ಫಲ ಪುಷ್ಪದಲ್ಲಿ ಅರಳಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ

KannadaprabhaNewsNetwork |  
Published : Jan 06, 2026, 02:45 AM IST
ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಆಯೋಜಿಸಿರುವ ತೋಟಗಾರಿಕೆ ಫಲಪುಷ್ಪ ಪ್ರದರ್ಶನದಲ್ಲಿ ಕಂಡು ಬಂದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ | Kannada Prabha

ಸಾರಾಂಶ

ಇತ್ತೀಚಿಗೆ ನಿಧನರಾದ ವೃಕ್ಷಮಾತೆ ಎಂದೇ ಖ್ಯಾತರಾದ ಸಾಲುಮರದ ತಿಮ್ಮಕ್ಕ ಅವರ ಚಿತ್ರವನ್ನು ಫಲಪುಷ್ಪದಲ್ಲಿ ವಿಶಿಷ್ಟ ರೀತಿಯಲ್ಲಿ ಅರಳಿಸಲಾಗಿದೆ.

ಪಾಲಾಕ್ಷ ಬಿ.ತಿಪ್ಪಳ್ಳಿ ಕೊಪ್ಪಳ

ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಗವಿಮಠದ ಆವರಣದಲ್ಲಿ ನಡೆದ ಫಲಪುಷ್ಪ ಪ್ರದರ್ಶನ ಹಾಗೂ ಕೃಷಿ ವಸ್ತುಗಳ ಪ್ರದರ್ಶನ ಗವಿಮಠದ ಜಾತ್ರೆಯ ಸೊಬಗು ಹೆಚ್ಚಿಸಿದೆ.

ತೋಟಗಾರಿಕೆ ಇಲಾಖೆಯಿಂದ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬೆಳೆದ ಫಲ,ಪುಷ್ಪಗಳ ಪ್ರದರ್ಶನ ಹಾಗೂ ತೋಟಗಾರಿಕೆ ಬೆಳೆ ಪ್ರದರ್ಶನ ಮಾಡಲಾಗುತ್ತಿದೆ. ಇತ್ತೀಚಿಗೆ ನಿಧನರಾದ ವೃಕ್ಷಮಾತೆ ಎಂದೇ ಖ್ಯಾತರಾದ ಸಾಲುಮರದ ತಿಮ್ಮಕ್ಕ ಅವರ ಚಿತ್ರವನ್ನು ಫಲಪುಷ್ಪದಲ್ಲಿ ವಿಶಿಷ್ಟ ರೀತಿಯಲ್ಲಿ ಅರಳಿಸಲಾಗಿದೆ.

ಕೃಷಿ ಇಲಾಖೆಯಿಂದ ಸಿರಿಧಾನ್ಯಗಳ ಮಹತ್ವ ಸಾರುವ ಜತೆಗೆ ಮಣ್ಣನ್ನು ರಕ್ಷಿಸಿ ಬದುಕನ್ನು ಪೋಷಿಸಿ ಎನ್ನುವ ಘೋಷವಾಕ್ಯದೊಂದಿಗೆ ಮಣ್ಣಿನ ಫಲವತ್ತತೆ, ಆರೋಗ್ಯದ ಬಗ್ಗೆ ಮನದಟ್ಟು ಮಾಡಿದೆ. ಪೌಷ್ಟಿಕ ಧಾನ್ಯಗಳ ಉತ್ಪಾದಕತೆ ಹೆಚ್ಚಿಸಿ, ಪೌಷ್ಟಿಕ ಭದ್ರತೆ ಮತ್ತು ರೈತರ ಆದಾಯ ವೃದ್ಧಿ ಮಾಡುವ ಉದ್ದೇಶ ಕೃಷಿ ಇಲಾಖೆಯದ್ದಾಗಿದೆ. ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಜನರು ಅನೇಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಉತ್ತಮ ಆರೋಗ್ಯ ಹಿತದೃಷ್ಟಿಯಿಂದ ಕೃಷಿ ಇಲಾಖೆ ಸಿರಿಧಾನ್ಯಗಳ ಮಹತ್ವ ಸಾರುತ್ತಿದೆ. ಸಿರಿಧಾನ್ಯಗಳಾದ ಜೋಳ, ರಾಗಿ, ಸಜ್ಜೆ, ನವಣೆ, ಕೊರಲೆ, ಹಾರಕ, ಸಾಮೆ, ಊದಲಿನಿಂದ ಮಾಡಿದ ಅಲಂಕಾರ ಮಾದರಿ ಆಕರ್ಷಕವಾಗಿತ್ತು.

ಜಲ, ಪರಿಸರ ಸಂರಕ್ಷಣೆ, ಮಣ್ಣಿನ ಸವಕಳಿ ತಡೆಗಟ್ಟುವಿಕೆ ಕುರಿತು ಅರಿವು ಮೂಡಿಸುವ ಜತೆಗೆ ಮಾದರಿ ಜಲಾನಯನ ಪ್ರದೇಶ ನಿರ್ಮಾಣ ಮಾಡಲಾಗಿದೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ವಿನೂತನ ಮಾದರಿಯ ಉಪಕರಣ ಪ್ರದರ್ಶನ ಮಾಡಲಾಗಿದೆ.

ಕೃಷಿ ಉಪಕರಣಗಳ ಪ್ರದರ್ಶನ: ರೋಣದ ಮಲ್ಲಯ್ಯ ಗುರುಬಸಯ್ಯ ಇವರಿಂದ ಕಳೆದ ೩೦ವರ್ಷಗಳಿಂದ ಸಂಗ್ರಹಿಸಲಾದ ಕೃಷಿಯಲ್ಲಿ ಉಪಯೋಗವಾಗುವ ಪಾರಂಪರಿಕ ಕೃಷಿ ಉಪಕರಣ ಹಾಗೂ ಬೀಜಗಳು, ಗ್ರಾಮೀಣ ಭಾಗದಲ್ಲಿ ನಿತ್ಯ ಕೃಷಿ ಕಾರ್ಯದಲ್ಲಿ ಬಳಸುವ ಎತ್ತಿನಬಂಡಿ, ಮಡಿಕೆ, ನೇಗಿಲು, ಕುಂಟೆ, ಕುಡ ಮೊದಲಾದ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಜನರಿಂದ ಪ್ರಶಂಸೆ ಗಳಿಸಿತು. ಕಟ್ಟಿಗೆ ಹಾಗೂ ಮಣ್ಣಿನಿಂದ ತಯಾರಿಸಲಾಗುತ್ತಿದ್ದ ಕೃಷಿ ಮತ್ತು ಗೃಹೋಪಯೋಗಿ ವಸ್ತುಗಳು ಬಹುತೇಕ ನೇಪಥ್ಯಕ್ಕೆ ಸರಿದಿವೆ. ಅವುಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಧಾನ್ಯ ಗುಡಿಸುವ ಗ್ವಾರಿ, ಮಣ್ಣಿನ ಮಡಿಕೆ, ಭರಣಿ, ಎತ್ತಿನ ಚಕ್ಕಡಿ, ಕೂರಿಗೆ, ಕುಂಟೆ, ಬುಟ್ಟಿ, ನೇಗಿಲು, ತೊಟ್ಟಿಲು ಇತರ ಕೃಷಿ ಸಾಮಗ್ರಿಗಳನ್ನು ಕೃಷಿ ವಸ್ತು ಪ್ರದರ್ಶನದಲ್ಲಿ ಕಂಡು ಬಂದಿತು.

ಕಲ್ಲಂಗಡಿಯಲ್ಲಿ ಅರಳಿದವರು ಫಲಪುಷ್ಪದಲ್ಲಿ ಅರಳಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಹಂಸಪಕ್ಷಿ, ನಟ ಪುನೀತ ರಾಜಕುಮಾರ ಹಾಗೂ ಕಲ್ಲಂಗಡಿಯಲ್ಲಿ ಕೆತ್ತನೆ ಮಾಡಲಾದ ಡಾ. ಬಿ.ಆರ್‌.ಅಂಬೇಡ್ಕರ್, ಡಾ. ಎ.ಪಿ.ಜೆ.ಅಬ್ದುಲ್ ಕಲಾಂ, ಡಾ.ರಾಜಕುಮಾರ, ಕುವೆಂಪು, ಸ್ವಾಮಿ ವಿವೇಕಾನಂದ, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಸುಭಾಷ್ ಚಂದ್ರ ಬೋಸ್ ಅವರ ಚಿತ್ರಗಳು ನೋಡುಗರ ಗಮನ ಸೆಳೆದವು.

ಈ ಸಲ ಕೃಷಿ ವಸ್ತು ಪ್ರದರ್ಶನದಲ್ಲಿ ಇಲಾಖೆ ಯೋಜನೆಗಳ ಪ್ರಚಾರದ ಜತೆಗೆ ಮಣ್ಣಿನ ಆರೋಗ್ಯ ಕಾಪಾಡುವುದು, ರಾಸಾಯನಿಕ ಮಿತ ಬಳಕೆ ಮೂಲಕ ಕೃಷಿ ಮಾಡುವ ಬಗ್ಗೆ ಮಾಹಿತಿ ನೀಡಲು ಹೆಚ್ಚು ಒತ್ತು ನೀಡಲಾಗಿದೆ. ರೈತರು ಮಣ್ಣಿನ ಆರೋಗ್ಯ ಕಾಪಾಡಬೇಕು. ಸಿರಿಧಾನ್ಯಗಳ ಕೃಷಿ ಮಾಡುವ ಮೂಲಕ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.

ತೇರು ಮೈದಾನದಲ್ಲಿ ತೋಟಗಾರಿಕೆ ಫಲ-ಪುಷ್ಪ ಪ್ರದರ್ಶನ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗವಿಮಠದ ತೇರು ಮೈದಾನದಲ್ಲಿ ತೋಟಗಾರಿಕೆ ಇಲಾಖೆಯಿಂದ ಜ. ೫ರಿಂದ ೧೪ರವರೆಗೆ ೧೦ದಿನಗಳ ಕಾಲ ತೋಟಗಾರಿಕಾ ಫಲ-ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಫಲ ಪುಷ್ಪ ಪ್ರದರ್ಶನದಲ್ಲಿ ಈ ವರ್ಷ ನಿಧನರಾದ ದಿ.ಸಾಲುಮರದ ತಿಮ್ಮಕ್ಕ ಅವರ ಹೂವಿನ ಮಾದರಿ ರಚಿಸಲಾಗಿದ್ದು, ಮಾದರಿ ಆಕರ್ಷಣೀಯವಾಗಿದೆ. ಚಿಟ್ಟೆ, ಹೃದಯಾಕಾರ, ಕರ್ನಾಟಕ ನಕ್ಷೆಯಲ್ಲಿ ಡಾ. ಪುನೀತ್ ರಾಜಕುಮಾರ್ ಅವರ ಮಾದರಿ, ಜಲಪಾತ, ಗೋಪುರ ಮಾದರಿ, ಟ್ರಯಾಂಗಲ್ ಮಾದರಿ, ನವಿಲು ಮಾದರಿ ಅತ್ಯಾಕರ್ಷಕವಾಗಿವೆ. ೨೫ರಿಂದ ೩೦ ವರ್ಷಗಳ ಬೋನ್ಸಾಯ್ ಮರಗಳು (ಕುಬ್ಜ ಮರಗಳು) ಕಣ್ಮನ ಸೆಳೆಯುತ್ತವೆ. ಜಿಲ್ಲೆಯ ರೈತರು ಬೆಳೆದ ಡ್ರ್ಯಾಗನ್ ಫ್ರುಟ್, ದಾಳಿಂಬೆ ಪ್ರದರ್ಶನ, ಇಲಾಖೆ ಯೋಜನೆಗಳ ಪೋಸ್ಟರ್‌ ಪ್ರದರ್ಶಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ