ತುಮಕೂರು : ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪಶ್ಚಿಮಾಭಿಮುಖವಾಗಿ ಹರಿಯುವ ನದಿ ನೀರನ್ನು, ಬಯಲು ಪ್ರದೇಶಗಳಿಗೆ ಹರಿಸಬಹುದು ಎಂಬುದನ್ನು ಮೊಟ್ಟ ಮೊದಲು ಪರಿಚಯಿಸಿದ್ದಾರೆ. ಹಾಗಾಗಿ ನೀರಾವರಿ ಯೋಜನೆಗೆ (ಪಶ್ಚಿಮಾಭಿಮುಖವಾಗಿ ಹರಿಯುವ ನದಿ ನೀರನ್ನು, ಬಯಲು ಪ್ರದೇಶಗಳಿಗೆ ಹರಿಸುವ ಯೋಜನೆ) ಜಿ.ಎಸ್. ಪರಮಶಿವಯ್ಯ ಹಾಗೂ ಎಸ್.ಎಂ. ಕೃಷ್ಣ ಹೆಸರಿಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜು ಒತ್ತಾಯಿಸಿದರು.
ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಗಿನ ಜಲಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ಹೆಸರನ್ನು ಸಹ ಈ ಯೋಜನೆಗೆ ಇಡಬೇಕು. 1971ರಲ್ಲಿ ರಾಷ್ಟ್ರಪತಿ ಆಡಳಿತವಿದ್ದಾಗ ಧರ್ಮವೀರು ರಾಜ್ಯಪಾಲರಾಗಿದ್ದರು. ಅವರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವರ್ಧನ್ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅವರನ್ನು ಬೆಂಗಳೂರು ಸರ್ಕಲ್‌ಗೆ ವರ್ಗಾವಣೆ ಮಾಡಿದ್ದರು. ಆಗ ಅವರು ಇನ್‌ವೆಸ್ಟಿಗೇಷನ್ ಸರ್ಕಲ್‌ಗೆ ವರ್ಗಾವಣೆ ಮಾಡಿಸಿಕೊಂಡು ಅರಣ್ಯ ಸುತ್ತಿ ಸಿದ್ಧಪಡಿಸಿದ ಸುಮಾರು 53 ವರ್ಷಗಳ ಕನಸು ಇದಾಗಿದೆ ಎಂದರು.
ನಂತರ ಬಂದ ಅನೇಕ ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹ ಯೋಜನೆಯ ಯಶಸ್ಸಿಗೆ ನಿರಂತರವಾಗಿ ಶ್ರಮಿಸಿದ್ದಾರೆ. ಅವರನ್ನೆಲ್ಲಾ ಗೌರವಿಸುವ ಕೆಲಸ ಬಹಳ ಉತ್ತಮವಾಗಿದೆ. ಪರಮಶಿವಯ್ಯ140 ಟಿಎಂಸಿ ನೀರಿನ ಯೋಜನೆ ತರಲು ಒತ್ತಾಯಿಸುತ್ತಿದ್ದರು. ಸರ್ಕಾರ ಪ್ರಾಯೋಗಿಕವಾಗಿ 24 ಟಿ.ಎಂ.ಸಿ ಅಡಿ ನೀರಿನ ಎತ್ತಿನಹೊಳೆ ಯೋಜನೆ ರೂಪಿಸಿದಾಗ, ಅವರು ಪ್ರಬಲವಾಗಿ ವಿರೋಧಿಸಿದ್ದರು. ಪೈಪ್ ಬದಲಾಗಿ ಕಾಲುವೆಯನ್ನು ಮಾಡಿಸಲು ಹರಸಾಹಸ ಮಾಡಲಾಯಿತು ಎಂದು ವಿವರಿಸಿದರು.
ಕೆಲವು ಬದಲಾವಣೆ ಮತ್ತು ಅನಗತ್ಯ ಎನಿಸಿದರೂ ಕಾಲುವೆ ನಿರ್ಮಾಣ ಬಹಳ ಪ್ರಮುಖವಾಗಿದೆ. ನಾವು 10000 ಕ್ಯೂಸೆಕ್ಸ್ ಸಾಮರ್ಥ್ಯದ ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ರೂಪಿಸಲು ಶ್ರಮಿದ್ದೆವು. ಕೊನೆಗೂ ಪೈಪ್ ಬದಲಾಗಿ ಹಾಸನ ಜಿಲ್ಲೆಯ ಹರವನಹಳ್ಳಿಯಿಂದ ತುಮಕೂರು ಜಿಲ್ಲೆಯ ಬೈರಗೊಂಡ್ಲುವಿನವರೆಗೆ ಸುಮಾರು 260 ಕಿ.ಮೀ. ದೂರದ ಕಾಲುವೆಗೆ, ಸುಮಾರು 3300 ಕ್ಯೂಸೆಕ್ಸ್ ಒಂದೇ ಸಾಮರ್ಥ್ಯದ ಕಾಲುವೆ ನಿರ್ಮಾಣ ಮಾಡಿರುವುದು ವಿಶೇಷ. ಈ ಕಾಲುವೆಗೆ ಜಿ.ಎಸ್.ಪರಮಶಿವಯ್ಯ ಹೆಸರಿಡಲೇಬೇಕು. ಇದು ಅವರ ಪರಿಕಲ್ಪನೆಯ ಕೂಸಾಗಿದೆ ಎಂದರು.
ಈ ಕಾಲುವೆ ಫ್ರಿಬೋರ್ಡ್ ಸೇರಿದಂತೆ ಒಂದು ವರ್ಷದ 365 ದಿವಸವೂ ನೀರು ಹರಿಸಿದರೆ, ಸುಮಾರು 140 ಟಿ.ಎಂ.ಸಿ ಅಡಿ ನೀರನ್ನು ಹರಿಸಬಹುದಾಗಿದೆ. ಸುಮಾರು 2000 ರಿಂದ 2500 ಟಿ.ಎಂ.ಸಿ. ನೀರು ಸಮುದ್ರ ಸೇರಲಿದೆ. ಇದರಲ್ಲಿ ಈ ಕಾಲುವೆ ಮೂಲಕ 140 ಟಿ.ಎಂ.ಸಿ. ನೀರನ್ನು ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆದೇಶದ ಮೇರೆಗೆ ರಾಜ್ಯಾದ್ಯಂತ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಹರಿಸುವ ಯೋಜನೆಯ ಸಮೀಕ್ಷೆ ಶೀಘ್ರವಾಗಿ ಪೂರ್ಣಗೊಳ್ಳಬೇಕಿದೆ. ಇದರಿಂದ ಪರಮಶಿವಯ್ಯನವರ ಅತ್ಮಕ್ಕೆ ಶಾಂತಿ ಸಿಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕುಂದರನಹಳ್ಳಿ ರಮೇಶ್, ಶಿವರುದ್ರಪ್ಪ, ರಕ್ಷಿತ್ ಉಪಸ್ಥಿತರಿದ್ದರು.