ಜಿಲ್ಲೆಯಾದ್ಯಂತ ಇರುವ ಅಪರೂಪದ ಶಿಲಾಶಾಸನಗಳು, ಹಸ್ತಪ್ರತಿಗಳು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ಗುರುತಿಸಿ, ಅವುಗಳ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಚುರುಕುಗೊಳಿಸಿ ಮೇ 15 ರೊಳಗೆ ಸಮೀಕ್ಷೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
- ಅಧಿಕಾರಿಗಳಿಗೆ ಡಿಸಿ ಗಂಗಾಧರ ಸ್ವಾಮಿ ಸೂಚನೆ । ಶಾಸನ-ಸ್ಮಾರಕಗಳ ಸಂರಕ್ಷಣೆ ಕುರಿತು ಸಭೆ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲೆಯಾದ್ಯಂತ ಇರುವ ಅಪರೂಪದ ಶಿಲಾಶಾಸನಗಳು, ಹಸ್ತಪ್ರತಿಗಳು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ಗುರುತಿಸಿ, ಅವುಗಳ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಚುರುಕುಗೊಳಿಸಿ ಮೇ 15 ರೊಳಗೆ ಸಮೀಕ್ಷೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿರುವ ಶಾಸನ ಮತ್ತು ಸ್ಮಾರಕಗಳ ಸಂರಕ್ಷಣೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ''''ಜ್ಞಾನ ಭಾರತಂ ಮಿಷನ್'''' ಯೋಜನೆಯಡಿ ರಾಜ್ಯದಾದ್ಯಂತ ಲಭ್ಯವಿರುವ ಅಮೂಲ್ಯ ಹಸ್ತಪ್ರತಿಗಳ ಸಮೀಕ್ಷೆ, ಸಂರಕ್ಷಣೆ ಮತ್ತು ಡಿಜಿಟಲೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶತಮಾನಗಳ ಇತಿಹಾಸವಿರುವ ಹಳೆಯ ಕೈಬರಹದ ಹಸ್ತಪ್ರತಿಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಜ್ಞಾನದ ಸಂಪತ್ತನ್ನು ಹಸ್ತಾಂತರಿಸುವುದು ಈ ಯೋಜನೆ ಮುಖ್ಯ ಉದ್ದೇಶ ಎಂದರು.
ದೇಶಾದ್ಯಂತ ಇರುವ ಹಸ್ತಪ್ರತಿಗಳ ಮಾಹಿತಿಯನ್ನು ಸಂಗ್ರಹಿಸಿ ''''ರಾಷ್ಟ್ರೀಯ ಭಂಡಾರ'''' ನಿರ್ಮಿಸಲಾಗುವುದು. ಕರ್ನಾಟಕದಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಈ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ನೋಡಲ್ ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಸಮಿತಿ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮಿತಿಗಳನ್ನು ರಚಿಸಿ ಯೋಜನೆ ಯಶಸ್ವಿಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಗ್ರಂಥಾಲಯಗಳು, ದೇವಾಲಯಗಳು, ಮಠಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿರುವ ಖಾಸಗಿ ಸಂಗ್ರಹದ ಹಸ್ತಪ್ರತಿಗಳನ್ನು ಗುರುತಿಸಿ ದಾಖಲಿಸುವುದು, ಸಮೀಕ್ಷಾ ತಂಡಗಳಿಗೆ ಅಗತ್ಯ ಸಹಕಾರ ನೀಡುವುದು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಈ ಸಮಿತಿಗಳ ಕರ್ತವ್ಯವಾಗಿದೆ. ರಾಜ್ಯದ ಒಟ್ಟು 17 ಜಿಲ್ಲೆಗಳಲ್ಲಿ ಈಗಾಗಲೇ ಸಮೀಕ್ಷೆ ಆರಂಭವಾಗಿದೆ. ಏಪ್ರಿಲ್ 27ರ ವೇಳೆಗೆ ಸುಮಾರು 2,13,255 ಹಸ್ತಪ್ರತಿಗಳ ಮಾಹಿತಿ ಸಂಗ್ರಹಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಸಹ ಹಸ್ತಪ್ರತಿಗಳ ಮಾಹಿತಿ ಹಂಚಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಈ ಯೋಜನೆ ಮೂಲಕ ರಾಜ್ಯವಾರು ಸಮಗ್ರ ದತ್ತಾಂಶ ಭಂಡಾರ ನಿರ್ಮಾಣವಾಗಲಿದೆ. ಜಿ.ಐ.ಎಸ್. ಆಧಾರಿತ ರಾಷ್ಟ್ರೀಯ ಹಸ್ತಪ್ರತಿ ಸಂಗ್ರಹ ನಕ್ಷೆ ಅಭಿವೃದ್ಧಿಪಡಿಸಲಾಗುವುದು. ಇದರಿಂದ ಅಪರೂಪದ ಮತ್ತು ನಾಶವಾಗುವ ಭೀತಿಯಲ್ಲಿರುವ ಹಸ್ತಪ್ರತಿಗಳನ್ನು ಗುರುತಿಸಿ ಸಂರಕ್ಷಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರು ಮತ್ತು ಸಂಸ್ಥೆಗಳು ತಮ್ಮಲ್ಲಿರುವ ಹಸ್ತಪ್ರತಿಗಳ ಮಾಹಿತಿಯನ್ನು ನೀಡಿ ಈ ರಾಷ್ಟ್ರೀಯ ಕಾರ್ಯಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.
ಸಮೀಕ್ಷಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ಕಡ್ಡಾಯವಾಗಿ ಕ್ಷೇತ್ರ ಕಾರ್ಯ ಕೈಗೊಳ್ಳಬೇಕು. ತಹಸೀಲ್ದಾರ್ ಅಥವಾ ಜಿಲ್ಲಾಮಟ್ಟದ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಈ ಎಲ್ಲ ಸಮೀಕ್ಷಾ ಕಾರ್ಯಗಳನ್ನು ಬರುವ ಮೇ 15ರೊಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು ಎಂದು ಸೂಚನೆ ನೀಡಿದರು.
ಸಮೀಕ್ಷಾ ಕಾರ್ಯದಲ್ಲಿ ಜಿಲ್ಲೆಯಲ್ಲಿ ಹರಿಹರೇಶ್ವರ ದೇವಸ್ಥಾನ, ಪಾಂಡವ ಮಠ, ತಾವರೆಕೆರೆಯ ಶಿಲಾಮಠ, ಚನ್ನಗಿರಿಯ ಎರಡು ಶಿಲಾಮಠ, ಜಗಳೂರಿನ ಪುರಾತನ ಮಠಗಳು, ಹದಡಿ ಮತ್ತು ಅಣಬೇರುವಿನ ಹಳೆಯ ಕೋಟೆಗಳು, ಹೊನ್ನಾಳಿಯ ಹಿರೇಕಲ್ಲು ಮಠ ಹಾಗೂ ಕಲ್ಲೇಶ್ವರ ಮತ್ತು ಭೀಮೇಶ್ವರ ದೇವಸ್ಥಾನಗಳಲ್ಲಿರುವ ಐತಿಹಾಸಿಕ ದಾಖಲೆಗಳನ್ನು ಪರಿಶೀಲಿಸಲು ಸೂಚನೆ ನೀಡಿದರು.
ಜಿಲ್ಲೆಯ ಹಾಗೂ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಇತರ ಮಾಧ್ಯಮಗಳಲ್ಲಿ ಐತಿಹಾಸಿಕ ಸ್ಮಾರಕಗಳ ಚಿತ್ರಗಳನ್ನು ಅಸಭ್ಯವಾಗಿ, ವಿಕೃತವಾಗಿ ಅಥವಾ ದುರುದ್ದೇಶಪೂರಿತವಾಗಿ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಚಟುವಟಿಕೆಗಳು ರಾಷ್ಟ್ರದ ಘನತೆಗೆ ಕುಂದು ತರುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ಮಾರಕಗಳ ಫೋಟೋಗಳನ್ನು ವಿರೂಪಗೊಳಿಸುವುದು ಅಥವಾ ಅವುಗಳನ್ನು ಬಳಸಿ ಸಮಾಜದಲ್ಲಿ ತಪ್ಪು ಸಂದೇಶ ರವಾನಿಸುವ ವ್ಯಕ್ತಿಗಳ ವಿರುದ್ಧ ತಕ್ಷಣವೇ ಎಫ್.ಐ.ಆರ್. ದಾಖಲಿಸಲು ಸೂಚಿಸಲಾಗಿದೆ. ರಾಷ್ಟ್ರೀಯ ಪರಂಪರೆಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಗಳನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗುವುದು. ಸಾರ್ವಜನಿಕರು ಮತ್ತು ಪ್ರವಾಸಿಗರು ಸ್ಮಾರಕಗಳ ಬಳಿ ಫೋಟೋ ತೆಗೆಯುವಾಗ ಆ ಸ್ಥಳದ ಪಾವಿತ್ರ‍್ಯತೆ ಮತ್ತು ಐತಿಹಾಸಿಕ ಮಹತ್ವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂದರು.
ಹವ್ಯಾಸಿ ಸಂಶೋಧಕ ಮತ್ತು ಶಾಸನ ಸಂರಕ್ಷಕ ಹಿ.ಗು.ದುಂಡೇಪ್ಪ ಅವರು ಸಂರಕ್ಷಿಸಿರುವ ತಾಳೆಗರಿಯನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು ಮತ್ತು ತಾಳೆಗರಿಗಳನ್ನು ಸಂರಕ್ಷಣೆ ಮಾಡಲು ಕ್ರಮವಹಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕದ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆ ಎಂಬ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಎಎಸ್‌ಪಿ ಪರಮೇಶ್ವರ ಹೆಗಡೆ, ಮಹಾನಗರ ಪಾಲಿಕೆ ಆಯುಕ್ತೆ ಮತ್ತು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತಾ ಗೌಡರ್, ಸಿಪಿಒ ಮಲ್ಲಾನಾಯಕ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಕಾವ್ಯ, ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು , ಶಾಸನ ಸಂರಕ್ಷಣೆಯ ಸಮಿತಿಯ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.
- - -
-6ಕೆಡಿವಿಜಿ40: ದಾವಣಗೆರೆಯಲ್ಲಿ ಹವ್ಯಾಸಿ ಸಂಶೋಧಕ ಹಿ.ಗು.ದುಂಡೇಪ್ಪ ಸಂರಕ್ಷಿಸಿದ ತಾಳೆಗರಿಯನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ವೀಕ್ಷಿಸಿದರು.
-6ಕೆಡಿವಿಜಿ41: ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಕರ್ನಾಟಕದ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆ ಪೋಸ್ಟರ್ ಬಿಡುಗಡೆ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.