ಕನ್ನಡಪ್ರಭ ವಾರ್ತೆ ಕುಶಾಲನಗರ
ಲಾರಿ ಮತ್ತು ಸರಕು ಸಾಗಾಣಿಕೆ ವಾಹನಗಳ ಮಾಲಕರು -ಚಾಲಕರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕುಶಾಲನಗರದಲ್ಲಿ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು ಬುಧವಾರ ಮಧ್ಯರಾತ್ರಿಯಿಂದ ಸರಕು ಸಾಗಾಣಿಕೆ ವಾಹನಗಳನ್ನು ಸಂಪೂರ್ಣ ಬಂದ್ ಮಾಡುವ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದಾರೆ.ಕುಶಾಲನಗರ ಕಾವೇರಿ ಲಾರಿ ಮಾಲಕರ ಸಂಘ, ಕುಶಾಲನಗರ ಮಿನಿ ಲಾರಿ ಮಾಲಕರ ಸಂಘ ಮತ್ತು ಕೂರ್ಗ್ ಲಾರಿ ಚಾಲಕರ ಮಾಲಕರ ಸಂಘದ ಪ್ರಮುಖರು ಈ ಬಗ್ಗೆ ಹೇಳಿಕೆ ನೀಡಿದ್ದು, ಸರ್ಕಾರದ ಇತ್ತೀಚಿನ ಕಾನೂನುಗಳಿಗೆ ಖಂಡನೆ ವ್ಯಕ್ತಪಡಿಸಿದ್ದು ಬುಧವಾರ ರಾತ್ರಿ 12 ಗಂಟೆಯಿಂದ ಅನಿರ್ದಿಷ್ಟ ಅವಧಿ ಮುಷ್ಕರ ಹೂಡಲಾಗುವುದು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಕುಶಾಲನಗರ ಕಾವೇರಿ ಲಾರಿ ಮಾಲಕರ ಸಂಘದ ಅಧ್ಯಕ್ಷ ಜಿ.ಎ. ಲೋಕೇಶ್, ಮಿನಿ ಲಾರಿ ಮಾಲಕರ ಸಂಘದ ಅಧ್ಯಕ್ಷ ದೊಡ್ಡಣ್ಣ ಮತ್ತು ಕೂರ್ಗ್ ಲಾರಿ ಚಾಲಕರು ಮಾಲಕರ ಸಂಘದ ಅಧ್ಯಕ್ಷ ರಫೀಕ್ ಬೇಡಿಕೆಗಳು ಈಡೇರಿಸುವ ತನಕ ಮುಷ್ಕರ ಹೂಡಲಾಗುವುದು ಎಂದು ತಿಳಿಸಿದ್ದಾರೆ.ಮುಷ್ಕರಕ್ಕೆ ಪೂರ್ವಭಾವಿಯಾಗಿ ಕುಶಾಲನಗರದ ಗಡಿಭಾಗದ ಅರಣ್ಯ ತಪಾಸಣಾ ಗೇಟ್ ಬಳಿ ಪ್ರತಿ ಸರಕು ಸಾಗಾಣಿಕೆ ವಾಹನಗಳ ಚಾಲಕರಿಗೆ ಈ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಮುಷ್ಕರವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಬೇಡಿಕೆಗಳೇನು?: ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಚಾಲಕರಿಗೆ 10 ವರ್ಷ ಜೈಲು ಮತ್ತು 7 ಲಕ್ಷ ದಂಡ ವಿಧಿಸುವ ಕಾನೂನು ತಕ್ಷಣ ಹಿಂಪಡೆಯಬೇಕು. ರಾಜ್ಯದ ಗಡಿಭಾಗಗಳಲ್ಲಿರುವ ಎಲ್ಲ ಚೆಕ್ ಪೋಸ್ಟ್ ಕೇಂದ್ರ ತೆರವುಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ರಾಜ್ಯದಾದ್ಯಂತ ಮುಷ್ಕರ ನಡೆಯಲಿದೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ. ಮುಷ್ಕರದಲ್ಲಿ ಲಾರಿ ಮಿನಿ ಲಾರಿಗಳು ಗೂಡ್ಸ್ ಗಳು ಮತ್ತು ಆಟೋ ರಿಕ್ಷಾಗಳ ಸಂಘಟನೆಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆಈ ಸಂದರ್ಭ ಸಂಘಟನೆಗಳ ಪ್ರಮುಖರಾದ ಡಿ ಕೆ ಗಣೇಶ್ ಜಯಣ್ಣ ,ಸುರೇಂದ್ರ, ಸಂದೀಪ್, ಮಹೇಶ್, ಅಶ್ರಫ್ ಮತ್ತಿತರರಿದ್ದರು.