ಕನ್ನಡಪ್ರಭ ವಾರ್ತೆ ಹಟ್ಟಿಚಿನ್ನದಗಣಿ
ಘಟನೆ ವಿವರ: ಮೃತ ಯುವತಿ ಜ್ಯೋತಿ ರಾಯಚೂರಿನ ರೀಮ್ಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಪ್ರೀತಿ, ಪ್ರೇಮ, ವಿವಾಹ ವಿಚಾರದಲ್ಲಿ ಕಲಹವಾಯಿತೆನ್ನಲಾಗಿದ್ದು, ಭಾನುವಾರ ರಾತ್ರಿ 8ರ ಸುಮಾರಿಗೆ ಹಟ್ಟಿ-ರಾಯಚೂರು ಮುಖ್ಯ ರಸ್ತೆಯ ಲೇಔಟ್ ಒಂದರಲ್ಲಿ ನಿಲ್ಲಿಸಿದ್ದ ರೋಡ್ ರೋಲರ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಸೋಮವಾರ ಮಧ್ಯಾಹ್ನ 3ರ ಸುಮಾರಿಗೆ ಶವ ಪತ್ತೆ ಹಚ್ಚಿದ್ದು, ಅವಿವಾಹಿತರಾಗಿದ್ದ ಜ್ಯೋತಿ ಮತ್ತು ಜ್ಞಾನಮೂರ್ತಿ ಪ್ರೀತಿಸುತ್ತಿದ್ದರೆನ್ನಲಾಗಿದೆ. ಜ್ಯೋತಿ ಪ್ರೀತಿಸುತ್ತಿರುವ ಹಟ್ಟಿ ಪಟ್ಟಣದ ನಿವಾಸಿ, ಚಿನ್ನದಗಣಿ ಕಂಪನಿ ನೌಕರ ಜ್ಞಾನಮೂರ್ತಿ ಎನ್ನುವವರು ಜ್ಯೋತಿಗೆ ಮದುವೆಯಾಗುವುದಾಗಿ ಮೋಸಗೊಳಿಸಿದ್ದಾರೆಂದು ದೂರು ಸಲ್ಲಿಸಿದ ಹಿನ್ನಲೆ ಸೋಮವಾರ ಜ್ಞಾನಮೂರ್ತಿ ಮೇಲೆ ಪ್ರಕರಣ ದಾಖಲಾಗಿದೆ.ಶವವಿಟ್ಟು ಪ್ರತಿಭಟನೆ: ಮಂಗಳವಾರ ಜ್ಯೋತಿ ಕುಟುಂಬದ ಸದಸ್ಯರು ಅಂತ್ಯಸಂಸ್ಕಾರಗೊಳಿಸದೆ ಹಟ್ಟಿ ಪೊಲೀಸ್ ಠಾಣೆಯ ಆವರಣದಲ್ಲಿ ಸಾಯಂಕಾಲ 5ರಿಂದ 7 ಗಂಟೆ ವರೆಗೆ 2 ಗಂಟೆಗಳ ಕಾಲ ಶವವಿಟ್ಟು ಪ್ರತಿಭಟನೆ ನಡೆಸಿದ ಹಿನ್ನಲೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಜ್ಯೋತಿಯನ್ನು ಕೊಲೆಗೈಯಲ್ಲಾಗಿದ್ದು, ಜ್ಞಾನಮೂರ್ತಿ ಒಬ್ಬನ ವಿರುದ್ಧ ಪ್ರಕರಣ ದಾಖಲಿಸಿದರೆ ಸಲ್ಲದು, ಅವರ ಕುಟುಂಬದ ಎಲ್ಲಾ ಸದಸ್ಯರ ಮೇಲೆ ಪ್ರಕರಣ ದಾಖಲಿಸಿಕೊಂಡು, ಕುಟುಂಬಸ್ಥರನ್ನು ಬಂಧಿಸಬೇಕೆಂದು ಮೃತೆ ಜ್ಯೋತಿ ಸಹೋದರಿ ಬಸ್ಸಮ್ಮ ಪಟ್ಟು ಹಿಡಿದ ಹಿನ್ನಲೆ ಮಂಗಳವಾರ ಜ್ಞಾನಮೂರ್ತಿ ಸೇರಿದಂತೆ ಅವರ ಕುಟುಂಬದ ಸರಸ್ವತಿ, ಭುವನೇಶ್ವರಿ, ವಿಜಯಲಕ್ಷ್ಮೀ, ಲಕ್ಷ್ಮೀದೇವಿ, ಚಂದ್ರಕಲಾ ಐವರು ಸದಸ್ಯರ ವಿರುದ್ಧ ಎರಡನೇ ಪ್ರಕರಣ ದಾಖಲಾಗಿದೆ.
ಜ್ಯೋತಿ ಆತ್ಮಹತ್ಯೆ ಮಾಡಿಕೊಳ್ಳಲು ಜ್ಞಾನಮೂರ್ತಿಯೇ ಕಾರಣವೆಂದು ಆರೋಪಿಸಿ ಸೋಮವಾರ ದೂರು ನೀಡಿದ ಹಿನ್ನಲೆ ಪ್ರಕರಣ ದಾಖಲಾಗಿತ್ತು. ಮಂಗಳವಾರ ಇದು ಆತ್ಮಹತ್ಯೆಯಲ್ಲ ಕೊಲೆಯಾಗಿದ್ದು, ಜ್ಞಾನಮೂರ್ತಿ ಹಾಗೂ ಕುಟುಂಬದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಪಟ್ಟು ಹಿಡಿದು ಇಂದು ಸಹ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.