ಕನ್ನಡಪ್ರಭ ವಾರ್ತೆ ಅಥಣಿ
ಕನ್ನಡ ಸಾಹಿತ್ಯ ಉಗಮವಾಗಿದ್ದೇ ಕವಿತೆಗಳಿಂದ. ಇಂದಿನ ಸಾಮಾಜಿಕ ಪ್ರಜ್ಞೆಯಲ್ಲಿ ಕವನಗಳ ರಚನೆ ಬಹಳ ಅವಶ್ಯಕ ಎಂದು ಮಾತಾಜಿ ಅಕ್ಕಮಹಾದೇವಿ ನುಡಿದರು.ನೆರೆಯ ಮಹಾರಾಷ್ಟ್ರದ ಉಮರಾಣಿ ಗ್ರಾಮದಲ್ಲಿ ಜ್ಞಾನ ಯೋಗಾಶ್ರಮದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಗಡಿನಾಡು ಕನ್ನಡ ಉತ್ಸವದ ಕವಿಗೋಷ್ಠಿ ಹಾಗೂ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕವನ ಸುಮ್ಮನೆ ಹುಟ್ಟುವುದಿಲ್ಲ. ಸಮಾಜದಲ್ಲಿ ಆಗಿಹೋದ ಘಟನೆಗಳ ಅನುಭವದ ಸಾರ ಕವನದಲ್ಲಿರುತ್ತದೆ. ಕಾವ್ಯ ರಚನೆಯಲ್ಲಿ ಕೇವಲ ಕಲ್ಪನೆಗಳಿದ್ದರೇ ಸಾಲದು, ಸಾಮಾಜಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವ ಇರಬೇಕು. ಜೊತೆಗೆ ಕವನ ಆಲಿಸಿದಾಗ ಮನಸ್ಸಿಗೆ ನೆಮ್ಮದಿ ಉಂಟುಮಾಡಲು ಆಧ್ಯಾತ್ಮಿಕ ಚಿಂತನೆಗಳು ಇರಬೇಕು ಎಂದು ತಿಳಿಸಿದರು.
ಸಾಹಿತಿ ಪಿ.ಸಿ.ಕಟ್ಟಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿತೆಗಳ ಮೂಲಕ ತಮ್ಮ ಭಾವನೆಯನ್ನು ಹೊರ ಹಾಕುವವರೇ ಕವಿಗಳು. ನಾನು ಕೂಡ ವಿದ್ಯಾರ್ಥಿ ಜೀವನದಿಂದಲೇ ಕವಿತೆಗಳನ್ನು ರಚಿಸುತ್ತಾ ಬಂದಿದ್ದೇನೆ. ವಿದ್ಯಾರ್ಥಿಗಳು ಕಾಲೇಜು ಜೀವನದಲ್ಲಿ ಕಥೆ, ಕವನಗಳನ್ನು ರಚಿಸಲು ಒಲವು ತೋರಿದ್ದಲ್ಲಿ ಮುಂದೆ ಸಾಮಾಜಿಕ ವೇದಿಕೆಯಲ್ಲಿ ಉತ್ತಮ ಕವಿ ಮತ್ತು ಲೇಖಕರಾಗಿ ಮೂಡಿಬರಲು ಸಾಧ್ಯ.ಕವಿತೆ ಹುಟ್ಟಲು ಜಾಗ, ಪ್ರಕೃತಿ, ಏಕಾಂತ, ನೋವು, ರೋಷ, ಭಾವಾ ಬೇಕಾಗುತ್ತದೆ. ಭಾವನೆಗಳನ್ನು ಬಿತ್ತರಿಸಲು ಕವಿತೆ ಸಾಧನಾ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಯುವ ಕವಿಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಕವಿತೆಗಳನ್ನು ವಾಚನ ಮಾಡುವ ಮೂಲಕ ಗಡಿನಾಡಿನ ಸಾಹಿತ್ಯ, ಕನ್ನಡ ಶಾಲೆಗಳ ಸ್ಥಿತಿಗತಿ, ಗುರುವಿನ ಮಹತ್ವ, ಗಡಿನಾಡಿನ ಅಭಿವೃದ್ಧಿ, ಬರಗಾಲದ ಸನ್ನಿವೇಶ ಸೇರಿದಂತೆ ತಮ್ಮ ಕಲ್ಪನೆಯ ಕವಿತೆಗಳನ್ನು ಸಭಿಕರಿಗೆ ಮನಮುಟ್ಟುವಂತೆ ತಿಳಿಸಿದರು.ಸಮಾರೋಪ ಸಮಾರಂಭದಲ್ಲಿ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಶ್ರೀಶೈಲ ಮಾತನಾಡಿ, ಗಡಿನಾಡು ಕನ್ನಡಿಗರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡ ಮಾಧ್ಯಮ ಕಲಿಯುವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ದೊರಕುತ್ತಿಲ್ಲ. ಕರ್ನಾಟಕ ಸರ್ಕಾರ ಹೊರನಾಡ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಒದಗಿಸಬೇಕು. ಇಲ್ಲಿನ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಮತ್ತು ಶೈಕ್ಷಣಿಕ ಸೌಲಭ್ಯಗಳು ದೊರಕುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಸರ್ಕಾರದ ಮೇಲೆ ಕರ್ನಾಟಕ ಸರ್ಕಾರ ಒತ್ತಡ ತರಬೇಕು. ಕನ್ನಡಿಗರು ಹೆಚ್ಚಾಗಿರುವ ತಾಲೂಕುಗಳ ಅಭಿವೃದ್ಧಿಯಲ್ಲಿ ಮಹಾರಾಷ್ಟ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ಮಹಾರಾಷ್ಟ್ರದ 260 ಕನ್ನಡ ಶಾಲೆಗಳಲ್ಲಿ 2000ಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಮಕ್ಕಳ ಶಿಕ್ಷಣಕ್ಕಾಗಿ ವಿಷಯವಾರು ಶಿಕ್ಷಕರ ಕೊರತೆ ಮತ್ತು ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಗಡಿನಾಡು ಕನ್ನಡ ಸಾಧಕರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು. ಕವನಗಳನ್ನು ವಾಚನ ಮಾಡಿದ ಕವಿಗಳಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಅಣ್ಣಾಸಾಬ ತೆಲಸಂಗ, ಪತ್ರಕರ್ತ ಮಲಗೌಡ ಪಾಟೀಲ, ಸಾಹಿತಿ ಸಂಜಯ ಕುರಣಿ, ಅನಿತಾ ಕಾರಾಜನಗೆ, ಮೀನಾಕ್ಷಿ ಹತ್ತಿ, ದಯಾನಂದ ಪಾಟೀಲ, ಕು.ಶ್ವೇತಾ ಅಂಡಗಿ, ಚೆನ್ನಪ್ಪ ಸುತಾರ, ಮಾಣಿಕ ಪ್ರಭು ಬಡಿಗೇರ ತೀರಿದಂತೆ ಇನ್ನಿತರರು ಉಪಸ್ಥಿತರಿದ್ದರು.