2025ರ ವರ್ಷಾಂತ್ಯಕ್ಕೆ ಬೈಪಾಸ್‌ ಕಾಮಗಾರಿ ಮುಗಿಸಿ: ಶಾಲಿನಿ ರಜನೀಶ

KannadaprabhaNewsNetwork |  
Published : Dec 15, 2024, 02:01 AM IST
14ಡಿಡಬ್ಲೂಡಿ4ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ ಶನಿವಾರ ಇಲ್ಲಿಯ ನರೇಂದ್ರ ಕ್ರಾಸ್‌ದಿಂದ ಗಬ್ಬೂರ ವರೆಗಿನ ಬೈಪಾಸ್ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. | Kannada Prabha

ಸಾರಾಂಶ

ಮುಂದಿನ 15 ದಿನಗಳಲ್ಲಿ ಬಾಕಿ ಇರುವ ಕಾಮಗಾರಿ ಪೂರ್ತಿಗೊಳಿಸಿ ತಮಗೆ ದಾಖಲೆ ಸಲ್ಲಿಸುವಂತೆ ಮತ್ತು ಸಂಬಂಧಿಸಿದ ಅಧಿಕಾರಿಗಳು ನಿಗಾವಹಿಸಿ, ವರದಿ ನೀಡುವಂತೆ ಡಾ. ಶಾಲಿನಿ ರಜಿನೀಶ ಅಧಿಕಾರಿಗಳಿಗೆ ಸೂಚಿಸಿದರು.

ಧಾರವಾಡ:

ಒಪ್ಪಂದದಂತೆ 2025ರ ಡಿಸೆಂಬರ್ ದೊಳಗೆ ಬೈಪಾಸ್‌ ರಸ್ತೆಯ ಅಗಲೀಕರಣ ಕಾಮಗಾರಿ ಪೂರ್ಣವಾಗಿಸಿ, ಸಾರ್ವಜನಿಕರ ಸಂಚಾರಕ್ಕೆ ಷಟ್ಪಥದ ರಸ್ತೆಗಳನ್ನು ಮುಕ್ತವಾಗಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ ಸೂಚಿಸಿದರು.

ಶನಿವಾರ ಇಲ್ಲಿಯ ನರೇಂದ್ರ ಕ್ರಾಸ್‌ದಿಂದ ಗಬ್ಬೂರ ವರೆಗಿನ ಬೈಪಾಸ್ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ರಾಷ್ಷ್ರೀಯ ಹೆದ್ದಾರಿ 48ರಲ್ಲಿ ಬರುವ ಈ ರಸ್ತೆ ಅಗಲೀಕರಣದ ಕಾಮಗಾರಿಗೆ ಮೊದಲ ಹಂತದಲ್ಲಿ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಂಡರೂ ಗುತ್ತಿಗೆದಾರರು ಕಾಮಗಾರಿ ವಿಳಂಬ ಎದ್ದು ಕಾಣುತ್ತಿದೆ. ಯಾವುದೇ ವಿಳಂಬವಿಲ್ಲದೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

ಮುಂದಿನ 15 ದಿನಗಳಲ್ಲಿ ಬಾಕಿ ಇರುವ ಕಾಮಗಾರಿ ಪೂರ್ತಿಗೊಳಿಸಿ ತಮಗೆ ದಾಖಲೆ ಸಲ್ಲಿಸುವಂತೆ ಮತ್ತು ಸಂಬಂಧಿಸಿದ ಅಧಿಕಾರಿಗಳು ನಿಗಾವಹಿಸಿ, ವರದಿ ನೀಡುವಂತೆ ಸೂಚಿಸಿದ ಅವರು, ಕಾಮಗಾರಿ ಗುಣಮಟ್ಟ ಇರಬೇಕು. ಕಳಪೆ ಕಾಮಗಾರಿ ಆಗಲು ಅವಕಾಶವಾಗದಂತೆ ಪ್ರತಿ ಹಂತದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮೇಲುಸ್ತುವಾರಿ, ನಿಗಾವಹಿಸಲು ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಕಡತಗಳನ್ನು ತಕ್ಷಣ ತೆರವುಗೊಳಿಸಬೇಕು. ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿ, ಅಗತ್ಯ ಹಣ ಬಿಡುಗಡೆ ಮಾಡಬೇಕು ಎಂದು ತಾಕೀತು ಮಾಡಿದರು.

ಕೆಲಗೇರಿ ಬಳಿಯ ರೈಲ್ವೆ ಮೇಲ್ಸೇತುವೆ ಹತ್ತಿರ ಪರಿಶೀಲಿಸಿ, ಇಲ್ಲಿನ ಕಾಮಗಾರಿ ಬೇಗ ಪ್ರಾರಂಭಿಸಬೇಕು. ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ನರೇಂದ್ರ ಟೋಲ್ ಪ್ಲಾಜಾ, ಕೆಲಗೇರಿ ರೈಲ್ವೆ ಮೇಲ್ಸೇತುವೆ ಹತ್ತಿರ, ತಾರಿಹಾಳ ಸೇತುವೆ ಸೇರಿದಂತೆ ಬೈಪಾಸ್ ರಸ್ತೆಯುದ್ದಕ್ಕೂ ವಿವಿಧೆಡೆಗಳಲ್ಲಿ ಅವರು ಕಾಮಗಾರಿ ಪರಿಶೀಲಿಸಿದರು.

30 ಕಿಮೀ ಕಾಮಗಾರಿ:

ಜಿಲ್ಲಾಧಿಕಾರಿ ದಿವ್ಯಪ್ರಭು, ಆರು ಪಥದ ರಸ್ತೆ ಕಾಮಗಾರಿ ಮಾಡಲು ಧಾರವಾಡದ ನರೇಂದ್ರ ಕ್ರಾಸ್‌ದಿಂದ ಹುಬ್ಬಳ್ಳಿ ಗಬ್ಬೂರ ವರೆಗಿನ 30 ಕಿಮೀ ರಸ್ತೆ ಗುರುತಿಸಲಾಗಿದೆ. ಇದಕ್ಕಾಗಿ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆ ಉಂಟಾಗಿದೆ. ಮೊದಲ ಹಂತವಾಗಿ 14.26 ಹೆಕ್ಟೇರ್ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದ ₹ 98 ಕೋಟಿ ಭೂ ಪರಿಹಾರ ಬಿಡುಗಡೆ ಆಗಿದ್ದು, ₹ 27 ಕೋಟಿ ಭೂ ಪರಿಹಾರವನ್ನು ಈಗಾಗಲೇ ರೈತರಿಗೆ, ಭೂಮಾಲಿಕರಿಗೆ ವಿತರಿಸಲಾಗಿದೆ. ಉಳಿದ ಪರಿಹಾರವನ್ನು ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಎರಡನೇಯ ಹಂತದಲ್ಲಿ 10 ಹೆಕ್ಟೇರ್ ಭೂ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆಯು ಹಂತಿಮ ಹಂತದಲ್ಲಿದೆ. ಈಗಾಗಲೇ ಇದರ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಎನ್‌ಎಚ್‌ಐದ ಕೇಂದ್ರ ಕಚೇರಿಯ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಅನುಮತಿ ಬಂದ ತಕ್ಷಣ ಕ್ರಮ ಜರುಗಿಸಲಾಗುವುದು. ಮೂರನೇಯ ಹಂತದಲ್ಲಿ 14 ಹೆಕ್ಟೇರ್ ಭೂಮಿ ಭೂಸ್ವಾಧೀನಕ್ಕೆ ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ ಎಂದರು.

ಕಾಮಗಾರಿಯನ್ನು ಗುತ್ತಿಗೆದಾರ ಮಾರ್ಚ್‌ 2023ರಿಂದ ಡಿಸೆಂಬರ್ 2025ರೊಳಗೆ ಪೂರ್ತಿಗೊಳಿಸಿ ಕೊಡುವ ಒಪ್ಪಂದವಾಗಿದೆ. ಆದರೆ, ಸಾರ್ವಜನಿಕರ ಸಂಚಾರದ ಹಿತದೃಷ್ಟಿಯಿಂದ ಕೊನೆಯ ದಿನಾಂಕಕ್ಕಿಂತ ಮುಂಚಿತವಾಗಿ ಕಾಮಗಾರಿ ಪೂರ್ಣಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಬೇಕು. ಗುತ್ತಿಗೆದಾರ ಕಾಮಗಾರಿ ಅನುಷ್ಠಾನದಲ್ಲಿ ನಿಧಾನಗತಿ ಅನುಸರಿಸುತ್ತಿದ್ದು, ಈಗಾಗಲೇ ಈ ಕುರಿತು ಎಚ್ಚರಿಕೆ ನೀಡಲಾಗಿದೆ ಮತ್ತು ಗುಣಮಟ್ಟದ ಕಾಮಗಾರಿ ನಿರ್ವಹಿಸಲು ನಿರಂತರ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ 48ರ ವಿಶೇಷ ಭೂಸ್ವಾಧೀನ ಅಧಿಕಾರಿ ದೇವರಾಜ ಆರ್. ಕಾಮಗಾರಿ, ಭೂಸ್ವಾಧೀನ ಪ್ರದೇಶಗಳ ಪ್ರಗತಿ ಬಗ್ಗೆ ಸ್ಥಳದಲ್ಲಿ ವಿವರಿಸಿದರು.

ಈ ವೇಳೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಎಸ್ಪಿ ಡಾ. ಗೋಪಾಲ ಬ್ಯಾಕೋಡ್, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾಂವಿ, ಭೂಸ್ವಾಧೀನ ವಿಭಾಗದ ಯೋಜನಾ ನಿರ್ದೇಶಕ ಭುವನೇಶ್ ಕುಮಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಸೀಲ್ದಾರ್‌ ಡಿ.ಎಚ್‌. ಹೂಗಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ