ವಾರದೊಳಗೆ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿ: ಸಂಸದ ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Jan 06, 2026, 02:45 AM IST
ಸಭೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದ ರೈತರು ಯಾರು ಖರೀದಿ ಕೇಂದ್ರಕ್ಕೆ ಮೆಕ್ಕೆಜೋಳ ತರುತ್ತಾರೆ ಅದನ್ನು ಖರೀದಿಸಬೇಕು. ರೈತರ ಸಂಕಷ್ಟ ನೀಗಿಸುವ ಯಾವುದೇ ಕ್ರಮ ಕಾಣಿಸುತ್ತಿಲ್ಲ. ಈಗ ರೈತರಿಗೆ ₹250 ಕೊಡುವ ಹೊಸ ಸ್ಕಿಮ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಗದಗ: ರಾಜ್ಯ ಸರ್ಕಾರ ಮೆಕ್ಕೆಜೋಳ ಬೆಳೆಗಾರರಿಗೆ ಘೋಷಣೆ ಮಾಡಿರುವ ₹250 ಪ್ರೋತ್ಸಾಹಧನವನ್ನು ಏಜೆಂಟರ ಹಾವಳಿ ತಪ್ಪಿಸಿ ನೇರವಾಗಿ ರೈತರ ಖಾತೆಗೆ ಜಮೆಯಾಗುವಂತೆ ನೋಡಿಕೊಳ್ಳಬೇಕು. ಒಂದು ವಾರದಲ್ಲಿ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರಾರಂಭಿಸುವ ಹಾಗೂ ಖರೀದಿ ಕೇಂದ್ರದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವ ಸಲುವಾಗಿ ಜಿಲ್ಲಾಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದರು.ಕಳೆದ ವರ್ಷ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ಎರಡು ಸಾವಿರ ರು.ಗಿಂತ ಹೆಚ್ಚಿನ ದರ ಸಿಕ್ಕಿತ್ತು. ಈ ವರ್ಷ ದರ ಸಂಪೂರ್ಣ ಕುಸಿದಿದೆ. ರೈತರು ಬಹಳ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜಿಲ್ಲೆಯ ರೈತರು ವಿಶೇಷವಾಗಿ ಲಕ್ಷ್ಮೇಶ್ವರದಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದರು. ಅಲ್ಲಿಗೆ ಜಿಲ್ಲಾಧಿಕಾರಿಗಳು ಬಂದು ಸರ್ಕಾರಕ್ಕೆ ಎಲ್ಲ ಮಾಹಿತಿ ನೀಡಿದ್ದಾರೆ. ಸರ್ಕಾರ ಮೊದಲು 10 ಲಕ್ಷ ಮೆಟ್ರಿಕ್ ಟನ್ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಈಗ ಖರೀದಿ ಬಹಳ ಮಂದಗತಿಯಲ್ಲಿ ನಡೆಯುತ್ತಿದೆ. ಇದುವರೆಗೂ ಒಂದು ಲಕ್ಷ ಟನ್ ಕೂಡ ಖರೀದಿಯಾಗಿಲ್ಲ. ಖರೀದಿ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂದರು.

ರಾಜ್ಯದ ರೈತರು ಯಾರು ಖರೀದಿ ಕೇಂದ್ರಕ್ಕೆ ಮೆಕ್ಕೆಜೋಳ ತರುತ್ತಾರೆ ಅದನ್ನು ಖರೀದಿಸಬೇಕು. ರೈತರ ಸಂಕಷ್ಟ ನೀಗಿಸುವ ಯಾವುದೇ ಕ್ರಮ ಕಾಣಿಸುತ್ತಿಲ್ಲ. ಈಗ ರೈತರಿಗೆ ₹250 ಕೊಡುವ ಹೊಸ ಸ್ಕಿಮ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ನಾವು ತೆಗೆದುಕೊಂಡು ಹೋಗಿರುವ ಮೆಕ್ಕೆಜೋಳದ ಪರಿಸ್ಥಿತಿ ಏನು? ಯಾರು ಖರೀದಿ ಕೇಂದ್ರಕ್ಕೆ ಮೆಕ್ಕೆಜೋಳ ತೆಗೆದುಕೊಂಡು ಹೋಗಿದ್ದಾರೆ. ಅದನ್ನು ಖರೀದಿ ಮಾಡಬೇಕು. ಮೆಕ್ಕೆಜೋಳ ಖರೀದಿಯಾಗದಿರುವ ರೈತರಿಗೆ ₹250 ಪ್ರೋತ್ಸಾಹಧನವನ್ನು ಯಾವ ರೀತಿ ಪರಿಹಾರ ನೀಡುತ್ತಾರೆ ಎನ್ನುವುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು.

ಏಜೆಂಟರ ಹಾವಳಿ ತಪ್ಪಿಸಿ:

ಖರೀದಿ ಕೇಂದ್ರಕ್ಕೆ ತರುವ ಮೆಕ್ಕೆಜೋಳವನ್ನು ಒಂದು ವಾರದಲ್ಲಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಈಗಾಗಲೇ ಸಮಯ ಬಹಳ ಆಗಿದೆ. ಸರ್ಕಾರ ಘೋಷಣೆ ಮಾಡಿರುವ ಹೊಸ ಯೋಜನೆಯಲ್ಲಿ ಅವ್ಯವಹಾರ ಆಗುವ ಆತಂಕ ಇದೆ. ಹಿಂದೆ ಹುಬ್ಬಳ್ಳಿಯಲ್ಲಿ ಈರುಳ್ಳಿ ಖರೀದಿ ಸಂದರ್ಭದಲ್ಲಿ ಅವ್ಯವಹಾರ ಆಗಿತ್ತು. ಗೋವಿನಜೋಳ ಖರೀದಿ ಸಂದರ್ಭದಲ್ಲಿಯೂ ಆಗಿತ್ತು. ಸರ್ಕಾರದ ಯೋಜನೆಯ ದುರ್ಲಾಭ ಪಡೆದುಕೊಳ್ಳುವವರು ಇರುತ್ತಾರೆ.‌ ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಈಗಾಗಲೇ ಏಜೆಂಟರು ಹುಟ್ಟಿಕೊಂಡಿದ್ದಾರೆ. ಅವರಿಗೆ ತಲುಪದೇ ನೇರವಾಗಿ ರೈತರಿಗೆ ತಲುಪುವ ರೀತಿಯಲ್ಲಿ ನೋಡಿಕೊಳ್ಳಬೇಕು. ನಿಜವಾದ ರೈತರ ಸಂಪೂರ್ಣ ಮಾಹಿತಿ ಪಡೆದು ಆವರು ಮಾರಿರುವ ಮೆಕ್ಕೆಜೋಳದ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಬೇಕು. ಇದರಲ್ಲಿ ಯಾವುದೇ ರೀತಿಯ ತಾರತಮ್ಯ, ಪಕ್ಷಪಾತ, ರಾಜಕಾರಣ ತರಬಾರದು ಎಂದರು.

ಮೆಕ್ಕೆಜೋಳ ಬೆಳೆದ ರಾಜ್ಯದ ಎಲ್ಲ ರೈತರಿಗೂ ಇದರ ಸದುಪಯೋಗ ಆಗಬೇಕು. ಇಲ್ಲದಿದ್ದರೆ ರೈತರಿಗೆ ಹಣವೂ ಬರುವುದಿಲ್ಲ. ಸರ್ಕಾರಕ್ಕೆ ಕೆಟ್ಟ ಹೆಸರೂ ಬರುತ್ತದೆ. ಆ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು. ಒಂದು ವಾರದಲ್ಲಿ ಸಂಪೂರ್ಣ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಅರ್ಹರಿಗೆ ಸರ್ಕಾರದ ಸಹಾಯ ದರ ತಲುಪಲಿ. ಈ ಪ್ರಕ್ರಿಯೆ ಅನುಷ್ಠಾನದಲ್ಲಿ ಅಕ್ರಮ ಆಗದಿರಲಿ ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್‌ಗೆ ₹1900 ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಆದರೆ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹250ರಂತೆ ಪಾವತಿಸಲಾಗುವುದು. ಈ ಯೋಜನೆಯನ್ನು ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಸಂಸ್ಥೆಯ ಮೂಲಕ ಅನುಷ್ಠಾನ ಮಾಡಲಾಗುತ್ತದೆ ಎಂದರು.

ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಸೇರಿದಂತೆ ಅಧಿಕಾರಿಗಳು ಹಾಗೂ ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ