ಕನ್ನಡಪ್ರಭ ವಾರ್ತ ಯಳಂದೂರುಪಟ್ಟಣದಲ್ಲಿ ನಡೆಯುತ್ತಿರುವ ೧೦೦ ಹಾಸಿಗೆಗಳ ಕಟ್ಟಡ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಮುಗಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸೂಚನೆ ನೀಡಿದರು.ಶನಿವಾರ ಆಸ್ಪತ್ರೆ ಕಟ್ಟಡದ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಈ ಭಾಗ ಕಪ್ಪುಮಣ್ಣಿನಿಂದ ಕೂಡಿದೆ. ಪ್ರತಿ ಹಂತದಲ್ಲೂ ಗುಣಮಟ್ಟದ ಕಾಮಗಾರಿ ನಡೆಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರತಿ ಹಂತದಲ್ಲೂ ಅಧಿಕಾರಿಗಳು ಹಾಜರಿರಬೇಕೆಂಬ ಸೂಚನೆಯನ್ನು ಅಧಿಕಾರಿಗಳು ಪಾಲಿಸುತ್ತಿದ್ದಾರೆ. ನಾನು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಬಂಧಪಟ್ಟ ತಂತ್ರಜ್ಞರು ಮಾಹಿತಿ ನೀಡಿದ್ದಾರೆ. ಕಾಮಗಾರಿ ಗುಣಮಟ್ಟದಿಂದ ಕೂಡಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು.ಆಸ್ಪತ್ರೆ ಕಟ್ಟಡಕ್ಕೆ ತೋಟಗಾರಿಕಾ ಇಲಾಖೆಯ ಸ್ಥಳದಿಂದ ರಸ್ತೆಯನ್ನು ವಿಸ್ತರಿಸುವ ಕಾಮಗಾರಿ ಮಾಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮ ವಹಿಸಲಾಗುವುದು. ಇಲ್ಲಿದ್ದ ಶವಾಗಾರದ ಕಟ್ಟಡ ಕೆಡವಲಾಗಿದ್ದು ಕಟ್ಟಡ ನಿರ್ಮಾಣವಾಗುವುದು ವಿಳಂಬವಾಗುವುದರಿಂದ ಶವಾಗಾರವನ್ನು ಆದಷ್ಟು ಬೇಗ ನಿರ್ಮಿಸಿಕೊಡಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ನಿಗದಿತ ಸ್ಥಳದಲ್ಲಿ ಹಳೆ ಕಟ್ಟಡ ಇದ್ದು ಇದು ಶಿಥಿಲವಾಗಿದ್ದು ಇದನ್ನು ಖಾಲಿ ಮಾಡಿಸಿಕೊಟ್ಟರೆ ೩ ತಿಂಗಳೊಳಗೆ ಕಟ್ಟಡ ಪೂರ್ಣಗೊಳಿಸಲಾಗುವುದು ಎಂದರು. ಇದಕ್ಕೆ ಶಾಸಕರು ವೈದ್ಯಾಧಿಕಾರಿಗಳಿಗೆ ಈ ಸಂಬಂಧ ಕ್ರಮ ವಹಿಸುವಂತೆ ಸೂಚನೆ ನೀಡಿದರು.