಹನ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಯನ್ಸ್ ಸಂಸ್ಥೆಗೆ ಪ್ರಚಾರ ವಾಹನ ಹಸ್ತಾಂತರ
ಸರ್ಕಾರಿ ಶಾಲಾ ಹಳೆಯ ದಾಖಲೆಗಳ ಡಿಜಿಟಲೀಕರಣಕ್ಕೆ ಆಗ್ರಹ