ರಾಣಿಬೆನ್ನೂರು: ನೀತಿ ಸಂಹಿತೆ ಬರುವ ಸನ್ನಿವೇಶ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಡಿಸೆಂಬರ್ 15ರ ಒಳಗಾಗಿ ಟೆಂಡರ್ ಕಾಮಗಾರಿಗಳನ್ನು ಮಾಡಿ ಮುಗಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಹಾಗೂ ತಾಪಂ ಆಡಳಿತಾಧಿಕಾರಿ ಡಾ. ಪುನೀತ್ ಸೂಚನೆ ನೀಡಿದರು.
ಜಿಪಂ ಎಂಜಿನಿಯರಿಂಗ್ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿ ಮಾಹಿತಿ ನೀಡಿದ ನಂತರ ಅವರನ್ನು ತರಾಟೆಗೆ ತೆಗೆದುಕೊಂಡ ಜಿಪಂ ಉಪ ಕಾರ್ಯದರ್ಶಿ ಡಾ.ಪುನೀತ್, ಕೆಲಸ ಮುಕ್ತಾಯ ಹಂತಕ್ಕೆ ಬಂದರೂ ಬೇಗ ಅದನ್ನು ಮುಗಿಸುವ ಕೆಲಸ ಮಾಡಿಲ್ಲ. ಮನೆ ನಿರ್ಮಿಸಿ ಅದರ ಗೃಹ ಪ್ರವೇಶ ಮಾಡದೇ ಹೋದರೆ ಹೇಗೆ ಎಂದು ಪ್ರಶ್ನಿಸಿದರು.
ಎಂಟು ತಿಂಗಳು ಆದರೂ ಗ್ರಾಮ ಪಂಚಾಯಿತಿ ಕಟ್ಟಡದ ಕೆಲಸ ನಿಧಾನಗತಿಯಲ್ಲಿ ಸಾಗಿದೇ ಎಂದರೆ ಹೇಗೆ? ಎಂದು ಡಾ.ಪುನೀತ್ ಅಧಿಕಾರಿಯನ್ನು ಪ್ರಶ್ನಿಸಿದರು.ಇದಕ್ಕೆ ಉತ್ತರ ನೀಡಿದ ಅಧಿಕಾರಿಯು ಗುತ್ತಿಗೆದಾರ ಕೆಲಸ ಮಾಡಿದ ಬಿಲ್ ಹಾಗೆ ಉಳಿದಿದೆ ಎಂದು ಕೆಲಸ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದರು.
ಸಾಮಾನ್ಯ ಸಭೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗೈರಾಗಿದ್ದು ಅವರ ಪರವಾಗಿಯೂ ಯಾರೊಬ್ಬರೂ ಬಾರದಿರುವುದರಿಂದ ಬೇಸರಗೊಂಡ ಡಾ.ಪುನೀತ್ ತಕ್ಷಣ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಸೂಚನೆ ನೀಡಿದರು.
ಜೆಜೆಎಂ (ಜಲಜೀವನ ಜೀವನ ಮೀಷನ್) ಯೋಜನೆಯಡಿ ತಾಲೂಕಿನಲ್ಲಿ ಶೇ.60ರಷ್ಟು ಕಡೆಗೆ ನೀರು ಹೋಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಅಧಿಕಾರಿ ರಾಮಕೃಷ್ಣ ಸಭೆಗೆ ಮಾಹಿತಿ ನೀಡಿದರು.
ಸಭೆಗೆ ಸಂಕ್ಷೀಪ್ತ ಮಾಹಿತಿ ಒದಗಿಸಿದ ಸಹಾಯಕ ಕೃಷಿ ನಿರ್ದೇಶಕಿ ಡಾ. ಶಾಂತಮಣಿ ಅವರನ್ನು ತರಾಟೆಗೆ ತೆಗೆದುಕೊಂಡ ಡಾ. ಪುನೀತ್, ಸಾಮಾನ್ಯ ಸಭೆಗೆ ಮಾಹಿತಿ ಪೂರೈಸಲು ಕೆಲವೊಂದು ಮಾನದಂಡಗಳಿವೆ. ಅದನ್ನು ಎಲ್ಲಾ ಅಧಿಕಾರಿಗಳು ತಪ್ಪದೇ ಪಾಲಿಸಬೇಕು. ಕೃಷಿ ಇಲಾಖೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಿರುತ್ತವೆ. ಅವುಗಳನ್ನು ಮಾಹಿತಿಯಲ್ಲಿ ಉಲ್ಲೇಖಿಸಿ ಅನುದಾನ ಇಲ್ಲದಿದ್ದರೆ ಇಲ್ಲವೆಂದು ಹಾಗೂ ಇದ್ದರೆ ಇದೆಯೆಂದು ತಿಳಿಸಬೇಕು ಎಂದರು.
ತಾಲೂಕಿನಲ್ಲಿ ಮಕ್ಕಳ ಜನನ ಮತ್ತು ಮರಣ ಕುರಿತ ಚರ್ಚೆ ವೇಳೆ ಆರೋಗ್ಯ ಇಲಾಖೆ ಅಧಿಕಾರಿ ನೀಡಿದ ಮಾಹಿತಿ ಗೊಂದಲಮಯವಾಗಿತ್ತು. ತಾಲೂಕಿನಲ್ಲಿ ಬಾಲ ಗರ್ಭೀಣಿ ಪ್ರಕರಣಗಳು ಏಳು ವರದಿಯಾಗಿದ್ದು ಆರು ಮಕ್ಕಳ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.