ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚಾಮನೂರು-ನರಿಬೋಳಿ ಬ್ರಿಡ್ಜ್ ಕಾಮಗಾರಿ ಮತ್ತು ಭೂ ಸ್ವಾಧೀನ ಪ್ರಕ್ರಿಯೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಕಾಮಗಾರಿಯ ಮಾಹಿತಿ ಪಡದ ಡಾ. ಅಜಯ್ ಸಿಂಗ್, ಈ ಭಾಗದ ಜನರ ಕನಸಾದ ಸೇತುವೆ ನಿರ್ಮಾಣವು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಗತ್ಯವಾಗಿದೆ. ಅಧಿಕಾರಿಗಳು ಜನರ ನಾಡಿ ಮಿಡಿತ ಅರಿತು ಕಾರ್ಯೋನ್ಮುಖರಾಗಬೇಕು ಎಂದರು.
ಈ ಯೋಜನೆ ಪ್ರಸ್ತುತ ಹಂತ ಹಾಗೂ ಎದುರಾಗಿರುವ ತಾಂತ್ರಿಕ ಸವಾಲುಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.ವಿವಿಧ ಇಲಾಖೆಗಳ ನಡುವೆ ಪರಸ್ಪರ ಸಮನ್ವಯದಿಂದ ಅನುಮತಿ ಪಡೆದು ಸಾರ್ವಜನಿಕರಿಗೆ ಶೀಘ್ರ ಈ ಯೋಜನೆಯಿಂದ ಅನುಕೂಲವಾಗುವಂತೆ ಡಾ. ಅಜಯ್ ಸಿಂಗ್ ಸೂಚನೆ ನೀಡಿದರು.
ಸೇತುವೆ ಕಾಮಗಾರಿಗಿದ್ದ ಅಡೆತಡೆಗಳೆಲ್ಲವನ್ನು ಇದೀಗ ಬಗೆಹರಿಸಲಾಗಿದೆ. ಅನುದಾನ 32ಕೋಟಿ ಈಗಾಗಲೆ ಬಿಡುಗಡೆಯಾಗಿದೆ. ಜಮೀನು ನೀಡಿದ ರೈತರಿಗೆ ಕೊಡಲು ಹೆಚ್ಚಿನ 2 ಕೋಟಿ ರು. ಅನುದಾನವೂ ಬಿಡುಗಡೆಯಾಗಿದೆ. ವಾರದೊಳಗೆ ನೇರ ಖರೀದಿಗೆ ಒಪ್ಪಂದ ಪತ್ರ ನೀಡಿರುವ ರೈತರಿಗೆ ಕರೆದು ಪರಿಹಾರದ ಚೆಕ್ ನೀಡುತ್ತೇವೆ ಎಂದು ಹೇಳಿದ ಡಾ. ಅಜಯ್ ಸಿಂಗ್ ಅವರು ಶೀಘ್ರದಲ್ಲೇ ಕಾಮಗಾರಿಯ ಅಳಿದುಳಿದ ಕೆಲಸಕ್ಕಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.ಗ್ರಾಮಸ್ಥರೊಂದಿಗೂ ಡಾ. ಅಜಯ್ ಸಿಂಗ್ ಮಾತುಕತೆ ನಡೆಸಿ ಮುಂದಿನ 10 ತಿಂಗಳಲ್ಲಿ ಕಾಮಗಾರಿ ಮಾಡಿ ಮುಗಿಸುವ ಭರವಸೆ ನೀಡಿದರು. ಡಿಸೆಂಬರ್‌ನಲ್ಲಿ ಸೇತುವೆ ಕಾಮಗಾರಿ ಮುಗಿದು ಜನರ ಬಳಕೆಗೆ ಸಿದ್ಧವಾಗಲಿದೆ ಎಂದರು.
ಲೋಕೋಪಯೋಗಿ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ವಿ ಏನ್ ಪಾಟೀಲ್, ಅಪರ ಜಿಲ್ಲಾಧಿಕಾರಿಗಳು ಮತ್ತು ಸಹಾಯಕ ಆಯುಕ್ತರು ಸೇಡಂ ಮತ್ತು ಕಲಬುರ್ಗಿ ಹಾಗೂ ಮುಖ್ಯ ಅಭಿಯಂತರರು ಲೋಕೋಪಯೋಗಿ ಇಲಾಖೆ ಮತ್ತು ಅಧೀಕ್ಷಕ ಅಭಿಯಂತರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಹೆಚ್ಚುವರಿ ಅನುದಾನಕ್ಕಾಗಿ ಕೇಂದ್ರಕ್ಕೂ ಪ್ರಸ್ತಾವನೆ
ಕಾಮಗಾರಿ ಮುಕ್ತಾಯಗೊಳಿಸಲು ಅಗತ್ಯವಿರುವ ಹೆಚ್ಚುವರಿ ಅನುದಾನ ₹32 ಕೋಟಿ ಒದಗಿಸಲು ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಲೋಕೋಪಯೋಗಿ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಅಗತ್ಯವಿರುವ ಜಮೀನನ್ನು ರೈತರಿಂದ ಒಪ್ಪಿಗೆ ಮೇರೆಗೆ ಖರೀದಿಸಲು ಹಾಗೂ ಸಂಧಾನಕ್ಕೆ ಸಮ್ಮತಿ ನೀಡದ ರೈತರ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆ ಮುಖಾಂತರ ಪಡೆದು ಸಂಬಂಧಿತ ಇಲಾಖೆಗೆ ಹಸ್ತಾಂತರಿಸುವುದಾಗಿ ಕಲಬುರ್ಗಿ ಉಪವಿಭಾಗ ಮತ್ತು ಸೇಡಂ ಉಪ ವಿಭಾಗದ ಸಹಾಯಕ ಆಯುಕ್ತರು ಸಭೆಗೆ ಮಾಹಿತಿ ನೀಡಿದರು.--ಸಭೆಯ ನಿರ್ಣಯದ ಅನ್ವಯ ಅಗತ್ಯ ಪ್ರಕ್ರಿಯೆಗಳನ್ನು ಅಧಿಕಾರಿಗಳು ಪೂರೈಸಲು ಹಾಗೂ ಡಿ.2026ರ ಒಳಗಾಗಿ ಸೇತುವೆ ಮತ್ತು ರಸ್ತೆ ಕಾಮಗಾರಿಯನ್ನು ಮುಕ್ತಾಯಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ನಿರ್ದೇಶಿಸಿದರು.